ಸೋಮವಾರಪೇಟೆ, ಡಿ.19: ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರಿನಲ್ಲಿ ಹಸುವಿನ ಮೇಲೆ ಚಿರತೆ ಧಾಳಿ ನಡೆಸಿರುವ ಘಟನೆ ವರದಿಯಾಗಿದ್ದು, ಹಸು ಪ್ರಾಣಾಪಾಯದಿಂದ ಪಾರಾಗಿದೆ.
ಗ್ರಾಮದ ಅಮೆಮನೆ ನಾರಾಯಣಪ್ಪ ಅವರಿಗೆ ಸೇರಿದ ಹಸುವನ್ನು ಅರಣ್ಯದ ಅಂಚಿನಲ್ಲಿ ಮೇಯಲು ಬಿಟ್ಟಿದ್ದು, ಈ ಸಂದರ್ಭ ಚಿರತೆ ಧಾಳಿ ನಡೆಸಿದೆ. ಪರಿಣಾಮ ಹಸುವಿಗೆÉ ಗಾಯಗಳಾಗಿದ್ದು, ಮಾಲೀಕರ ಮನೆಯತ್ತ ಓಡಿ ಬಂದಿದೆ.
ಈ ಹಸುವಿನೊಂದಿಗೆ ಇನ್ನೂ ಮೂರು ಕರುಗಳು ಅರಣ್ಯದೊಳಗೆ ಮೇಯಲು ತೆರಳಿದ್ದು, ಸಂಜೆಯಾದರೂ ವಾಪಸ್ ಬಂದಿಲ್ಲ. ಅವುಗಳ ಮೇಲೂ ಚಿರತೆ ಧಾಳಿ ನಡೆಸಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ. ನಿನ್ನೆಯಷ್ಟೇ ಕಾಜೂರು ಗ್ರಾಮದ ದುರ್ಗಾ ಎಸ್ಟೇಟ್ನಲ್ಲಿ ಕರುವಿನ ಕಳೇಬರ ಪತ್ತೆಯಾಗಿತ್ತು.
ಕಾಜೂರು ವ್ಯಾಪ್ತಿಯ ಅರಣ್ಯದಲ್ಲಿ ಚಿರತೆ ಬೀಡುಬಿಟ್ಟಿರುವ ಬಗ್ಗೆ ಈ ಹಿಂದೆಯೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ; ಯಾವದೇ ಕ್ರಮ ಕೈಗೊಂಡಿಲ್ಲ. ಇದೀಗ ಜಾನುವಾರುಗಳ ಮೇಲೆ ಚಿರತೆ ಧಾಳಿ ನಡೆಸುತ್ತಿರುವದರಿಂದ ನಡೆದಾಡಲೂ ಸಹ ಭಯಪಡುವಂತಾಗಿದೆ. ತಕ್ಷಣ ಚಿರತೆಯ ಸೆರೆಗೆ ಅರಣ್ಯ ಇಲಾಖೆ ಮುಂದಾಗಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.