ಅಮ್ಮತ್ತಿ, ಡಿ. 17: ಕೊಡಗಿನ ಪ್ರತಿಯೊಂದು ಗ್ರಾಮಗಳಲ್ಲಿಯೂ ಅಡಗಿರುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಕೊಡಗು ದಫ್ ಸಮಿತಿ ಇವರ ವತಿಯಿಂದ ಎನ್‍ಸಿಟಿ ಎಂಟರ್ ಪ್ರೈಸಸ್ ಇವರ ಪ್ರಾಯೋಜಕತ್ವದಲ್ಲಿ ಕೊಡಗು ಜಿಲ್ಲಾ ಮಟ್ಟದ ದಫ್ ಸ್ಪರ್ಧೆ ಕಳೆದ ಎರಡು ದಿನಗಳಿಂದ ವೀರಾಜಪೇಟೆ ಸಮೀಪದ ಚೋಕಂಡಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮಕ್ಕೆ ತೆರೆ ಬಿದ್ದಿತು.

28 ನೋಂದಾಯಿತ ತಂಡಗಳಾದ ಮಾಲ್ದಾರೆ, ಚೊಕ್ಕಂಡಹಳ್ಳಿ, ಕಡಂಗ, ಕಡಂಗಾಡಿ, ವೀರಾಜಪೇಟೆ, ಮಪ್ಪಿಳತೋಡು, ಬೇತ್ರಿ, ನೆಲ್ಲಿಹುದಿಕೇರಿ, ಕೊಡಗರಹಳ್ಳಿ ಮಟಂ, 40 ಎಕರೆ, ಕಂಬಿಬಾಣೆ, ಗದ್ದೆಹಳ್ಳ, ಪಾಲಿಬೆಟ್ಟ, ದೇವಣಗೆರೆ, ಕೊಳಕೇರಿ, ಕೊಟ್ಟಮುಡಿ, ಅರೇಕಾಡು, ಚಾಮಿಯಾಲ, ಕಲ್ಲುಬಾಣೆ, ಗುಂಡಿಗೆರೆ, ಅಮ್ಮತ್ತಿ, ಎಡಪಾಲ, ಚಿಟ್ಟಡೆ, ತ್ಯಾಗತೂರು, ಎಮ್ಮೆಮಾಡು ತಂಡಗಳ ನಡುವೆ ಪ್ರಥಮ ಸುತ್ತಿನ ಸ್ಪರ್ಧೆ ನಡೆಯಿತು. ಒಂದನೇ ದಿನಕ್ಕೆ ಮುಕ್ತಾಯಗೊಂಡ ಪ್ರಥಮ ಸುತ್ತಿನ ಫಲಿತಾಂಶ ಹೊರ ಬಂದಾಗ 12 ತಂಡಗಳು ಹೊರಗುಳಿದು 16 ತಂಡಗಳು ದ್ವಿತೀಯ ಸುತ್ತಿಗೆ ಆಯ್ಕೆಗೊಂಡವು.

ದ್ವಿತೀಯ ಸುತ್ತಿನಲ್ಲಿ ಮಾಲ್ದಾರೆ ಗದ್ದೆಹಳ್ಳ ಕಲ್ಲುಬಾಣೆ ಚೊಕ್ಕಂಡಹಳ್ಳಿ 40 ಎಕರೆ ಬೇತ್ರಿ ಕಡಂಗ ಕೊಟ್ಟಮುಡಿ ಕೊಡಗರಹಳ್ಳಿ ಕೊಳಕೇರಿ ವೀರಾಜಪೇಟೆ ನೆಲ್ಲಿಹುದಿಕೇರಿ ಗುಂಡಿಗೆರೆ ಪಾಲಿಬೆಟ್ಟ ಎಮ್ಮೆಮಾಡು ಮಟ್ಟಂ ತಂಡಗಳು ಮುಖಾಮುಖಿಯಾದವು.

ತೃತೀಯ ಹಾಗೂ ಕೊನೆಯ ಸುತ್ತಿಗೆ ಕೊಟ್ಟಮುಡಿ ಮಟ್ಟಂ ಕಲ್ಲುಬಾಣೆ 40 ಎಕರೆ ನೆಲ್ಲಿಹುದಿಕೇರಿ ಚೊಕ್ಕಂಡಹಳ್ಳಿ ಗುಂಡಿಗೆರೆ ಮಾಲ್ದಾರೆ ತಂಡಗಳು ಫೈನಲ್ ಸುತ್ತಿಗೆ ಅರ್ಹತೆ ಪಡೆದುಕೊಂಡವು.

