ಮಡಿಕೇರಿ, ಡಿ.19 : ರಾಷ್ಟ್ರದ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಕೆಲ ರಾಜಕೀಯ ಪಕ್ಷಗಳು, ಸಂಘಟನೆಗಳು ಸಮಾಜದ ಶಾಂತಿ ಸುವ್ಯವಸ್ಥೆಗಳಿಗೆ ದಕ್ಕೆ ತರುತ್ತಿದ್ದು, ಇದನ್ನು ಖಂಡಿಸುವುದಾಗಿ ರಾಜ್ಯ ಬಿಜೆಪಿ ಕಾರ್ಯದರ್ಶಿ ಅಪ್ಪಚಟ್ಟೋಳಂಡ ಮನು ಮುತ್ತಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರದ ಹಿತಕ್ಕಾಗಿ ರೂಪಿಸಿರುವ ಪೌರತ್ವ ಕಾಯ್ದೆ ವಿರೋಧಿಸುತ್ತಿರುವುದು ಕೂಡ ದೇಶ ದ್ರೋಹಕ್ಕೆ ಸಮವೆಂದರು. ದೇಶದ ಭದ್ರತೆಯ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪೌರತ್ವ ಕಾಯ್ದೆಯನ್ನು ಮಂಡಿಸಿದ್ದು, ಇಂತಹ ಕಾಯ್ದೆಯನ್ನು ವಿರೋಧಿಸು ತ್ತಿರುವುದು ದುರಂತವೆಂದು ವಿಶ್ಲೇಷಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಕೆಲವು ಪಕ್ಷಗಳು ಮತ್ತು ಸಂಘಟನೆಗಳು ತಪ್ಪು ಮಾಹಿತಿಯನ್ನು ನೀಡಿ ಜನರನ್ನು ಹಾದಿ ತಪ್ಪಿಸಲು ಯತ್ನಿಸುತ್ತಿದ್ದಾರೆ. ವಿಪಕ್ಷ ಕಾಂಗ್ರೆಸ್ ಕೂಡ ರಾಜಕೀಯ ಲಾಭದ ಹುನ್ನಾರ ರೂಪಿಸುವುದರೊಂದಿಗೆ ಕಮ್ಯುನಿಸ್ಟ್ ಪಕ್ಷದೊಂದಿಗೆ ಕೈಜೋಡಿಸುತ್ತಿರುವ ಕ್ರಮ ಎಷ್ಟು ಸರಿ ಎಂದು ಪ್ರಶ್ನಿಸಿದರು. ಕೇಂದ್ರ ಜಾರಿಗೆ ತಂದ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಭಾರತೀಯ ಮುಸ್ಲಿಮರಿಗೆ ಯಾವುದೇ ಸಂಕಷ್ಟಗಳು ಎದುರಾಗುವುದಿಲ್ಲ. ಅಕ್ರಮ ನುಸುಳುಕೋರರಿಗೆ ಮಾತ್ರ ಇದು ಅನ್ವಯವಾಗುತ್ತದೆಂದು ಮನು ಮುತ್ತಪ್ಪ ಸ್ಪಷ್ಟಪಡಿಸಿದರು.

ನೆರೆಯ ಪಾಕಿಸ್ತಾನ, ಬಾಂಗ್ಲಾ ಮತ್ತು ಅಫ್ಘಾನಿಸ್ತಾನದ ಸುಮಾರು 2 ಕೋಟಿ ಅಕ್ರಮ ವಲಸಿಗರು ಭಾರತಲ್ಲಿದ್ದಾರೆ. ವಿದೇಶಗಳ ಮುಸ್ಲಿಂ ಸಮುದಾಯ ಹೊರತುಪಡಿಸಿ ಇತರ ಸಮುದಾಯಗಳಿಗೆ ಪೌರತ್ವ ನೀಡಲು ಕಾರಣಗಳಿದೆ. ಘೋಷಿತ ಮುಸ್ಲಿಂ ರಾಷ್ಟ್ರಗಳಲ್ಲಿ ಹಿಂದೂಗಳಿಗೆ ಸೂಕ್ತ ಭದ್ರತೆ ಇಲ್ಲ. ನಿರಂತರ ದೌರ್ಜನ್ಯ, ಕಿರುಕುಳ, ಅತ್ಯಾಚಾರ ಹಿಂದೂಗಳ ಮೇಲಾಗುತ್ತಿದೆಯೆಂದು ತಿಳಿಸಿ, ಭಯೋತ್ಪಾದÀನೆ ಮಟ್ಟಹಾಕಲು ಈ ಕಾಯ್ದೆ ಸಹಕಾರಿಯಾಗಲಿದ್ದು, ದೇಶದ ಮುಸ್ಲಿಮರಿಗೆ ಸರ್ಕಾರದ ಎಲ್ಲಾ ಸವಲತ್ತು, ಮಾನ್ಯತೆ, ಮೀಸಲಾತಿಗಳು ದೊರಕಲಿದೆ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ ಭಾರತೀಶ್ ಮಾತನಾಡಿ, ಇಡೀ ವಿಶ್ವಕ್ಕೆ ಭಾರತ ಮಾತೃ ಸ್ಥಾನದಲ್ಲಿದೆ. ದೇಶದಲ್ಲಿ ಸಂಘರ್ಷ ಸೃಷ್ಟಿಸಲು ಕೆಲ ಸಂಘಟನೆ ಮತ್ತು ಪಕ್ಷಗಳು ಕಾರಣವಾಗಿದೆ. ಕಾಯ್ದೆ ವಿರೋಧಿಸುವವರು ಅದರ ಬಗ್ಗೆ ಕನಿಷ್ಟ ತಿಳುವಳಿಕೆ ಇಲ್ಲದೆ ಅನಗತ್ಯವಾಗಿ ಗೊಂದಲ ಸೃಷ್ಟಿಸಿ ಸಮಾಜದ ಸ್ವಾಸ್ಥ್ಯವನ್ನು ಹದಗೆಡಿಸುತ್ತಿ ದ್ದಾರೆಂದು ಆರೋಪಿಸಿದರು.

ಪೌರತ್ವ ಕಾಯ್ದೆಯನ್ನು ವಿರೋಧಿಸುತ್ತಿರುವ ಪಕ್ಷಗಳು ಮತ್ತು ಸಂಘÀಟನೆಗಳು ಆತ್ಮಾವಲೋಕನ ಮಾಡಿಕೊಳ್ಳುವ ಅನಿವಾರ್ಯತೆ ಇದೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ವಕ್ತಾರ ರವಿ ಕಾಳಪ್ಪ, ಪ್ರಧಾನ ಕಾರ್ಯದರ್ಶಿ ರವಿ ಬಸಪ್ಪ ಹಾಗೂ ಪ್ರಮುಖರಾದ ಮಹೇಶ್ ಜೈನಿ ಉಪಸ್ಥಿತರಿದ್ದರು.