ವೀರಾಜಪೇಟೆ, ಡಿ. 17: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಉಸ್ತುವಾರಿಯಲ್ಲಿ ನಡೆದ ಪಟ್ಟಣ ಪಂಚಾಯಿತಿಯ ಬೀದಿ ಬದಿ ವ್ಯಾಪಾರಿಗಳ ಸಮಿತಿಗೆ ಹತ್ತು ಕ್ಷೇತ್ರಗಳಿಗೆ ಏಳು ಮಂದಿ ನಾಮಪತ್ರಗಳನ್ನು ಸಲ್ಲಿಸಿದ್ದು ಕಾನೂನು ಬದ್ಧವಾಗಿ ಎಲ್ಲರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯ ಸಂಕ್ಷಣೆ ಹಾಗೂ ಬೀದಿ ಬದಿ ನಿಯಂತ್ರಣದ ನಿಯಮಗಳು 2019ರನ್ವಯ ತಾ. 15 ರಂದು ಚುನಾವಣೆ ನಡೆಸಲಾಗಿದೆ ಎಂದು ಸಹಕಾರ ಅಭಿವೃದ್ಧಿ ಚುನಾವಣಾ ಅಧಿಕಾರಿ ಎಂ.ಎಸ್. ಮೋಹನ್ ತಿಳಿಸಿದ್ದಾರೆ.
ಪಟ್ಟಣ ಪಂಚಾಯಿತಿ ಹತ್ತು ಕ್ಷೇತ್ರಗಳ ಪೈಕಿ ಸಾಮಾನ್ಯ ಕ್ಷೇತ್ರದಿಂದ ಎಸ್.ಕೆ. ಯತಿರಾಜ್, ಅಲ್ಪಸಂಖ್ಯಾತ ಕ್ಷೇತ್ರದಿಂದ ಮಹಮ್ಮದ್ ಹಯಾತ್ ಮಹಿಳಾ ಮೀಸಲು ಕ್ಷೇತ್ರದಿಂದ ಸುಶೀಲಾ, ಪದ್ಮಾವತಿ ಹಾಗೂ ಸವಿತಾ, ಹಿಂದುಳಿದ ವರ್ಗದಿಂದ ಜಯರಾಮ್, ಸಾಮಾನ್ಯ ಕ್ಷೇತ್ರದಿಂದ ಮೈಲಾರಿ ಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಾ. 21 ರಿಂದ ಈ 7 ಮಂದಿ ಮುಂದಿನ ಐದು ವರ್ಷಗಳ ಅವಧಿಗೆ ಸಮಿತಿಯ ನಿರ್ದೇಶಕರುಗಳಾಗಿ ಮುಂದುವರೆ ಯಲಿದ್ದಾರೆ. ಚುನಾವಣಾಧಿಕಾರಿ ಮೋಹನ್ ಅವರು ಆಯ್ಕೆಯಾದ 7 ಮಂದಿಗೂ ಅರ್ಹತಾ ದೃಢೀಕರಣ ಪತ್ರ ವಿತರಿಸಿದರು.
ಚುನಾವಣೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ವಿಶೇಷಚೇತನರ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಆಗದ ಕಾರಣ ಈ ಮೂರು ಸ್ಥಾನಗಳು ತೆರವಾಗಿವೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ಪಟ್ಟಣ ಪಂಚಾಯಿತಿಯ ಯೋಜನಾಧಿಕಾರಿ ಶೈಲಾ ಚುನಾವಣಾಧಿಕಾರಿಗೆ ಸಹಕರಿಸಿದರು.