*ಗೋಣಿಕೊಪ್ಪಲು, ಡಿ. 20: ಪೌರತ್ವದ ತಿದ್ದುಪಡಿ ಮಸೂದೆಯ ಭಾಗವಾಗಿ ಯಾವ ಭಾರತೀಯ ಮುಸ್ಲಿಮರು ಭಯಪಡಬೇಕಾದ ಅವಶ್ಯಕತೆ ಇಲ್ಲ ಎಂದು ಕೊಡಗು ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಪ್ರದಾನ ಕಾರ್ಯದರ್ಶಿ ಹಕೀಮ್ ಪಿ.ಎಂ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪೌರತ್ವ ತಿದ್ದುಪಡಿ ಮಸೂದೆ ಇತರ ದೇಶಗಳಿಂದ ಭಾರತಕ್ಕೆ ಅಕ್ರಮವಾಗಿ ವಲಸೆ ಬಂದಿರುವ ಪಾಕಿಸ್ತಾನಿ ಬಾಂಗ್ಲಾದೇಶಿಯವರಿಗೆ ಪರಿಣಾಮವೇ ಹೊರತು ಭಾರತೀಯ ಮುಸ್ಲಿಮರಿಗೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕೆಲವರು ಈ ವಿಚಾರವಾಗಿ ಉದ್ದೇಶಿತ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಇದರಿಂದ ಭಾರತೀಯ ಮುಸ್ಲಿಂ ಸಮುದಾಯದವರು ಆತಂಕ ಪಡುವ ಅಗತ್ಯವಿಲ್ಲ. ಕೇಂದ್ರ ಸರ್ಕಾರಕ್ಕೆ ಭಾರತೀಯ ಮುಸ್ಲಿಮರನ್ನು ಹೊರಹಾಕುವ ಯಾವುದೇ ಉದ್ದೇಶವಿಲ್ಲ ಎಂದು ಹೇಳಿದ್ದಾರೆ. ಪೌರತ್ವ ತಿದ್ದುಪಡಿ ಮಸೂದೆ ದೇಶದ ಪ್ರಗತಿಗೆ ಅನಿವಾರ್ಯ. ಮುಸ್ಲಿಮರಾದ ನಾವು ಭಾರತದಲ್ಲೇ ಹುಟ್ಟಿ ಭಾರತದಲ್ಲೇ ಮಡಿಯಬೇಕಾದವರು. ನಾವು ಈ ದೇಶದಲ್ಲಿ ಅನುಭವಿಸುತ್ತಿರುವ ನೀರು ಗಾಳಿ ಅನ್ನ ಎಲ್ಲವೂ ಈ ದೇಶದ ಋಣವಾಗಿದೆ. ಪ್ರತಿಭಟನೆ ಮಾಡುವವರು ವಿಷಯದ ಗಂಭೀರತೆಯನ್ನು ಮೊದಲು ತಿಳಿದುಕೊಳ್ಳಲಿ ರಾಜಕೀಯ ತಂತ್ರಕ್ಕೆ ಸಾಮಾನ್ಯ ಪ್ರಜೆಗಳನ್ನು ಬಲಿಪಡಿಸುವುದು ಬೇಡ ಎಂದರು.
ಹಿಂದೂ ಮುಸ್ಲಿಂ ಸಮುದಾಯಗಳ ನಡುವೆ ಬೆಂಕಿ ಹಚ್ಚುವವರಿಗೆ ಅವಕಾಶವನ್ನು ನೀಡಬೇಡಿ. ಯಾವ ನೈಜ ಹಿಂದೂವಿನಲ್ಲಿ ಕೂಡ ಭಾರತೀಯ ಮುಸ್ಲಿಮರನ್ನು ಭಾರತದಿಂದ ಕಳಿಸಬೇಕು ಎಂಬ ಉದ್ದೇಶ ಇರುವುದಿಲ್ಲ. ಹಿಂದೂ, ಮುಸ್ಲಿಂ, ಕ್ರೈಸ್ತ, ಬುದ್ಧ, ಜೈನ ಈ ಎಲ್ಲಾ ಧರ್ಮ ಪಂಗಡ ಸೇರಿ ಬಾಳುವಾಗ ಮಾತ್ರ ಈ ಸುಂದರ ಭಾರತವನ್ನು ಕಟ್ಟಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.