ಶ್ರೀಮಂಗಲ, ಡಿ. 17: ಐತಿಹಾಸಿಕ ಹಿನ್ನೆಲೆ ಇರುವ ಪೆರ್‍ಮಾಳಚ್ಚನ ಸ್ಥಾನದಲ್ಲಿರುವ ತಾವಳಗೇರಿ ಮೂಂದ್‍ನಾಡ್ ಕೋಲ್‍ಮಂದ್‍ನಲ್ಲಿ ಪುತ್ತರಿ ಕೋಲ್ ನಮ್ಮೆ ವಿಜೃಂಭಣೆಯಿಂದ ಜರುಗಿತು.

ಮಧ್ಯಾಹ್ನ 1.30 ಗಂಟೆಗೆ ಟಿ.ಶೆಟ್ಟಿಗೇರಿ ಕೊರಕೊಟ್ಟ್ ಅಯ್ಯಪ್ಪ ದೇವರ ಕುದುರೆ ಹಾಗೂ ತಾವಳಗೇರಿ ಮಹಾದೇವರ ಕುದುರೆಯು ತಾವಳಗೇರಿ ಮೂಂದ್‍ನಾಡ್ ಕೋಲ್ ಮಂದ್ ಪ್ರವೇಶಿಸಿ ಪೆರ್‍ಮಾಳಚ್ಚನ ಸ್ಥಾನದಲ್ಲಿ ಆಶೀರ್ವಾದ ಪಡೆದು ಮಂದ್ ಪುಡಿಪೊ ಕಾರ್ಯ ನಡೆಯಿತು.

ಒಡ್ಡೋಲಗ ಸಹಿತವಾಗಿ ಮುಖ್ಯ ಅತಿಥಿಗಳು ಹಾಗೂ ಕಲಾ ತಂಡಗಳನ್ನು ಕೋಲ್ ಮಂದ್‍ನ ವೇದಿಕೆಗೆ ಕರೆತಂದ ನಂತರ ನೆರೆದಿದ್ದ ಹಲವು ಪುರುಷರು ನಾಡ್‍ಕೋಲ್ ಆಟ್ ಪ್ರದರ್ಶನ ಮಾಡಿದರು. ಈ ಸಂದರ್ಭ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಕಲಾತಂಡದಿಂದ ಪುತ್ತರಿ ಕೋಲಾಟ್, ಬೊಳಕಾಟ್, ಪರೆಯಕಳಿ ಪ್ರದರ್ಶನ, ರೂಟ್ಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಉಮ್ಮತ್ತಾಟ್, ಬೊಳಕಾಟ್, ಕೋಲಾಟ್ ಹಾಗೂ ವಿವಿಧ ನೃತ್ಯ ಪ್ರದರ್ಶನ ಜನರ ಮೆಚ್ಚುಗೆಗೆ ಪಾತ್ರವಾಯಿತು.

ಗೋಣಿಕೊಪ್ಪ ಕಾವೇರಿ ಕಾಲೇಜು ವಿದ್ಯಾರ್ಥಿಗಳ ಪುತ್ತರಿ ಕೋಲಾಟ್ ಪ್ರದರ್ಶನದ ನಂತರ ತಾವಳಗೇರಿ, ನೆಮ್ಮಲೆ, ಟಿ.ಶೆಟ್ಟಿಗೇರಿ, ವಗರೆ ಗ್ರಾಮದ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಹಗ್ಗಜಗ್ಗಾಟ ನಡೆದು, ಪುರುಷರ ವಿಭಾಗದಲ್ಲಿ ನೆಮ್ಮಲೆ ಎ ಹಾಗೂ ಬಿ ತಂಡಗಳು ಪ್ರಥಮ ಹಾಗೂ ದ್ವಿತೀಯ ಬಹುಮಾನ ಪಡೆದುಕೊಂಡರೆ ಮಹಿಳೆಯರ ವಿಭಾಗದಲ್ಲಿ ವಗರೆ ತಂಡ ಪ್ರಥಮ, ತಾವಳಗೇರಿ ತಂಡ ದ್ವಿತೀಯ ಬಹುಮಾನ ಪಡೆದುಕೊಂಡಿತು.

ತದನಂತರ ತಾವಳಗೇರಿ ಮೂಂದ್ ನಾಡ್‍ಗೆ ಸಂಭಂದಿಸಿದ ಗ್ರಾಮಗಳ ನಡುವೆ ನಡೆದ ಪುತ್ತರಿ ಕಪ್ ವಾಲಿಬಾಲ್ ಪಂದ್ಯಾಟದಲ್ಲಿ ಟಿ.ಶೆಟ್ಟಿಗೇರಿ ಪ್ರಥಮ, ತಾವಳಗೇರಿ ತಂಡ ದ್ವಿತೀಯ ಬಹುಮಾನ ಪಡೆದುಕೊಂಡಿತು.

