ಸೋಮವಾರಪೇಟೆ, ಡಿ. 17: ಇತ್ತೀಚಿನ ದಿನಗಳಲ್ಲಿ ಭತ್ತ ಕೃಷಿ ಇಳಿಮುಖವಾಗುತ್ತಿದ್ದು, ಇರುವ ಕೃಷಿಕರಿಗೆ ಉತ್ತೇಜನ ನೀಡುವ ಸಲುವಾಗಿ ಸರ್ಕಾರದಿಂದ ಎಕರೆಗೆ ರೂ. 10 ಸಾವಿರ ಸಹಾಯಧನವನ್ನು ಒದಗಿಸಬೇಕೆಂಬ ಬೇಡಿಕೆ ಮುಂದಿಟ್ಟು ಸರ್ಕಾರಕ್ಕೆ ಪತ್ರ ಬರೆಯಲು ತಾ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸೋಮವಾರಪೇಟೆ ತಾ. ಪಂ. ಸಾಮಾನ್ಯ ಸಭೆ, ತಾ.ಪಂ. ಸಭಾಂಗಣ ದಲ್ಲಿ ಅಧ್ಯಕ್ಷೆ ಪುಷ್ಪ ರಾಜೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಬಾರಿ ಚೆಟ್ಟಳ್ಳಿ, ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಕಾಡಾನೆಗಳು ಭತ್ತ ಬೆಳೆಯನ್ನು ನಷ್ಟಗೊಳಿಸಿವೆ. ಇದರೊಂದಿಗೆ ಅತಿವೃಷ್ಟಿ, ಅಕಾಲಿಕ ಮಳೆ, ಕಾಡುಪ್ರಾಣಿಗಳ ಹಾವಳಿಯಿಂದ ಹಲವು ಕಡೆಗಳಲ್ಲಿ ಭತ್ತ ಬೆಳೆಯಲೂ ಸಾಧ್ಯವಾಗುತ್ತಿಲ್ಲ. ಬಹುತೇಕ ಕೃಷಿಕರು ಗದ್ದೆಯನ್ನು ಪಾಳುಬಿಟ್ಟಿದ್ದಾರೆ ಎಂದು ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಸಭೆಯ ಗಮನ ಸೆಳೆದರು.
ನೆರೆಯ ಕೇರಳದಲ್ಲಿ ಭತ್ತ ಕೃಷಿಗೆ ಸರಕಾರ ಸಹಾಯಧನ ನೀಡುತ್ತಿದೆ. ಇದೇ ಮಾದರಿಯಲ್ಲಿ ಕರ್ನಾಟಕ ರಾಜ್ಯ ಸರಕಾರವೂ ಸಹಾಯಧನ ಘೋಷಿಸಿದರೆ ಮಾತ್ರ, ಭತ್ತ ಕೃಷಿಯನ್ನು ರೈತರು ಮುಂದುವರಿಸ ಬಹುದು. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಬೇಕಿದೆ ಎಂದು ಮಣಿ ಉತ್ತಪ್ಪ ಅಭಿಪ್ರಾಯಿಸಿದರು.
ಇದಕ್ಕೆ ದನಿಗೂಡಿಸಿದ ಸದಸ್ಯರಾದ ಕುಶಾಲಪ್ಪ, ಕುಸುಮಾ ಅಶ್ವಥ್, ಬಿ.ಬಿ. ಸತೀಶ್, ಸಬಿತಾ ಚನ್ನಕೇಶವ, ಸವಿತಾ ಈರಪ್ಪ, ಗಣೇಶ್ ಮತ್ತಿತರ ಸದಸ್ಯರು, ಎಕರೆಗೆ ಕನಿಷ್ಟ 10 ಸಾವಿರ ಸಹಾಯ ಧನ ನೀಡಲು ಸರ್ಕಾರ ಮುಂದಾಗಬೇಕು. ಈ ನಿಟ್ಟಿನಲ್ಲಿ ತಾ.ಪಂ. ಸಭೆಯಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಸಲ್ಲಿಸಬೇಕೆಂದರು.
