ಮಡಿಕೇರಿ, ಡಿ. 18: ಕೇಂದ್ರದ ಬಿಜೆಪಿ ಸರ್ಕಾರ ತನ್ನ ಗುಪ್ತ ಕಾರ್ಯಸೂಚಿಗಳನ್ನು ಹಂತ ಹಂತವಾಗಿ ಜಾರಿಗೊಳಿಸುವುದರ ಭಾಗವಾಗಿ ಪೌರತ್ವ ನೋಂದಣಿ (ಎನ್‍ಆರ್‍ಸಿ) ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಬಿ) ಜಾರಿಗೊಳಿಸಿದ್ದು, ಇದನ್ನು ಕಾಂಗ್ರೆಸ್ ತೀವ್ರವಾಗಿ ವಿರೋಧಿಸುತ್ತದಲ್ಲದೆ, ಇದರ ವಿರುದ್ಧ ಉಗ್ರ ಹೋರಾಟಕ್ಕೆ ರೂಪುರೇಷೆ ಸಿದ್ದಪಡಿಸಿರುವುದಾಗಿ ಜಿಲ್ಲಾ ಕಾಂಗ್ರೆಸ್ ವಕ್ತಾರರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್‍ನ ಐವರು ವಕ್ತಾರರ ಪರವಾಗಿ ಮಾತನಾಡಿದ ವಿ.ಪಿ. ಶಶಿಧರ್, ಶೀಘ್ರದಲ್ಲೆ ಪಕ್ಷದ ಎಲ್ಲಾ ಘಟಕಗಳ ಪ್ರಮುಖರೊಂದಿಗೆ ಸಭೆ ನಡೆಸಿ, ಕೇಂದ್ರದ ಧೋರಣೆಗಳ ಬಗ್ಗೆ ವಿಸ್ತøತವಾದ ಚರ್ಚೆ ನಡೆಸಿ ಹೋರಾಟಕ್ಕೆ ಸಜ್ಜಾಗಲಿರುವುದಾಗಿ ತಿಳಿಸಿದರು.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ತನ್ನ ರಹಸ್ಯ ಕಾರ್ಯ ಸೂಚಿಗಳನ್ನು ಭಂಡತನದಿಂದ ಇಲ್ಲಿಯವರೆಗೆ ಜಾರಿಗೊಳಿಸುತ್ತಲೆ ಬಂದಿದ್ದು, ಇದಕ್ಕೆ ಪ್ರತಿಪಕ್ಷವಾಗಿ ಕಾಂಗ್ರೆಸ್ ವಿರೋಧವನ್ನು ವ್ಯಕ್ತಪಡಿಸುತ್ತಲೆ ಬಂದಿತ್ತು. ಇದೀಗ ಬಿಜೆಪಿ ತನ್ನ ಸರ್ವಾಧಿಕಾರ ಧೋರಣೆಯನ್ನು ಪೌರತ್ವ ತಿದ್ದುಪಡಿಸಿ ಕಾಯ್ದೆಯ ಜಾರಿಯೊಂದಿಗೆ ಬಹಿರಂಗವಾಗಿ ತೋರ್ಪಡಿಸಿದೆ. ಈ ಹಿನ್ನೆಲೆ ಇದನ್ನು ಕಾಂಗ್ರೆಸ್ ರಾಷ್ಟ್ರವ್ಯಾಪಿ ತೀವ್ರ ಸ್ವರೂಪದಲ್ಲಿ ವಿರೋಧಿಸುತ್ತಿರುವುದಾಗಿ ಹೇಳಿದರು.

ಕೇಂದ್ರದ ಬಿಜೆಪಿ ಸರ್ಕಾರವು ತಾನು ಹಿಂದೂಗಳ ಸಂರಕ್ಷಕನೆಂದು ಬಿಂಬಿಸಿಕೊಳ್ಳುವ ಸಲುವಾಗಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಿದೆ. ಇದರೊಂದಿಗೆ ಧರ್ಮ ಆಧಾರಿತವಾಗಿ ಪೌರತ್ವ ನೋಂದಣಿಗೂ ಮುಂದಾಗಿದ್ದು, ಇದು ಅಲ್ಪಸಂಖ್ಯಾತರಲ್ಲಿ ಆತಂಕವನ್ನು ಸೃಷ್ಟಿಸಿದೆಯೆಂದು ಆರೋಪಿಸಿದರು.

ಯಾವುದೇ ಸರ್ಕಾರಗಳು ಆಡಳಿತ ಮತ್ತು ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಯ್ದೆ ಕಾನೂನುಗಳನ್ನು ರೂಪಿಸಬೇಕಾಗು ತ್ತದೆ. ಆದರೆ, ಕೇಂದ್ರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಇದಕ್ಕೆ ಅವಕಾಶ ನೀಡದೆ, ಸರ್ವಾಧಿಕಾರಿ ಗಳಂತೆ ತಮ್ಮ ರಹಸ್ಯ ಕಾರ್ಯ ಸೂಚಿಗಳನ್ನು ಅನುಷ್ಟಾನಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಅತ್ಯಂತ ವಿಶಿಷ್ಟವಾದ ಬುಡಕಟ್ಟು ಸಮುದಾಯ ಮತ್ತು ಸಂಸ್ಕøತಿಯನ್ನು ಹೊಂದಿರುವ ಕಾಶ್ಮೀರದ ವಿಶೇಷ ಸ್ಥಾನಮಾನಗಳನ್ನು ತೆಗೆದು ಹಾಕಿರುವುದು, ತ್ರಿವಳಿ ತಲಾಖ್ ರದ್ದುಗೊಳಿಸಿರುವುದು ಸೇರಿದಂತೆ ವಿವಿಧ ಕಾಯ್ದೆಗಳನ್ನು ರೂಪಿಸುತ್ತಿರು ವುದು ಇದರ ಭಾಗವಾಗಿದೆಯೆಂದು ಆರೋಪಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರ ನೆರವಂಡ ಉಮೇಶ್, ಟಾಟು ಮೊಣ್ಣಪ್ಪ, ಎಸ್.ಐ. ಮುನೀರ್ ಅಹಮ್ಮದ್, ಟಿ.ಈ. ಸುರೇಶ್ ಉಪಸ್ಥಿತರಿದ್ದರು.