ಅಗಸ್ತ್ಯರು ತಮ್ಮ ದಿವ್ಯ ದೃಷ್ಟಿಯಲ್ಲಿ ಕಂಡುಕೊಂಡಂತೆ ತನಗೆ ಅನುರೂಪಳಾದ ಪತ್ನಿಯಾಗಬಲ್ಲವಳು ಏಕಮಾತ್ರ ಯುವತಿಯಾಗಿದ್ದು ಅವಳೇ ಲೋಪಾಮುದ್ರೆ ಎಂಬದನ್ನು ಅರಿತುಕೊಳ್ಳುತ್ತಾರೆ. ಅಂತ:ಶ್ಚಕ್ಷುವಿ ನಲ್ಲಿ ಲೋಪಾಮುದ್ರೆಯ ಅವತಾರ ಕಾರಣವನ್ನು ಸ್ಪಷ್ಟವಾಗಿ ಗ್ರಹಿಸುತ್ತಾರೆ. ಬಳಿಕ ದೃಢ ಮನಸ್ಸಿನಿಂದ ಏಕಾಗ್ರ ಚಿತ್ತರಾಗಿ ನೇರವಾಗಿ ವಿದರ್ಭ ರಾಜನ ಅರಮನೆಗೆ ತೆರಳುತ್ತಾರೆ. ತೇಜ:ಪುಂಜರಾದ ಮಹರ್ಷಿಗಳ ಆಗಮನದಿಂದ ಪುಳಕಿತನಾದ ವಿದರ್ಭ ರಾಜ ಅವರನ್ನು ಸರ್ವ ಮರ್ಯಾದೆಗಳೊಂದಿಗೆ ಬರ ಮಾಡಿಕೊಳ್ಳುತ್ತಾನೆ. ವಿನಮ್ರ ಪೂರ್ವಕ ವಾಗಿ ಸತ್ಕರಿಸುತ್ತಾನೆ. ರಾಜನು ಅವರನ್ನು ಉತ್ತಮ ಆಸನದಲ್ಲಿ ಕುಳ್ಳಿರಿಸು ತ್ತಾನೆ. ವಿದರ್ಭ ರಾಜನು ವಿನಯ ಪೂರ್ವಕವಾಗಿ ಬಿನ್ನಹ ಮಾಡುತ್ತ “ಪೂಜ್ಯ ಮಹರ್ಷಿಗಳೇ, ತಾವು ನಮ್ಮ ಅರಮನೆಗೆ ಬಂದುದರಿಂದ ಇಡೀ ರಾಜ್ಯವೇ ಪಾವನವಾಯಿತು. ತಮ್ಮ ಆಗಮನದಿಂದ ರಾಜ ಕುಟುಂಬವೂ ಪುನೀತವಾಯಿತು. ನನ್ನಿಂದ ತಮಗೆ ಆಗಬೇಕಾದುದೇನಾ ದರೂ ಇದ್ದರೆ ತಾವು ಮುಕ್ತವಾಗಿ ಹೇಳಿರಿ. ನಾನು ಅದನ್ನು ಈಡೇರಿಸಲು ಸಿದ್ಧನಿದ್ದೇನೆ” ಎಂದು ಸಮಂಜಸಕರ ಮಾತುಗಳಿಂದ ಬಿನ್ನವಿಸಿಕೊಂಡನು. ಇದರಿಂದ ಸುಪ್ರೀತರಾದ ಅಗಸ್ತ್ಯರು ಸುತ್ತಿಬಳಸಿ ಮಾತನಾಡುವ ಪ್ರವೃತ್ತಿಯವರಲ್ಲದುದರಿಂದ ತಾವು ಬಂದ ಕಾರ್ಯದ ಕುರಿತು ನೇರ ನುಡಿಯನ್ನಾಡಿದರು. ‘‘ಮಹಾರಾಜ, ನಾನು ವಂಶ ಪ್ರದೀಪನಾದ ಪುತ್ರನನ್ನು ಪಡೆಯುವ ಅಭಿಲಾಷೆಯನ್ನು ಹೊಂದಿದ್ದೇನೆ. ಇದಕ್ಕೋಸ್ಕರ ಅಗತ್ಯವಾಗಿ ವಿವಾಹವಾಗಲು ಬಯಸಿದ್ದೇನೆ. ವಿಶ್ವದಲ್ಲಿ ನನಗೆ ಅನುರೂಪಳಾದ ಪತ್ನಿಯಾಗಲು ಏಕೈಕ ಯುವತಿಯೆಂದರೆ ನಿನ್ನ ಪುತ್ರಿಯಾದ ಲೋಪಾಮುದ್ರೆಯೊಬ್ಬಳೆ ಎಂದು ನಾನು ವಿವೇಚನಾತ್ಮಕ ನಿರ್ಧಾರ ಕೈಗೊಂಡಿದ್ದೇನೆ. ನಿನ್ನ ಮಗಳಾದ ಲೋಪಾಮುದ್ರೆಯನ್ನು ವರಿಸುವ ಸಲುವಾಗಿ ಬಂದಿದ್ದೇನೆ. ನೀನು ನಿನ್ನ ಪುತ್ರಿಯನ್ನು ನನಗೆ ಕೊಟ್ಟು ವಿವಾಹ ಮಾಡು’’ ಎಂದು ಅವರು ಮನದಾಳದಿಂದ ನುಡಿಯು ತ್ತಾರೆ. ಅಗಸ್ತ್ಯ ಮಹರ್ಷಿಗಳ ಮಿಂಚಿನೋಪಾದಿಯ ಈ ಮಾತುಗಳನ್ನು ಕೇಳಿದೊಡನೆ ವಿದರ್ಭರಾಜನು ಆಘಾತಗೊಂಡವನಂತೆ ತಕ್ಷಣವೇ ಮೂರ್ಛಿತನಾಗಿ ಕೆಳಗೆ ಬೀಳುತ್ತಾನೆ. ದಿಢೀರಾಗಿ ಸಂಭವಿಸಿದ ಈ ಘಟನೆಯಿಂದ ಕೆಲ ಕಾಲ ವಿಚಲಿತರಾದ ರಾಜ ಭಟರು ಮರುಕ್ಷಣವೆ ಎಚ್ಚೆತ್ತುಕೊಂಡು ಕೆಳಗೆ ಬಿದ್ದ ರಾಜನನ್ನು ಮೇಲೆತ್ತಿ ಶ್ಯೆತ್ಯೋಪಚಾರ ಗಳನ್ನು ಮಾಡುತ್ತಾರೆ. ಕೆಲವು ನಿಮಿಷಗಳ ಬಳಿಕ ರಾಜನು ಎಚ್ಚರ ಗೊಳ್ಳುತ್ತಾನೆ. ರಾಜನಿಗೆ ಏಕೆ ಹೀಗಾಯಿತು ಎಂದು ಎಲ್ಲರೂ ಚಕಿತ ಗೊಂಡಾಗ ಆತನ ಮನಸ್ಸಿನಲ್ಲಾದ ತಳಮಳ ಅವನಿಗೆ ಮಾತ್ರ ಗೊತ್ತಿರು ತ್ತದೆ. ಅಗಸ್ತ್ಯರೂ ಕೂಡ ತಮ್ಮ ದಿವ್ಯ ದೃಷ್ಟಿಯಿಂದ ಆತನ ಕಳವಳಕ್ಕೆ ಕಾರಣವೇನೆಂದು ತಿಳಿದಿದ್ದರೂ ತೋರ್ಪಡಿಸಿಕೊಳ್ಳದೆ ನಿರ್ಲಿಪ್ತರಾಗಿ ಮೌನವಾಗಿದ್ದುಬಿಡುತ್ತಾರೆ. ಹಾಗಿದ್ದರೆ ವಿದರ್ಭ ರಾಜ ಅನುಭವಿಸುತ್ತಿದ್ದ ಮಾನಸಿಕ ಸಂಕಷ್ಟವೇನು ? ಆತನ ಮಾನಸಿಕ ಗೊಂದಲ ಹೀಗೆ ಹೊಯ್ದಾಡುತ್ತಿತ್ತು: ಅಗಸ್ತ್ಯರು ಜಟಾಜೂಟಧಾರಿಯಾಗಿರುವ ಓರ್ವ ವನವಾಸೀ ಸನ್ಯಾಸಿ. ತನ್ನ ಮಗಳೇನೋ ವಿಶ್ವ ಸುಂದರಿ, ಸಾಧು ಸ್ವಭಾವದ ಸಾಧ್ವೀಮಣಿ. ಎಲ್ಲ್ಲಿಂದ ಎಲ್ಲಿಗೆ ಹೋಲಿಕೆ ? ರಾಜ ಮಹಾರಾಜರು ಗಳ ಪುತ್ರರಾದ ರಾಜಕುವರರೇ ತನ್ನ ಪುತ್ರಿಯ ಸೌಂದರ್ಯಾತಿಶಯವನ್ನು ಮನಗಂಡು ತನ್ನ ಮಗಳನ್ನು ವಿವಾಹ ಮಾಡಿಕೊಡಲು ತನ್ನ ಬಳಿ ಕೇಳಲು ಕೂಡ ಸಂಕೋಚಪಡುತ್ತಿದ್ದಾರೆ. ಹೀಗಿರುವಾಗ ಸುಕೋಮಲೆಯಾಗಿ ಅರಮನೆಯಲ್ಲಿ ಬೆಳೆದು, ಅಂಗ ಸೌಷ್ಟವದ ತಾರಾಮಣಿಯಂತಿರುವ ತನ್ನ ಪುತ್ರಿಯನ್ನು ಮಹರ್ಷಿಗಳಿಗೆ ವಿವಾಹ ಮಾಡಿ ಕೊಟ್ಟರೆ ತಾನೇ ಕೈಯ್ಯಾರೆ ಅವಳನ್ನು ಕಾಡಿಗಟ್ಟಿ ದಂತಾಗುವದಿಲ್ಲವೇ ? ತನ್ನ ಮಗಳು ತಪಸ್ವಿನಿಯಾಗಿ ಅಗಸ್ತ್ಯರ ಸೇವೆ ಮಾಡುತ್ತ ವನವಾಸದಲ್ಲಿರ ಬೇಕಾಗುತ್ತದೆ. ಅರಮನೆಯಲ್ಲಿ ಇದುವರೆಗೂ ಪಂಚಭಕ್ಷ್ಯ ಪರಮಾನ್ನ ಗಳೊಂದಿಗೆ, ಅತ್ಯಂತ ರುಚಿಕರವಾದ ಆಹಾರ ಪದಾರ್ಥಗಳನ್ನು ನನ್ನ ಮಗಳು ಸವಿದು ಆನಂದಿಸುತ್ತಿದ್ದಳು. ಅರಮನೆಯಲ್ಲಿ ದಾಸ-ದಾಸಿಯರು ಅವಳನ್ನು ಸದಾ ಉಪಚರಿಸುತ್ತಿದ್ದರು. ಸಖಿಯರು ಆಕೆಯ ಮನೋರಥಕ್ಕೆ ತಕ್ಕಂತೆ ವರ್ತಿಸುತ್ತ ರಂಜಿಸುತ್ತಿ ದ್ದರು. ಯೌವ್ವನದ ಈ ಹೊಸ್ತಿಲಿನಲ್ಲಿ ಪರಿಮಳ ಗಂಧಯುಕ್ತ ಜಲದಲ್ಲಿ ಸ್ನಾನ ಮಾಡುತ್ತ, ಆಕರ್ಷಕ ಆಭರಣಗಳು, ವರ್ಣರಂಜಿತ ಅಮೂಲ್ಯ ವಸ್ತ್ರಗಳನ್ನು ಧರಿಸುತ್ತ ನಿಶ್ಚಿಂತೆಯಿಂದ ಲೋಪಾಮುದ್ರೆ ಹರ್ಷಯುಕ್ತಳಾಗಿರುತ್ತಿ ದ್ದಳು. ತನ್ನನ್ನು ಪ್ರೀತಿಸುವ ಪೋಷಕರೊಂದಿಗೆ ನಕ್ಕು ನಲಿಯುತ್ತಿದ್ದಳು. ಇಷ್ಟೆಲ್ಲ ಸುಖೀ ಜೀವನದ ನಡುವೆಯೂ ತನ್ನ ಪುತ್ರಿ ಅತ್ಯಂತ ಸದ್ಗುಣಿಯಾಗಿದ್ದುದು ಇನ್ನೂ ವಿಶೇಷವೆನಿಸಿತ್ತು. ಇದೀಗ ಮಹರ್ಷಿಯ ಕೋರಿಕೆಯಿಂದ ತನ್ನ ಜಂಘಾಬಲವೇ ಉಡುಗಿದಂತಾಗಿದೆಯಲ್ಲ ? ಎಂದು ಮನಸ್ಸಿನಲ್ಲೇ ಚಿಂತಿಸುತ್ತ ಮಹಾರಾಜನು ತೀರಾ ವ್ಯಾಕುಲಕ್ಕೊಳಗಾದನು. ಆದರೆ, ಮತ್ತೊಂದೆಡೆ ಅಗಸ್ತ್ಯ ಮಹರ್ಷಿಗಳ ತಪೋಶಕ್ತಿಯ ಅರಿವೂ ರಾಜನಿಗೆ ಚೆನ್ನಾಗಿಯೇ ಇತ್ತು. ಅವರಿಗೇನಾದರೂ ಆಕ್ರೋಶವುಂಟಾದರೆ ತಮ್ಮನ್ನು ಭಸ್ಮೀಭೂತರಾಗಿಸುವ ಸಾಮಥ್ರ್ಯವುಳ್ಳವರು ಎಂಬ ಪರಿಜ್ಞಾನವೂ ಅವನಿಗಿದ್ದಿತು. ಅವರನ್ನು ವಿರೋಧಿಸಿ ದರೆ ರಾಜ್ಯಕ್ಕೇ ಆಪತ್ತು ಒದಗಬಹು ದೆನ್ನುವ ಭಯವೂ ಆವರಿಸಿತು. ಆ ದೃಷ್ಟಿಕೋನದಿಂದ ಯೋಚಿಸಿದಾಗ ತನಗೆ ಮನಸ್ಸಿಲ್ಲದಿದ್ದರೂ ಅಘಟಿತ ಘಟನಾ ಸಾಮಥ್ರ್ಯವುಳ್ಳ ಅವರ ಕೋರಿಕೆಯನ್ನು ನಿರಾಕರಿಸುವ ಧೈರ್ಯವೂ ಆ ಸಂದರ್ಭ ರಾಜನಿಗಿರಲಿಲ್ಲ. ಮೌನವಾಗಿ ರಾಜನ ಪ್ರತಿಕ್ರಿಯೆ ಬಯಸಿ ಆಸೀನರಾಗಿದ್ದ ಮಹರ್ಷಿ ಗಳಿಗೆ ತಕ್ಷಣವೇ ಯಾವದೇ ಉತ್ತರ ನೀಡದೆ ಸೀದಾ ಆತ ಅಂತ:ಪುರಕ್ಕೆ ತೆರಳುತ್ತಾನೆ. ಅಲ್ಲಿ ತನ್ನ ಪತ್ನಿಯೊಂದಿಗೆ “ಪ್ರಿಯೆ, ಮಹಾತ್ಮ ರಾದ ಅಗಸ್ತ್ಯರು ನಮ್ಮ ಪ್ರಿಯ ಸುತೆ ಯಾದ ಲೋಪಾಮುದ್ರೆಯನ್ನು ಪಾಣಿಗ್ರಹಣ ಮಾಡಿಕೊಳ್ಳಲು ಅಪೇಕ್ಷಿಸಿ ಇಲ್ಲಿಗೆ ಬಂದಿರುತ್ತಾರೆ. ಅವರು ಮಹಾ ತೇಜಸ್ವಿಗಳು ಮತ್ತು ಅತಿಶಯವಾದ ತಪ:ಪ್ರಭಾವವುಳ್ಳವರು. ನಾವೇನಾದರೂ ಅವರಿಗೆ ನಮ್ಮ ಮಗಳನ್ನು ಮದುವೆ ಮಾಡಿಕೊಡಲು ನಿರಾಕರಿಸಿದರೆ ಕುಪಿತರಾಗುವ ಅವರು ಉಗ್ರ ಶಾಪವನ್ನಿತ್ತು ನಮ್ಮನ್ನೇ ಧ್ವಂಸ ಮಾಡಿ ಬಿಡಬಹುದು. ಈ ಸಂದಿಗ್ಧ ಸಂದರ್ಭ ನಿನ್ನ ಅಭಿಪ್ರಾಯ ಏನೆಂಬುದನ್ನು ಹೇಳು ರಾಣಿ” ಎಂದು ವಿದರ್ಭ ರಾಜನು ಮುಕ್ತ ಮಾತುಗಳನ್ನಾಡಿದನು. ರಾಜನ ಚಿಂತಾಜನಕವಾದ ಮಾತುಗಳನ್ನು ಕೇಳಿ ಮಹಾರಾಣಿಗೂ ಸಹ ಏನೊಂದು ಉತ್ತರ ಕೊಡಲೂ ಸಾಧ್ಯವಾಗಲಿಲ್ಲ. ಆ ಬಗ್ಗೆ ರಹಸ್ಯವಾಗಿ ಮಾತನಾಡಿದರೂ ಕೂಡ ತಪೋಧನ ರಾದ ಅಗಸ್ತ್ಯರು ಅದನ್ನು ಗ್ರಹಿಸುವಷ್ಟು ಸೂಕ್ಷ್ಮಮತಿಗಳು ಎಂಬ ಕುರಿತು ಚಿಂತೆಯಿಂದ ಮೌನವಾಗಿದ್ದುಬಿಟ್ಟಳು. ತನ್ನ ತಂದೆ ತಾಯಿಗಳಿಬ್ಬರೂ ದು:ಖಿತರಾಗಿರುವದನ್ನು ಪುತ್ರಿ ಲೋಪಾಮುದ್ರೆ ಗಮನಿಸಿದಳು. ಅವರ ದು:ಖದ ಕಾರಣವನ್ನು ಕೇಳಿ ತಿಳಿದುಕೊಂಡಳು. ಅವಳು ಆ ಸಂದರ್ಭ ತನ್ನ ಪೋಷಕರೊಂದಿಗೆ ಸಮಯೋಚಿತವಾದ ಸಮಚಿತ್ತದಿಂದ ಕೂಡಿದ ಈ ಮಾತುಗಳನ್ನಾಡಿದಳು “ನ ಮತ್ಕøತೇ ಮಹೀಪಾಲ ಪೀಡಾಮಭ್ಯೇತು ಮರ್ಹಸಿ, ಪ್ರಯಚ್ಛ ಮಾಮಗಸ್ತ್ಯಾಯ ತ್ರಾಹ್ಯಾತ್ಮಾನಂ ಮಯಾ ಪಿತ:” ಅದರರ್ಥ ಹೀಗಿದೆ: “ಮಹಾರಾಜ, ನೀವು ನನ್ನ ವಿಷಯವಾಗಿ ದು:ಖಿತರಾಗಬೇಕಾದ ಕಾರಣವಿಲ್ಲ, ನನ್ನನ್ನೀಗಲೇ ಮಹರ್ಷಿಗಳಾದ ಅಗಸ್ತ್ಯರಿಗೆ ಮದುವೆ ಮಾಡಿಕೊಟ್ಟು ಆತ್ಮ ರಕ್ಷಣೆಯನ್ನು ಮಾಡಿಕೊಳ್ಳುವದು ನಿಮಗುಚಿತವಾಗಿದೆ” ಈ ಮಾತನ್ನು ಕೇಳಿದೊಡನೆ ರಾಜ-ರಾಣಿ ಒಮ್ಮೆಲೇ ಮೂಕವಿಸ್ಮಿತರಾಗುತ್ತಾರೆ. ತಾವು ಯೋಚಿಸುತ್ತಿರುವದೇ ಒಂದು, ಮಗಳ ಅಂತರಾಳವೇ ಮತ್ತೊಂದು. ಇದುವರೆಗೂ ವಿವಾಹದ ಕುರಿತು ಚಕಾರವೆತ್ತದಿದ್ದ ತಮ್ಮ ಮಗಳು ಈಗ ವನವಾಸಿಯಾಗಿರುವ ಕಾಷಾಯ ವಸ್ತ್ರಧಾರಿಯಾದ ಸನ್ಯಾಸಿಯಂತಿರುವ ಅಗಸ್ತ್ಯರನ್ನು ವಿವಾಹವಾಗುವ ಆಸಕ್ತಿ ವ್ಯಕ್ತಪಡಿಸಿದಾಗ ಅವರು ಇದನ್ನು ನಂಬಬೇಕೋ, ಬಿಡಬೇಕೋ ಎನ್ನುವಷ್ಟು ಆಶ್ಚರ್ಯವುಂಟಾಗುತ್ತದೆ. ಸೌಂದರ್ಯದ ಖಣಿ, ಸಜ್ಜನಿಕೆಯ ಸದ್ಗುಣಿ ಈ ತಮ್ಮ ಪ್ರೀತಿಯ ಮಗಳು ಸಾಮಾನ್ಯಳಲ್ಲ, ಈಕೆ ದೈವೀ ಶಕ್ತಿಯೇ ಮೂರ್ತಿವೆತ್ತು ತಮ್ಮ ಮಗಳಾಗಿ ಜನಿಸಿರಬೇಕು ಎನ್ನುವ ಸದ್ಭಾವನೆ, ಗೌರವ, ಹೆಮ್ಮೆ ಅವರಲ್ಲಿ ಮೂಡುತ್ತದೆ.

