ಮಡಿಕೇರಿ, ಡಿ. 18: ದಿನದ 24 ಗಂಟೆ ಖಾಕಿ ಧರಿಸಿ, ಲಾಠಿ - ಬಂದೂಕು ಹಿಡಿದು ಸಮಾಜ, ಸಾರ್ವಜನಿಕ ಆಸ್ತಿ-ಪಾಸ್ತಿ ರಕ್ಷಣೆಯ ನಿಟ್ಟಿನಲ್ಲಿ ಸದಾ ಒತ್ತಡಿದಲ್ಲಿರುವ ಪೊಲೀಸರು ತಮ್ಮ ಒತ್ತಡ, ದುಗುಡಗಳನ್ನು ಬದಿಗಿಟ್ಟು ಆಟವಾಡಿ, ನಲಿದಾಡಿ ಸಂಭ್ರಮಿಸಿದರು. ಕರ್ತವ್ಯದಲ್ಲಿರುವಾಗ ಹಿರಿಯ ಅಧಿಕಾರಿಗಳನ್ನು ಕಂಡರೆ ನೆಟ್ಟಗೆ ನಿಂತು ಸಲ್ಯೂಟ್ ಹೊಡೆಯುತ್ತಿದ್ದ ಸಿಬ್ಬಂದಿಗಳು ಹಿರಿಯ ಅಧಿಕಾರಿಗಳೊಂದಿಗೆ ಆತ್ಮೀಯವಾಗಿ ಬೆರೆತರು. ಹಿರಿಯ ಅಧಿಕಾರಿಗಳು ಕೂಡ ತಮ್ಮ ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡುತ್ತಾ, ಹುರಿದುಂಬಿಸುತ್ತಾ ಗೆಳೆಯರಂತೆ ಕಾಲ ಕಳೆದರು. ಹುದ್ದೆ, ಅಧಿಕಾರ ಮರೆತು ಎಲ್ಲರೂ ಒಂದೇ ಭಾವನೆಯಿಂದ ಮೈದಾನವಿಡೀ ಓಡಾಡಿದರು.ಇದು ಕಂಡು ಬಂದಿದ್ದು ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಕವಾಯಿತು ಮೈದಾನದಲ್ಲಿ ಏರ್ಪಡಿಸಿದ್ದ ಪೊಲೀಸ್ ಕ್ರೀಡಾಕೂಟದಲ್ಲಿ ಪೊಲೀಸರು ಸಂಭ್ರಮದಿಂದ ಪಾಲ್ಗೊಂಡಿದ್ದರು.ಮೈದಾನದ ಟ್ರ್ಯಾಕ್‍ನಲ್ಲಿ ಓಡಿದರು..., ಹಾರಿದರು..., ಗುಂಡು ಎಸೆದರು..., ಗಾಳಿಯಲ್ಲಿ ಚೆಂಡಿನೊಂದಿಗೆ ಗುದ್ದಾಡಿದರು..., ಕ್ರಿಕೆಟ್ ಕೂಡ ಆಡಿ ಗೆದ್ದು ಖುಷಿ ಪಟ್ಟರು. ಮಹಿಳೆಯರೂ ಕೂಡಾ ತಾವೇನು ಕಡಿಮೆ ಎಂಬಂತೆ ತಮ್ಮ ಸಾಮಥ್ರ್ಯ ಪ್ರದರ್ಶಿಸಿದರು. ಠಾಣಾಧಿಕಾರಿಗಳಿಗಿಂತ ಮೇಲ್ಪಟ್ಟ ಹಿರಿಯ ಶ್ರೇಣಿಯ ಅಧಿಕಾರಿಗಳೂ ಕೂಡ ಆಟೋಟಗಳಲ್ಲಿ ತೊಡಗಿಸಿ ಕೊಂಡರು. ಕ್ರೀಡಾಕೂಟ ಶುಕ್ರವಾರ ದವರೆಗೆ ನಡೆಯಲಿದ್ದು, ಅಂದು ಸಂಜೆ ಸಮಾರೋಪಗೊಳ್ಳಲಿದೆ.ಶ್ರಮದಿಂದ ಯಶಸ್ಸು : ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಿನ ಶ್ರಮ ವಹಿಸಿದ್ದಲ್ಲಿ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ. ಆ ನಿಟ್ಟಿನಲ್ಲಿ ಪ್ರಯತ್ನ ಪಡುವಂತಾಗಬೇಕು ಎಂದು ಅಂತರರಾಷ್ಟ್ರೀಯ ಹಾಕಿಪಟು ಎಸ್.ವಿ. ಸುನಿಲ್ ಆಚಾರ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು ಕ್ರೀಡೆ, ಕೃಷಿ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ, ವಾಣಿಜ್ಯ ಹೀಗೆ ವಿವಿಧ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ, ಶ್ರದ್ಧೆ ಮತ್ತು ಪರಿಶ್ರಮದಿಂದ ತೊಡಗಿಸಿಕೊಂಡಲ್ಲಿ ಯಶಸ್ಸು ಗಳಿಸಬಹುದು ಎಂದು ಅವರು ಸಲಹೆ ಮಾಡಿದರು.
