ಶ್ರೀಮಂಗಲ, ಡಿ. 17: ಬಿರುನಾಣಿಯಲ್ಲಿ ಐದು ಗ್ರಾಮಗಳು ಸೇರಿ ನಡೆಸುವ ಸಾಂಪ್ರದಾಯಿಕ ಮರೆನಾಡ್ ಪುತ್ತರಿ ಕೋಲ್‍ಮಂದ್ ಇಲ್ಲಿನ ಕೊಡವ ಸಮಾಜದ ಆಶ್ರಯದಲ್ಲಿ ಪಾರಂಪಾರಿಕ ತಕ್ಕ ಮುಖ್ಯಸ್ಥರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ನಡೆಯಿತು.ಮರೆನಾಡಿನ ಮೂರು ನಾಡುತಕ್ಕರಾದ ತೆರಾಲು ಗ್ರಾಮದ ಬೊಳ್ಳೆರ, ಬಾಡಗರಕೇರಿ ಗ್ರಾಮದ ಕಾಯಪಂಡ, ಬಿರುನಾಣಿ ಗ್ರಾಮದ ಚಂಗಣಮಾಡ ಕುಟುಂಬ ಹಾಗೂ ದೇವತಕ್ಕರಿಂದ ಸಾಂಪ್ರದಾಯಿಕ “ಮಂದ್‍ಪುಡಿಪೊ” ಪದ್ಧತಿಯನ್ನು ನಡೆಸಲಾಯಿತು.ಮಂದ್‍ಗೆ ತಕ್ಕಮುಖ್ಯಸ್ಥರನ್ನು “ಒಡ್ಡೋಲಗ ಹಾಗೂ ತಳಿಯತಕ್ಕಿ ಬೊಳ್‍ಕ್”ನೊಂದಿಗೆ ಸ್ವಾಗತಿಸ ಲಾಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಅಮ್ಮಾಟಂಡ ಡಾ. ಪಾರ್ವತಿ ಅಪ್ಪಯ್ಯ ಅವರು ಮಾತನಾಡಿ ಊರು, ಕೇರಿ ಮತ್ತು ನಾಡಿನ ಒಗ್ಗಟ್ಟಿಗೆ ಪುತ್ತರಿಕೋಲ್ ಮಂದ್ ವೇದಿಕೆಯಾಗಿದೆ. ಯಾವುದೇ ಜನಾಂಗ ತನ್ನ ಸಂಸ್ಕøತಿ, ಭಾಷೆ ಮತ್ತು ನೆಲ ಕಳೆದುಕೊಂಡರೆ ಜನಾಂಗವೇ ನಾಶವಾಗುತ್ತದೆ. ಆದ್ದರಿಂದ ಅಲ್ಪಸಂಖ್ಯಾತ ಮತ್ತು ವಿಶಿಷ್ಟವಾದ ಕೊಡವರು ತಮ್ಮ ನೆಲ ಮಾರಿದರೆ ನೆಲೆ ಹಾಗೂ ಸಂಸ್ಕøತಿಯನ್ನು ಕಳೆದುಕೊಳ್ಳುವ ಅಪಾಯವಿದೆ. ಆದ್ದರಿಂದ ಯಾವುದೇ ಕಾರಣಕ್ಕೆ ಭೂಮಿಯನ್ನು ಮಾರಾಟಮಾಡದಂತೆ ಕರೆ ನೀಡಿದರು.

ಮಂದ್‍ಗಳು ತುಂಬಾ ಪ್ರಾಮುಖ್ಯತೆ ಪಡೆದಿದೆ; ಹಿಂದಿನ ಕಾಲದಲ್ಲಿ ಮಂದ್‍ನಲ್ಲಿ ಮದುವೆಗೆ, ವಧು-ವರರ ಅನ್ವೇಷಣೆÀ ಮತ್ತು ವ್ಯಾಜ್ಯಗಳನ್ನು ಬಗೆಹರಿಸುವ ನ್ಯಾಯಾಲಯವಾಗಿತ್ತು. ಮಂದ್‍ನಲ್ಲಿ ನಕರಾತ್ಮಕ ಚಿಂತನೆ ಹೋಗಿ ಸಕರಾತ್ಮಕ ಚಿಂತನೆ ಮೂಡುತ್ತದೆ. ಆದ್ದರಿಂದ ಮಂದ್‍ಗಳ ಜೀವಂತಿಕೆಗೆ ಪ್ರಾಮುಖ್ಯತೆ ನೀಡಬೇಕೆಂದು ಹೇಳಿದರು.