ಸನ್ಮಾನ: ಕಳೆದ ಮೂರು ವರ್ಷಗಳಿಂದ ತಾವಳಗೇರಿ ಮೂಂದ್ ನಾಡ್ ಕೋಲ್ ಮಂದ್‍ನಲ್ಲಿ ಪುತ್ತರಿ ನಾಡ್ ಕೋಲ್ ಮಂದ್ ನಮ್ಮೆ ಸಂದರ್ಭ ಸಾಧಕರನ್ನು ಸನ್ಮಾನಿಸುವ ಪರಿಪಾಠವಿದ್ದು, ಈ ವರ್ಷ ಸಾಹಿತಿ ಉಳುವಂಗಡ ಕಾವೇರಿ ಉದಯ ಅವರನ್ನು ಮಂದ್‍ನ ಪರವಾಗಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕಾವೇರಿ ಉದಯ ಕೊಡಗಿನ 8 ಪಟ್ಟಿಗಳಲ್ಲಿ ಅತ್ಯಂತ ಹಿರಿಯ ಸ್ಥಾನದಲ್ಲಿರುವ ಪೆರ್‍ಮಾಳ್ ಪಟ್ಟಿಯ ಎದುರು ಸನ್ಮಾನ ಸ್ವೀಕರಿಸುತ್ತಿರುವುದು ಸಂತಸ ತಂದಿದೆ. ವಿಜೃಂಭಣೆಯಿಂದ ನಡೆಯುತ್ತಿರುವ ತಾವಳಗೇರಿ ಮೂಂದ್ ನಾಡ್ ಪುತ್ತರಿ ಕೋಲ್ ಮಂದ್ ನಮ್ಮೆಗೆ ನಾಡಿನ ಪ್ರತಿಯೊಬ್ಬರು ಸಾಂಪ್ರದಾಯಿಕ ಉಡುಗೆಯಲ್ಲಿ ಭಾಗವಹಿಸಿ ಕಾರ್ಯ ಕ್ರಮಗಳನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು.

ಈ ಸಂದರ್ಭ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಆವರಣದಲ್ಲಿ ನಡೆದ ಎವೈಸಿ ವಾಲಿಬಾಲ್ ಕಪ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಬೆಳ್ಳೂರು, ದ್ವಿತೀಯ, ತೃತೀಯ ಸ್ಥಾನ ಪಡೆದ ಬಿರುನಾಣಿ ಎ ಹಾಗೂ ಬಿ ತಂಡಗಳಿಗೆ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ನಾಡ್‍ತಕ್ಕರಾದ ಕೈಬಿಲೀರ ಹರೀಶ್ ಅಪ್ಪಯ್ಯ, ಕೈಬಿಲೀರ ಸುರೇಶ್, ತಾವಳಗೇರಿ ಮಹಾದೇವರ ದೇವಸ್ಥಾನ ಸಮಿತಿ ಅಧ್ಯಕ್ಷ ತಡಿಯಂಗಡ ರಮೇಶ್, ಸಮಿತಿ ಸದಸ್ಯರಾದ ತಡಿಯಂಗಡ ಶಮ್ಮಿ, ಆಂಡಮಾಡ ಸತೀಶ್, ಕೊರಕೊಟ್ಟ್ ಅಯ್ಯಪ್ಪ ದೇವಸ್ಥಾನ ಸಮಿತಿಯ ಚಟ್ಟಂಡ ಸುರೇಶ್, ಮಂದಮಾಡ ತೇಜಪ್ಪ, ಚೊಟ್ಟೆಕೊರಿಯಂಡ ಶ್ರೀನಿವಾಸ್, ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ, ಕೊಡವ ಸಮಾಜದ ಉಪಾಧ್ಯಕ್ಷ ಹಾಗೂ ನೆಮ್ಮಲೆ ದೇವಸ್ಥಾನ ಸಮಿತಿಯ ಅಧ್ಯಕ್ಷ ಚೊಟ್ಟೆಯಾಂಡಮಾಡ ಬೋಸು ವಿಶ್ವನಾಥ್, ಕೊಡವ ಸಮಾಜದ ಕಾಂiÀರ್iದರ್ಶಿ ಹಾಗೂ ತಾವಳಗೇರಿ ಭದ್ರಕಾಳಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಮನ್ನೇರ ರಮೇಶ್, ಅಲೇಮಾಡ ವೇಣು, ಕೋಟ್ರಮಾಡ ನಾಣಯ್ಯ, ಚಂಗುಲಂಡ ಸತೀಶ್, ವಗರೆ ಅಯ್ಯಪ್ಪ ದೇವಸ್ಥಾನ ಸಮಿತಿ ಅಧ್ಯಕ್ಷ ಕಟ್ಟೇರ ಈಶ್ವರ, ಸಂಭ್ರಮ ಪೊಮ್ಮಕ್ಕಡ ಕ್ರೀಡೆ ಸಾಂಸ್ಕøತಿಕ ಸಮಿತಿ ಗೌರವಾಧ್ಯಕ್ಷೆ ತಡಿಯಂಗಡ ಸಬೀತ, ಕಾರ್ಯಧ್ಯಾಕ್ಷೆ ಸೌಮ್ಯ ಕರುಂಬಯ್ಯ ಮತ್ತಿತರರು ಉಪಸ್ಥಿತರಿದ್ದರು.