ತನ್ನ ಪುತ್ರಿಯ ಮುಕ್ತ-ನೇರ ನುಡಿಗಳನ್ನು ಆಲಿಸಿದ ವಿದರ್ಭ ರಾಜ ಕೊನೆಗೂ ಅನ್ಯ ಮಾರ್ಗ ತೋಚದೆ ಅಂತಿಮ ನಿರ್ಧಾರಕ್ಕ್ಕೆ ಬರುತ್ತಾನೆ. ಲೋಪಾಮುದ್ರೆಯನ್ನು ಮಹರ್ಷಿ ಅಗಸ್ತ್ಯರಿಗೆ ಕೊಟ್ಟು ವಿಧ್ಯುಕ್ತವಾಗಿಯೇ ವಿವಾಹವನ್ನು ನೆರವೇರಿಸುತ್ತಾನೆ. ಲೋಪಾಮುದ್ರೆ-ಅಗಸ್ತ್ಯರು ಸತಿ-ಪತಿಗಳಾಗುತ್ತಾರೆ.

ಕಾವೇರಿ ಕುಂಡಿಕೆ : ಮಡಿಕೇರಿಯ ಚಿಂತಕ ಅಲ್ಲಾರಂಡ ವಿಠಲ್ ನಂಜಪ್ಪ ಸಲಹೆಯೊಂದನ್ನು ನೀಡಿದ್ದರು. ಕಾವೇರಿ ಕಥನದಲ್ಲಿ ಕಾವೇರಿಯ ಚಿತ್ರ ಬೇಡ. ತಲಕಾವೇರಿಯ ಮೂಲ ಕುಂಡಿಕೆಯ ಚಿತ್ರವಿದ್ದರೆ ಸಾಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಕಾವೇರಿ ಕಥಾರೂಪದಲ್ಲಿ ಬರುತ್ತಿದೆ. ಕಥಾ ಸನ್ನಿವೇಶಗಳಿಗೆ ಪೂರಕವಾದ ಚಿತ್ರಗಳನ್ನು ರಚಿಸಿ ಕತೆಯೊಂದಿಗೆ ಅಳವಡಿಸಲಾಗುತ್ತಿದೆ. ಓದುಗರಿಗೆ ಕತೆಗೆ ಜೋಡಣೆ ಯೆಂಬಂತೆ ಮಾತ್ರÀ ಚಿತ್ರವನ್ನು ಅಳವಡಿಸಲಾಗುತ್ತಿದೆ. ಲೋಪಾಮುದ್ರೆ ಕಾವೇರಿಯಾಗಿ ಜಲ ರೂಪಿಣಿಯಾಗಿ ಹರಿಯುವ ಸಂದರ್ಭ- ಸನ್ನಿವೇಶ ಕುಂಡಿಕೆಯ ಚಿತ್ರವನ್ನೂ ಅಳವಡಿಸಲಾಗುತ್ತದೆ.