ಮತ್ತೋರ್ವ ಮುಖ್ಯ ಅತಿಥಿ ಕೊಡವ ಸಮಾಜಗಳ ಒಕ್ಕೂಟದ ಮಾಜಿ ಅಧ್ಯಕ್ಷ ಮಲ್ಲೇಂಗಡ ದಾದ ಬೆಳ್ಯಪ್ಪ ಅವರು ಮಾತನಾಡಿ ಬಿರುನಾಣಿ ಗ್ರಾ.ಪಂ ವ್ಯಾಪ್ತಿ ತುಂಬಾ ಹಿಂದುಳಿದಿತ್ತು. ಆದರೆ, ಇಲ್ಲಿನ ಪ್ರತೀ ಕುಟುಂಬದಲ್ಲಿ ತೋಟ, ಗದ್ದೆಗಳನ್ನು ಅಭಿವೃದ್ಧಿ ಪಡಿಸಿ, ವಿದ್ಯಾವಂತರಾಗಿ ಉದ್ಯೋಗ ಪಡೆದು ಸ್ವಂತ ದುಡಿಮೆಯಿಂದ ಜನರು ಅಭಿವೃದ್ಧಿ ಯಾಗಿದ್ದಾರೆ. ಬಿರುನಾಣಿಯಲ್ಲಿ ನೂತನ ಕೊಡವ ಸಮಾಜ ನಿರ್ಮಿಸಲು ಅಂದಾಜು ರೂ. 2.5 ಕೋಟಿ ಬೇಕಾಗುತ್ತದೆ. ಸ್ಥಳೀಯರು ತಮ್ಮಿಂದ ಆಗುವಷ್ಟು ದೇಣಿಗೆ ನೀಡಿ ಕೊಡವ ಸಮಾಜ ನಿರ್ಮಿಸಲು ಮುಂದಾಗಬೇಕು. ಉಳಿದ ಹಣವನ್ನು ಸರಕಾರ ಹಾಗೂ ಸಂಘ ಸಂಸ್ಥೆಗಳಿಂದ ತರಲು ಪ್ರಯತ್ನಿಸಬೇಕಾಗಿದೆ ಎಂದು ಹೇಳಿದರು.

ಮಂದ್‍ನಲ್ಲಿ ಸಾಂಪ್ರದಾಯಿಕ ಪುತ್ತರಿಕೋಲಾಟ, ಟಿ.ಶೆಟ್ಟಿಗೇರಿಯ ರೂಟ್ಸ್ ಶಾಲೆ, ಬಿರುನಾಣಿಯ ಲಯನ್ಸ್ ಸುಜ್ಯೋತಿ ಶಾಲೆ, ಬಾಡಗರಕೇರಿಯ ಮಹಿಳಾ ಸಮಾಜ ತಂಡದಿಂದ ಪುತ್ತರಿ ಕೋಲಾಟ್, ಉಮ್ಮತ್ತಾಟ್, ಪರೆಯಕಳಿ, ಬೊಳಕಾಟ್ ಅಲ್ಲದೇ ಸಾಂಸ್ಕøತಿಕ ನೃತ್ಯ ಕಾರ್ಯಕ್ರಮ ಜನರನ್ನು ರಂಜಿಸಿತು.

ವೇದಿಕೆಯಲ್ಲಿ ತಕ್ಕಮುಖ್ಯಸ್ಥರಾದ ಬೊಳ್ಳೇರ ತಮ್ಮಯ್ಯ, ಕಾಯಪಂಡ ಅಪ್ಪಣ್ಣ, ಚಂಗಣಮಾಡ ಮೊಣ್ಣಪ್ಪ, ದೇವತಕ್ಕರಾದ ಅಣ್ಣೀರ ದಾದಗಣಪತಿ, ಅಣ್ಣೀರ ಕಾಶಿ, ಗ್ರಾ.ಪಂ ಅಧ್ಯಕ್ಷ ಬುಟ್ಟಿಯಂಡ ನಾಣಯ್ಯ, ಮರೆನಾಡ್ ಕೊಡವ ಸಮಾಜದ ಅಧ್ಯಕ್ಷ ಮಲ್ಲೇಂಗಡ ಪೆಮ್ಮಯ್ಯ, ಉಪಾಧ್ಯಕ್ಷರುಗಳಾದ ಬೊಳ್ಳೆರ ಪೊನ್ನಪ್ಪ, ಅಣ್ಣಳಮಾಡ ಲಾಲಅಪ್ಪಣ್ಣ, ಕರ್ತಮಾಡ ಮಿಲನ್‍ಮೇದಪ್ಪ, ಕಾರ್ಯದರ್ಶಿಗಳಾದ ಗುಡ್ಡಮಾಡ ಚಂಗಪ್ಪ, ಖಜಾಂಚಿ ಕಾಯಪಂಡ ಸುನೀಲ್, ನಿರ್ದೇಶಕರುಗಳಾದ ಬುಟ್ಟಿಯಂಡ ಸುನೀತಗಪ್ಪಣ್ಣ, ಬಲ್ಯಮೀದೇರಿರ ಚೋಂದಮ್ಮಡಾಲಿ, ಕುಪ್ಪಣಮಾಡ ಬೇಬಿನಂಜಮ್ಮ, ಮೀದೇರಿರ ಕವಿತಾ, ಬಲ್ಯಮೀದೇರಿರ ಸುರೇಶ್, ಮೀದೇರಿರ ಮಂಜುನಾಥ್, ಗುಡ್ಡಮಾಡ ಕುಟ್ಟಪ್ಪ, ಕುಪ್ಪಣಮಾಡ ಪೆಮ್ಮಯ್ಯ, ಕಾಳಿಮಾಡ ಸೋಮಯ್ಯ, ಚೋನಿರ ಮಧು, ಕಾಯಪಂಡ ಮೋಟಯ್ಯ, ಮತ್ತಿತರರು ಹಾಜರಿದ್ದರು.