ಸಿದ್ದಾಪುರ, ಡಿ.20 : ಕಾಡಾನೆಯೊಂದು ಅನಾರೋಗ್ಯದಿಂದ ಕಾಫಿ ತೋಟದಲ್ಲಿ ಬಿದ್ದಿದ್ದು ಜೀವನ್ಮರಣ ಹೋರಾಟದೊಂದಿಗೆ ಚಿಂತಾಜನಕ ಸ್ಥಿತಿಯಲ್ಲಿದೆ. ಕಳೆದೆರಡು ದಿನಗಳಿಂದ ತ್ಯಾಗತ್ತೂರು ಗ್ರಾಮದ ಎನ್.ಟಿ. ಪೊನ್ನಪ್ಪ ಎಂಬವರ ಕಾಫಿ ತೋಟದಲ್ಲಿ ಕಾಡಾನೆಯೊಂದು ಅನಾರೋಗ್ಯದಿಂದ ಕುಸಿದು ಬಿದ್ದಿತ್ತು. ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಅರಣ್ಯ ಇಲಾಖೆ ವತಿಯಿಂದ ವನ್ಯ ಜೀವಿ ವೈದ್ಯಾಧಿಕಾರಿ ಡಾ. ಮುಜೀಬ್ ರವರನ್ನು ಕರೆ ತರಲಾಯಿತು. ನಂತರ ಜೀವನ್ಮರಣ ಸ್ಥಿತಿಯಲ್ಲಿದ್ದ ಕಾಡಾನೆಗೆ ಚಿಕಿತ್ಸೆಯನ್ನು ವೈದ್ಯಾಧಿಕಾರಿಗಳು ನೀಡಿದರು. ಆದರೆ ಚಿಕಿತ್ಸೆಗೆ ಯಾವುದೇ ರೀತಿಯಲ್ಲಿ ಕಾಡಾನೆಯು ಸ್ಪಂದಿಸದೇ ಆಹಾರವನ್ನು ಸೇವಿಸದೇ ಬಿದ್ದ ಜಾಗದಿಂದ ಮೇಲೇಳಲು ಸಾಧ್ಯವಾಗದೇ ನರಳಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಗುರುವಾರದಂದು ರಾತ್ರಿವರೆಗೂ ಚಿಕಿತ್ಸೆಯನ್ನು ನೀಡಲಾಯಿತು. ಅಲ್ಲದೇ ನೆಲಕ್ಕೆ ಬಿದ್ದಿದ್ದ ಕಾಡಾನೆಯನ್ನು ಮೇಲಕ್ಕೆತ್ತಲು ದುಬಾರೆ ಸಾಕಾನೆ ಶಿಬಿರದಿಂದ ಐದು ಸಾಕಾನೆಗಳನ್ನು ಕರೆತರಲಾಯಿತು. ಸಾಕಾನೆಗಳು ಬಿದ್ದಿದ್ದ ಕಾಡಾನೆಯನ್ನು ಮೇಲಕ್ಕೆತ್ತಲು ಸಾಕಷ್ಟು ಬಾರಿ ಪ್ರಯತ್ನಿಸಿದರೂ ಆನೆ ಮಾತ್ರ ಮೇಲಕ್ಕೇಳಲು ಸಾಧ್ಯವಾಗಲಿಲ್ಲ. ನಂತರ ಸಾಕಾನೆಗಳು ಮರಳಿ ದುಬಾರೆಗೆ ತೆರಳಿದವು. ಇದೀಗ ಸಂಪೂರ್ಣ ನಿತ್ರಾಣಗೊಂಡು ಬಳಲಿರುವ ಹೆಣ್ಣು ಕಾಡಾನೆಯು ಚಿಂತಾಜನಕ ಸ್ಥಿತಿಯಲ್ಲಿದೆ. ಶುಕ್ರವಾರದಂದು ಕೂಡಾ ಡಾ. ಮುಜೀಬ್ ಚಿಕಿತ್ಸೆ ಹಾಗೂ ಗ್ಲೂಕೋಸ್ ನೀಡಿದರೂ ಕೂಡಾ ಕಾಡಾನೆಯು ಚೇತರಿಕೆಯಾಗದೇ ಗಂಭೀರ ಸ್ಥಿತಿಯಲ್ಲಿದೆ.

- ವರದಿ: ವಾಸು ಎ.ಎನ್