ಸಮಾರೋಪ ಸಮಾರಂಭದಲ್ಲಿ ಎನ್‍ಸಿಟಿ ಎಂಟರ್ ಪ್ರೈಸಸ್ ಮಾಲೀಕ ಅಕ್ಕಾಳತಂಡ ಮೋಯ್ದು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮಕ್ಕೆ ಕೊಡಗು ಜಿಲ್ಲಾ ನಯಿಬ್ ಖಾಝಿ ಮೆಹಮೂದ್ ಮುಸ್ಲಿಯಾರ್ ಪ್ರಾರ್ಥನೆಯ ಮೂಲಕ ಚಾಲನೆ ನೀಡಿದರು. ಕೊಡಗು ಜಿಲ್ಲಾ ನಯಿಬ್ ಖಾಝಿ ಅಬ್ದುಲ್ಲಾ ಫೈಜಿû ಅವರು ಉದ್ಘಾಟಿಸಿದರು. ಕೊಡಗು ದಫ್ಫ್ ಸಮಿತಿ ಅಧ್ಯಕ್ಷ ಪಿ.ಎ. ಅಬ್ದುಲ್ ಮಜೀದ್ ಸ್ವಾಗತ ಭಾಷಣ ಮಾಡಿದರು. ಕೊಡಗು ದಫ್ ಸಮಿತಿ ಸಹಕಾರ್ಯದರ್ಶಿ ಎಂ.ಎ. ಶಫೀಕ್ ವರದಿ ಮಂಡನೆ ಮಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ನಮ್ಮ ಕೊಡಗು ತಂಡದ ಅಧ್ಯಕ್ಷ ನೌಶಾದ್ ಜನ್ನತ್ ಅವರು, ಅನ್ಯಾಯದ ಎದುರಾಗಿ ನ್ಯಾಯವನ್ನು ಪಡೆದುಕೊಳ್ಳಬೇಕಾದದ್ದು ಪ್ರತಿಯೊಬ್ಬರ ಹಕ್ಕು ಆಗಿದೆ ಎಂದರು.

ವೀರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ಮಹಮ್ಮದ್ ರಾಫಿ ಅವರು ಪೌರತ್ವ ತಿದ್ದುಪಡಿ ಕಾಯ್ದೆಯು ಬರೀ ಮುಸ್ಲಿಮರ ವಿರುದ್ಧ ಹೊರತಂದ ಕಾಯ್ದೆಯಲ್ಲ. ಬದಲಾಗಿ ಇದು ಭಾರತ ದೇಶದ ಕಾನೂನಿನ ವಿರುದ್ಧವಾದ ಕಾಯಿದೆಯಾಗಿದೆ. ಎಲ್ಲರೂ ಈ ಬಗ್ಗೆ ಪ್ರತಿಭಟಿಸಬೇಕು ಎಂದರು.

ಅತಿಥಿಗಳಾಗಿದ್ದ ಚಿಲ್ಲವಂಡ ಕಾವೇರಪ್ಪ ಮಾತನಾಡಿದರು. ಅಸ್ಸಯ್ಯಿದ್ ಇಲ್ಯಾಸ್ ಅಲ್ ಹೈದ್ರೂಸ್ ತಂಙಳ್ ಅವರು ಆತ್ಮೀಯ ಮಜ್ಲಿಸ್‍ಗೆ ನೇತೃತ್ವ ನೀಡಿದರು.

ಫೈನಲ್ ಸುತ್ತಿನ ಫಲಿತಾಂಶ ಹೊರ ಬಂದಾಗ ಇಷ್ಕೇ ರಸೂಲ್ ಮಟ್ಟಂ ಪ್ರಥಮ ಸ್ಥಾನ, ಹಿದಾಯ ದಫ್ ಗುಂಡಿಗೆರೆ ದ್ವಿತೀಯ ಸ್ಥಾನ, ಇಷ್ಕೇ ರಸೂಲ್ ಮಾಲ್ದಾರೆ ತೃತೀಯ ಸ್ಥಾನ ಹಾಗೂ 40 ಎಕರೆ ದಫ್ಫ್ ತಂಡ ನಾಲ್ಕನೇ ಸ್ಥಾನ ಪಡೆದರು.

ಪ್ರಥಮ ಸ್ಥಾನಕ್ಕೆ ರೂ. 20 ಸಾವಿರ ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನಕ್ಕೆ ರೂ. 15 ಸಾವಿರ ಹಾಗೂ ಟ್ರೋಫಿ, ತೃತೀಯ ಸ್ಥಾನಕ್ಕೆ 10 ಸಾವಿರ ಹಾಗೂ ಟ್ರೋಫಿ ಹಾಗೂ 4ನೇ ಸ್ಥಾನಕ್ಕೆ ರೂ. 5 ಸಾವಿರ ಹಾಗೂ ಟ್ರೋಫಿ ನೀಡಲಾಯಿತು.

ಸ್ಪರ್ಧೆಯ ತೀರ್ಪುಗಾರಿಕೆಯನ್ನು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ದಫ್ ತೀರ್ಪುಗಾರರ ಸಂಘದ ಅಧ್ಯಕ್ಷ ಅಬ್ದುಲ್ ಲತೀಫ್, ಇಬ್ರಾಹಿಂ ಇಬ್ಬು, ಝಕರಿಯ ಮುಸ್ಲಿಯಾರ್ ನೆರೆವೇರಿಸಿದರು. ಕಾರ್ಯಕ್ರಮದ ನಿರೂಪಣೆ ಯನ್ನು ತೌಸೀಫ್ ಅಹ್ಮದ್ ಅಮ್ಮತ್ತಿ ಮಾಡಿದರು.