ವೀರಾಜಪೇಟೆ, ಡಿ. 18: ಇಂದಿರಾ ಕ್ಯಾಂಟಿನ್, ವೀರಾಜಪೇಟೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿರುವ ಕಡು ಬಡವರು, ಕಾರ್ಮಿಕರು, ದಲಿತ ವರ್ಗಗಳಿಗೆ ಅಗ್ಗದ ದರದಲ್ಲಿ ಉಪಹಾರ, ಊಟ ನೀಡುವುದರಿಂದ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಎಲ್ಲ್ಲಾ ವರ್ಗಗಳಿಗೆ ಇದರಿಂದ ಒಳಿತಾಗಲಿದೆ. ಪ್ರತಿಯೊಬ್ಬರು ಇದರ ಸದ್ಭಳಕೆ ಮಾಡಿ ಕೊಳ್ಳುವಂತಾಗಲಿ ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಹೇಳಿದರು.ವೀರಾಜಪೇಟೆ ಪಟ್ಟಣ ಪಂಚಾಯಿತಿ ಉಸ್ತುವಾರಿಯಲ್ಲಿ ಇಂದು ಇಲ್ಲಿನ ಗೋಣಿಕೊಪ್ಪ ರಸ್ತೆಯ ಸಾರಿಗೆ ಸಂಸ್ಥೆ ಬಸ್ಸು ನಿಲ್ದಾಣದ ಮುಂಭಾಗದಲ್ಲಿ ನಿರ್ಮಿಸಲಾದ ಹೊಸ ಕಟ್ಟಡದಲ್ಲಿ ಇಂದಿರಾ ಕ್ಯಾಂಟೀನನ್ನು ಉದ್ಘಾಟಿಸಿದ ವೀಣಾ ಅಚ್ಚಯ್ಯ ಅವರು ಹಿಂದಿನ ಸಿದ್ಧರಾಮಯ್ಯ ಅವರ ಸರಕಾರದಲ್ಲಿ ಮೂರು ವರ್ಷಗಳ ಹಿಂದೆಯೇ ಈ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಕಾರ್ಯ ರೂಪಕ್ಕೆ ತರಲಾಯಿತು. ರಾಜಕೀಯವಾಗಿ ದ್ವೇಷ ಸಾಧಿಸಲು ಈಗಿನ ಸರಕಾರದ ಕೆಲವರು ಕ್ಯಾಂಟಿನ್ ಹೆಸರನ್ನು ಬದಲಾಯಿಸಲು ಹೊರಟಿರುವುದು ಸರಿಯಲ್ಲ. ಇಂದಿರಾ ಗಾಂಧಿ ಮಾಜಿ ಪ್ರಧಾನಿಯಾಗಿದ್ದು, ಉಕ್ಕಿನ ಮಹಿಳೆ ಎಂಬ ಹೆಸರಿದೆ. ಈ ಕ್ಯಾಂಟಿನ್ನ ಹೆಸರನ್ನು ರಾಜಕೀಯ ರಹಿತವಾಗಿ ಎಲ್ಲರೂ ಉಳಿಸ ಬೇಕಾಗಿದೆ. ಕ್ಯಾಂಟೀನ್ ಹೆಸರಿನ ಬದಲಾವಣೆಗೆ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರ ಆಕ್ಷೇಪಣೆ ಇದೆ ಎಂದರು.ಸಮಾರಂಭದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಮನೆಯಪಂಡ ಕೆ.ದೇಚಮ್ಮ, ಪಟ್ಟಡ ರಂಜಿ ಪೂಣಚ್ಚ, ಎಸ್.ಎಚ್.ಮತೀನ್, ಡಿ.ಪಿ.ರಾಜೇಶ್, ಮಹಮ್ಮದ್ ರಾಫಿ, ತಬ್ಸಮ್, ಬೆನ್ನಿ ಆಗಸ್ಟೀನ್, ವಿ.ಆರ್.ರಜನಿಕಾಂತ್, ಜಲೀಲ್, ಮುಖ್ಯಾಧಿಕಾರಿ ಶ್ರೀಧರ್, ಕಿರಿಯ ಅಭಿಯಂತರ ಎನ್.ಪಿ. ಹೇಮ್ ಕುಮಾರ್, ಚೆಸ್ಕಾಂನ ಸಹಾಯಕ ಅಭಿಯಂತರ ಸುರೇಶ್, ಕಿರಿಯ ಅಭಿಯಂತರ ಶಿವರಾಜ್ ಪಾಟೀಲ್, ಕೊಡವ ಸಮಾಜದ ಅಧ್ಯಕ್ಷ ವಾಂಚೀರ ನಾಣಯ್ಯ ಮತ್ತಿತರರು ಹಾಜರಿದ್ದರು.