ಪೊಲೀಸರು ದಿನದ 24 ಗಂಟೆಯೂ ಸಮಾಜದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಲು ಶ್ರಮಿಸುತ್ತಾರೆ. ಇವರ ಸೇವೆ ಶ್ಲಾಘನೀಯ. ಪೊಲೀಸರ ಕರ್ತವ್ಯ ನಿಷ್ಠೆ ಮತ್ತು
(ಮೊದಲ ಪುಟದಿಂದ) ಜೊತೆಗೆ ಬಿಡುವು ಮಾಡಿಕೊಂಡು ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳು ತ್ತಿರುವುದು ವಿಶೇಷವಾಗಿದೆ ಎಂದು ಅವರು ಹೇಳಿದರು.
ನನ್ನ ಕ್ರೀಡಾ ಜೀವನದಲ್ಲಿ ಸೋಮವಾರಪೇಟೆಯ ಹಾಕಿ ತಂಡದವರ ಸಹಕಾರ ಮರೆಯಲು ಸಾಧ್ಯವಿಲ್ಲ. ಕೊಡಗಿನ ಜನರು ಪ್ರೀತಿ ತೋರಿಸಿದ್ದಾರೆ. ಇದರಿಂದ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು. ಕ್ರೀಡೆಯೇ ನನ್ನ ಜೀವನವಾಗಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಒಲಿಂಪಿಕ್ಸ್‍ನಲ್ಲಿ ಭಾಗವಹಿಸಿ ದೇಶಕ್ಕೆ ಕೀರ್ತಿ ತರಬೇಕು ಎಂಬ ಉದ್ದೇಶವಿದೆ. ಆ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆಣ್ಣೇಕರ್ ಮಾತನಾಡಿ ಪೊಲೀಸರು ವೈಯಕ್ತಿಕ ಬದುಕು ಬದಿಗೊತ್ತಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಕಾನೂನು ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಾರೆ. ಪೊಲೀಸರ ಕರ್ತವ್ಯ ನಿಷ್ಠೆ, ಸಮಯ ಪ್ರಜ್ಞೆ, ಹಾಗೂ ಕಾರ್ಯ ವೈಖರಿ ಶ್ಲಾಘನೀಯ ಎಂದರು.
ದಿನನಿತ್ಯದ ಕರ್ತವ್ಯದ ಒತ್ತಡವನ್ನು ಮರೆತು ಮಾನಸಿಕ ಹಾಗೂ ದೈಹಿಕವಾಗಿ ಸದೃಢ ರಾಗಿರಲು ಕ್ರೀಡೆ ಸಹಕಾರಿಯಾಗಿದ್ದು, ಆ ನಿಟ್ಟಿನಲ್ಲಿ ಕ್ರೀಡಾ ಚಟುವಟಿಕೆ ಆಯೋಜಿಸ ಲಾಗಿದೆ ಎಂದರು.
ನಿವೃತ್ತ ಪೊಲೀಸ್ ಅಧೀಕ್ಷಕ ಪೂಣಚ್ಚ, ರವಿರಾಜ್, ಮೇಜರ್ (ನಿವೃತ್ತ) ನಂಜಪ್ಪ, ನಿವೃತ್ತ ಪೊಲೀಸ್ ಉಪಾಧೀಕ್ಷಕರಾದ ಕುಶಾಲಪ್ಪ, ನಿಂಗಪ್ಪ, ಲಯನ್ಸ್ ಸಂಸ್ಥೆಯ ವಲಯ ಅಧ್ಯಕ್ಷ ದಾಮೋದರ, ಧನಂಜಯ, ಉಪ ಪೊಲೀಸ್ ಅಧೀಕ್ಷಕ ದಿನೇಶ್ ಕುಮಾರ್, ಜಯಕುಮಾರ್, ಮುರಳೀಧರ, ಪೊಲೀಸ್ ಅಧಿಕಾರಿಗಳಾದ ದಯಾನಂದ, ಮೇದಪ್ಪ, ಅನೂಪ್ ಮಾದಪ್ಪ, ರಾಚಯ್ಯ, ಮಹೇಶ್ ಇತರರು ಇದ್ದರು. - ಸಂತೋಷ್