ಮಡಿಕೇರಿ, ಡಿ.17 : ತಾಲೂಕಿನಲ್ಲಿರುವ ಬಿಪಿಎಲ್ ಪಡಿತರ ಚೀಟಿಗಳ ಪಟ್ಟಿಯನ್ನು ಗಮನಿಸಲಾಗಿದ್ದು, ಬಿಪಿಎಲ್ ಪಡಿತರ ಚೀಟಿ ಹೊಂದಲು ಅನರ್ಹರಾಗಿರುವ ಕುಟುಂಬಗಳು ತನಿಖಾ ಸಮಯದಲ್ಲಿ ಸುಳ್ಳು ಮಾಹಿತಿ ನೀಡಿ ಇಲಾಖಾ ಮಾನದಂಡ ಮರೆಮಾಚಿ ಬಿಪಿಎಲ್ ಪಡಿತರ ಚೀಟಿ ಪಡೆದು ಕೊಂಡಿರುವುದು ಕಂಡುಬಂದಿದೆ, ತಪ್ಪು ಮಾಹಿತಿ ನೀಡಿ ಪಡಿತರ ಚೀಟಿ ಪಡೆದುಕೊಂಡ ಫಲಾನುಭವಿಗಳ ಮಾಹಿತಿಯನ್ನು ಸೂಕ್ತ ದಾಖಲೆ ಸಹಿತ ಆಹಾರ ಶಾಖೆಗೆ ನೀಡಬೇಕಿದೆ ಎಂದು ತಹಶೀಲ್ದಾರ್ ಮಹೇಶ್ ಅವರು ಕೋರಿದ್ದಾರೆ.

ಬಿಪಿಎಲ್ ಪಡಿತರ ಚೀಟಿಗಳ ಕುರಿತು ತನಿಖೆ ನಡೆಸಲಾಗುತ್ತಿದ್ದು, ಪಡಿತರ ಚೀಟಿದಾರರು ಸ್ವಯಂ ಪ್ರೇರಿತರಾಗಿ ತಾಲ್ಲೂಕು ಕಚೇರಿಯ ಆಹಾರ ಶಾಖೆಗೆ ಬಿಪಿಎಲ್ ಅಂತ್ಯೋದಯ ಪಡಿತರ ಚೀಟಿಗಳ ಮಾಹಿತಿಯನ್ನು ಡಿಸೆಂಬರ್ 2019 ರ ಮಾಹೆಯ ಅಂತ್ಯದೊಳಗೆ ನೀಡಬೇಕು. ತಪ್ಪಿದಲ್ಲಿ ಸರ್ಕಾರದ ಆದೇಶದಂತೆ ಸಂಬಂಧಪಟ್ಟವರ ವಿರುದ್ದ ಕಾನೂನು ಕ್ರಮ ಕೈಗೊಳ್ಳ ಲಾಗುವುದು ಎಂದು ಎಚ್ಚರಿಸಿದ್ದಾರೆ.

ಯಾರು ಅನರ್ಹರು: ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು (ಟ್ರ್ಯಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ) ಮತ್ತಿತರ ಹೊಂದಿದ ಕುಟುಂಬವನ್ನು ಹೊರತುಪಡಿಸಿ ನಾಲ್ಕು ಚಕ್ರದ ಬಿಳಿ ಬೋರ್ಡ್ ವಾಹನ ಹೊಂದಿರುವವರು, ಕುಟುಂಬದಲ್ಲಿ ಸರ್ಕಾರಿ ನೌಕರಿದಾರರು ಇರುವಂತಹ ಕುಟುಂಬಗಳು.

ಆದಾಯ ತೆರಿಗೆ ಪಾವತಿಸುವ ಕುಟುಂಬಗಳು. ಕುಟುಂಬವು ವಿಳಾಸದಲ್ಲಿ ವಾಸವಿಲ್ಲದಿರುವುದು. ಒಂದೆ ಮನೆಯಲ್ಲಿ ವಾಸವಿದ್ದು, ಒಂದಕ್ಕಿಂತ ಹೆಚ್ಚು ಪಡಿತರ ಚೀಟಿ ಹೊಂದಿರುವುದು. 7.5 ಎಕರೆಗಿಂತ ಹೆಚ್ಚಿನ ಡಿ ವರ್ಗದ ಅಥವಾ ತತ್ಸಮಾನ ಭೂಮಿ ಹೊಂದಿರುವುದು. ವಾರ್ಷಿಕ 1.20 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವ ಕುಟುಂಬಗಳು. ನಗರ ಪ್ರದೇಶದಲ್ಲಿ 1 ಸಾವಿರ ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ ಪಕ್ಕಾ ಮನೆ ಹೊಂದಿರುವ ಕುಟುಂಬಗಳು. ಮರಣ ಹೊಂದಿರುವವರ ಹೆಸರನ್ನು ಪಡಿತರ ಚೀಟಿಯಿಂದ ತೆಗೆಯದೇ ಇರುವುದು, ಪಡಿತರ ಚೀಟಿಯನ್ನು ರದ್ದುಗೊಳಿಸದೆ ಇರುವುದು. ಇದರಲ್ಲಿ ಯಾವುದೇ ಒಂದು ಅಂಶ ಕಂಡುಬಂದರು ಸಾರ್ವಜನಿಕರು ತಾಲೂಕು ಕಚೇರಿಯ ಆಹಾರ ಶಾಖೆಗೆ ಮಾಹಿತಿಯನ್ನು ನೀಡತಕ್ಕದ್ದು. ಮಾಹಿತಿಯನ್ನು ಗೌಪ್ಯವಾಗಿಡ ಲಾಗುವುದು.

ಬಿಪಿಎಲ್ ಪಡಿತರ ಚೀಟಿ ಪಡೆಯಲು ಅನರ್ಹರಾದವರು ಡಿಸೆಂಬರ್ ಅಂತ್ಯದೊಳಗೆ ಕಚೇರಿಗೆ ಹಾಜರಾಗಿ ತಮ್ಮ ಬಿಪಿಎಲ್ ಪಡಿತರ ಚೀಟಿಯನ್ನು ಎಪಿಎಲ್ ಪಡಿತರ ಚೀಟಿಯನ್ನಾಗಿ ಪರಿವರ್ತಿಸಿ ಕೊಳ್ಳಬೇಕು. ತಪ್ಪಿದಲ್ಲಿ ಈಗಾಗಲೇ ಪಡೆದಿರುವ ಪಡಿತರಕ್ಕೆ ಮುಕ್ತ ಮಾರುಕಟ್ಟೆ ದರದಂತೆ ದಂಡ ಹಾಕುವುದಲ್ಲದೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಮಡಿಕೇರಿ ತಾಲೂಕು ತಹಶೀಲ್ದಾರ್ ಮಹೇಶ್ ಅವರು ತಿಳಿಸಿದ್ದಾರೆ.