ಪುರಾಣ, ಮಹಾಭಾರತ, ರಾಮಾಯಣ ಗ್ರಂಥಗಳಲ್ಲಿಯೂ ದೇವಾನುದೇವತೆಗಳ ಕಲ್ಪನಾತ್ಮಕ ಚಿತ್ರಗಳನ್ನು ಭಾವನಾತ್ಮಕ ಸಂಪರ್ಕಕ್ಕೋಸ್ಕರ ಅಳವಡಿಸಲಾಗುತ್ತದೆ. ವಿಗ್ರಹಾರಾಧನೆ, ದೇವರ ಕಲ್ಪನಾತ್ಮಕ ಚಿತ್ರಗಳಿಗೆ ಪೂಜೆ ಇತ್ಯಾದಿ ಮಾನಸಿಕ ಏಕಾಗ್ರತೆಗೋಸ್ಕರ, ಸದ್ಭಾವನೆಯನ್ನು ಜಾಗೃತಗೊಳಿಸಲೋಸುಗ ಮಾಡಲಾಗುತ್ತದೆ. ಅದೇ ಸತ್ಯವಲ್ಲ. ಕೊನೆಗೆ ದೈವ ಎನ್ನುವದು ಸಾಕಾರತ್ವದಿಂದ ನಿರಾಕಾರತ್ವದೆಡೆಗೆ ಸಾಗುತ್ತದೆ. ಜಗತ್ತಿನ ಏಕ ಶಕ್ತಿಯ ಸಂದೇಶ ಸಾರುತ್ತ ಬಾಹ್ಯದಿಂದ ನಿರ್ಗಮನಗೊಂಡು ನಮ್ಮ ಆಂತರ್ಯದಲ್ಲಿಯೇ ಅನುಭವವೇದ್ಯವಾಗುತ್ತದೆ, ಕಾವೇರಿ ಪ್ರತಿಮೆಯಾಗಲಿ, ಕಾವೇರಿಯ ಕಲ್ಪನಾ ಚಿತ್ರಕ್ಕೇ ಆಗಲಿ ಪೂಜೆ, ಆರಾಧನೆ ಇಲ್ಲ, ಪವಿತ್ರ ಕುಂಡಿಕೆಯನ್ನೇ, ಅವಳ ಜಲರೂಪವನ್ನೇ ಕಾವೇರಿ ಎನ್ನುವ ಪೂಜ್ಯ ಭಾವನೆಯೊಂದಿಗೆ ಆರಾಧಿಸುವದೂ ಸತ್ಯ. ಕೇವಲ ಕಥಾ ರೂಪದ ಚಿತ್ರಣಕ್ಕೋಸ್ಕರ ಲೋಪಾಮುದ್ರೆಯಾಗಿ ಅಗಸ್ತ್ಯನ ಪತ್ನಿಯಾಗಿಯೂ ಆಕೆ ದೈಹಿಕ ಸ್ವರೂಪಿಣಿಯಾಗಿ ಜೀವನ ನಡೆಸಿದ್ದಳು ಎಂಬ ಗ್ರಂಥಾಧಾರಿತ ಕತೆಗೆ ಪೂರಕವಾದ ಚಿತ್ರಗಳನ್ನು ಅಳವಡಿಸಲಾಗುತ್ತಿದೆ. ಆಗಸದಲ್ಲಿನ ಪ್ರತ್ಯಕ್ಷ ಗೋಚರ ಶಕ್ತಿಯಾಗಿರುವ ಸೂರ್ಯನಂತೆ ಕಾವೇರಿಯು ಭೂಮಿಯಲ್ಲಿನ ಜಲದೇವತೆಯಾಗಿ ನಿತ್ಯ ಸಾಕ್ಷಾತ್ ದರ್ಶನ ನೀಡುತ್ತಿದ್ದಾಳೆ. ಜಲ ರೂಪಿಣಿಯಾಗಿ ಹರಿದು ಕೋಟ್ಯಂತರ ಮಂದಿಯ ಬಾಯಾರಿಕೆಯನ್ನು ಇಂಗಿಸುತ್ತಿದ್ದಾಳೆ, ಬೆಳೆಯ ಭೂಮಿಗಳನ್ನು ಫಲವತ್ತುಗೊಳಿಸುತ್ತ್ತಿದ್ದಾಳೆ ಎನ್ನುವದು ನಿತ್ಯ ನಿರಂತರ.