ಸೋಮವಾರಪೇಟೆ, ಡಿ. 17: ಕಳೆದ ಕೆಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ತಾಲೂಕು ರೈತ ಸಂಘಕ್ಕೆ ಮತ್ತೆ ಚಾಲನೆ ನೀಡಲಾಗಿದ್ದು, ರೈತರ ಹಿತದೃಷ್ಟಿಯಿಂದ ನ್ಯಾಯೋಚಿತ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಸಂಘಟಿಸಲಾಗುವುದು ಎಂದು ನಿಯೋಜಿತ ಅಧ್ಯಕ್ಷ ಕೆ.ಎಂ. ದಿನೇಶ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಪರವಾದ ಹೋರಾಟಗಳನ್ನು ಕಳೆದ ಹಲವು ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿತ್ತು. ಕಾರಣಾಂತರಗಳಿಂದ ಸಂಘದ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಇದೀಗ ನೂತನ ಆಡಳಿತ ಮಂಡಳಿಯನ್ನು ರಚಿಸಲಾಗಿದ್ದು, ಮುಂದೆ ನಾಡಿನ ನೆಲ, ಜಲ, ರೈತರ ಸಮಸ್ಯೆ ಸೇರಿದಂತೆ ಇತರ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸಲಾಗುವುದು ಎಂದರು.

ಈಗಾಗಲೇ ಮುಂಗಾರು ಮಳೆಯ ಸಂದರ್ಭ ರೈತರ ಬೆಳೆಗಳು ನಷ್ಟವಾಗಿದೆ. ಅಲ್ಲದೆ, ಯಾವುದೇ ಬೆಳೆಗಳಿಗೂ ಬೆಲೆ ಇಲ್ಲದೆ ರೈತರು ಪರದಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ರೈತರಿಗೆ ಬೆಳೆ ಪರಿಹಾರ ನೀಡಬೇಕು. ಭತ್ತಕ್ಕೆ ಬೆಂಬಲ ಬೆಲೆಯೊಂದಿಗೆ ಕೂಡಲೇ ಖರೀದಿ ಕೇಂದ್ರ ಪ್ರಾರಂಭಿಸಬೇಕು. ಕಾಫಿಗೆ ದರ ನಿಗದಿಗೊಳಿಸುವುದರೊಂದಿಗೆ, ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಸಂಘದ ಸಂಚಾಲಕ ಡಿ.ಪಿ. ದಯಾನಂದ ಮಾತನಾಡಿ, ತಾಲೂಕು ಕಚೇರಿಯಲ್ಲಿ ರೈತರಿಗೆ ಸಂಬಂಧಿಸಿದ ಯಾವುದೇ ಕೆಲಸಗಳೂ ನಿರ್ದಿಷ್ಟ ಅವಧಿಯಲ್ಲಿ ಆಗುತ್ತಿಲ್ಲ. ಮಳೆ ಪರಿಹಾರವನ್ನು ಶಾಂತಳ್ಳಿ ಹೋಬಳಿಗೆ ಮಾತ್ರ ನೀಡಲಾಗಿದೆ. ಹಲವೆಡೆ ಗದ್ದೆ ದಾಖಲಾತಿಗೆ ತೋಟ ಹಾಗೂ ತೋಟಕ್ಕೆ ಗದ್ದೆ ದಾಖಲಾತಿ ಸೃಷ್ಟಿಸಿ ಪರಿಹಾರ ನೀಡಲಾಗಿದೆ. ಇದರಿಂದಾಗಿ ರೈತರಿಗೆ ಸೂಕ್ತ ಪರಿಹಾರ ದೊರಕಿಲ್ಲ. ಇಲಾಖೆಗಳು ಸರ್ಕಾರದ ಯೋಜನೆಗಳನ್ನು ರೈತರಿಗೆ ವಿತರಿಸುವ ಮುನ್ನ ವ್ಯಾಪಕ ಪ್ರಚಾರ ಮಾಡಬೇಕು. ಸಂತೆ ದಿನವಾದ ಸೋಮವಾರದಂದು ಎಲ್ಲಾ ತಾಲೂಕು ಮಟ್ಟದ ಇಲಾಖಾಧಿಕಾರಿಗಳು ತಮ್ಮ ಕಚೇರಿಯಲ್ಲಿಯೇ ಉಳಿದು ಜನಸಾಮಾನ್ಯರಿಗೆ ನೆರವಾಗಬೇಕೆಂದರು.

ನೂತನವಾಗಿ ರಚಿಸಿರುವ ಸಂಘಕ್ಕೆ ತಾಲೂಕಿನ ಎಲ್ಲಾ ರೈತರು, ಬೆಳೆಗಾರರು ಸದಸ್ಯರಾಗಬಹುದು. ಹೆಚ್ಚಿನ ಮಾಹಿತಿಗೆ ಮೊ: 8762111312, 9483737695 ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದರು.

ಗೋಷ್ಠಿಯಲ್ಲಿ ಸಂಘದ ಖಜಾಂಚಿ ಕುಶಾಲಪ್ಪ, ಉಪಾಧ್ಯಕ್ಷ ಯು.ಕೆ. ಶಿವರಾಜು, ಕಾರ್ಯದರ್ಶಿ ಸಿ.ಕೆ. ಸತೀಶ್, ಎಚ್.ಎಸ್. ರಾಜು ಉಪಸ್ಥಿತರಿದ್ದರು.