ರೂ. 4 ಕೋಟಿ ವೆಚ್ಚದಲ್ಲಿ ತಾ.ಪಂ.ಯ ನೂತನ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಕಟ್ಟಡದಲ್ಲಿ ತಾ.ಪಂ. ಅಧೀನಕ್ಕೆ ಬರುವ 18 ಇಲಾಖೆಗಳ ಪೈಕಿ ಕೆಲವು ಇಲಾಖೆಗಳಿಗೆ ಸ್ವಂತ ಕಟ್ಟಡ ಇಲ್ಲದೆ ಇರುವದರಿಂದ ಅವುಗಳಿಗೆ ಅವಕಾಶ ನೀಡಲಾಗುವದು. ಮುಂದಿನ ವಾರದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್ ಈಶ್ವರಪ್ಪ ಅವರನ್ನು ತಾ.ಪಂ.ಯ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಲಾಗು ವದು ಎಂದು ಉಪಾಧ್ಯಕ್ಷ ಅಭಿಮನ್ಯು ಕುಮಾರ್ ಸಭೆಗೆ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖಾ ವತಿಯಿಂದ ನಡೆಯುತ್ತಿರುವ ಲೈನ್ ಮನೆ ಸಮೀಕ್ಷೆಯಲ್ಲಿ ತಾಲೂಕಿನ 37 ಪಂಚಾಯಿತಿಗಳನ್ನು ಪೂರ್ಣಗೊಳಿಸ ಲಾಗಿದೆ. ಉಳಿದ 3 ಪಂಚಾಯಿತಿ ವ್ಯಾಪ್ತಿಯಲ್ಲಿ ಬಾಂಗ್ಲಾದೇಶದ ನುಸುಳು ಕೋರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇದರ ಬಗ್ಗೆ ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ಯಾವದೇ ಆಸಕ್ತಿ ಇಲ್ಲವೆಂದು ಸಮಾಜ ಕಲ್ಯಾಣ ಅಧಿಕಾರಿ ಶೇಖರ್ ಅವರನ್ನು ಸದಸ್ಯ ಮಣಿಉತ್ತಪ್ಪ ತೀವ್ರ ತರಾಟೆಗೆ ತೆಗೆದುಕೊಂಡರು.
ಗೋಹತ್ಯೆ ನಿಷೇಧÀ ಜಾರಿ ಇದ್ದರೂ ಅಕ್ರಮ ನುಸುಳುಕೋರರು ಇರುವ ಸ್ಥಳದಲ್ಲಿ ನಿರಂತರವಾಗಿ ವಾರದ ಸಂತೆಯ ದಿನಗಳಂದು ಗೋಮಾಂಸ ಸರಬರಾಜು ಆಗುತ್ತಿದೆ. ಇದರ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಉನ್ನತಾಧಿಕಾರಿಗಳಿಗೆ ಪತ್ರ ಬರೆಯುವಂತೆ ಆಗ್ರಹಿಸಿದ ಮೇರೆ, ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಇದೇ ಸಂದರ್ಭ ಕೊಡಗಿನಲ್ಲಿ ಪೌರತ್ವ ನೋಂದಣಿ ಅಭಿಯಾನದ ವಿರುದ್ಧ ಕೆಲವರು ಅಪಸ್ವರ ಎತ್ತುವ ಮೂಲಕ ಪ್ರತಿಭಟನೆ ನಡೆಸುತ್ತಿರುವ ದನ್ನು ಸಭೆಯಲ್ಲಿ ಖಂಡಿಸಲಾಯಿತು.
ಟಿಪ್ಪುವಿನ ಕುರಿತು ಇದ್ದ ವೈಭವೀಕರಣದ ಬಗ್ಗೆ ಈಗಾಗಲೇ ಶಾಸಕರ ನೇತೃತ್ವದಲ್ಲಿ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಗೆ ವರದಿ ನೀಡಲಾಗಿದೆ. ಟಿಪ್ಪುವಿನ ಬಗ್ಗೆ ಕೊಡಗು ಜಿಲ್ಲೆಯ ಮಕ್ಕಳಿಗೆ ಬೋಧಿಸುವ ಅಗತ್ಯ ಇಲ್ಲ. ಸರಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ತಾ.ಪಂ. ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಹೇಳಿದರು.
ತಾಲೂಕಿನ ಗರಗಂದೂರು ಮತ್ತು ಕುಂಬೂರು ಗ್ರಾಮವನ್ನು ಕುಶಾಲನಗರ ತಾಲೂಕಿಗೆ ಸೇರಿಸುವ ಪ್ರಸ್ತಾಪವಿದ್ದು, ಇದನ್ನು ಕೈಬಿಟ್ಟು 2 ಗ್ರಾಮಗಳನ್ನು ಸೋಮವಾರಪೇಟೆ ತಾಲೂಕಿನಲ್ಲಿ ಉಳಸಿಕೊಳ್ಳಲು ಮನವಿ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಪತ್ರ ಬರೆಯುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಚೆÀಟ್ಟಳ್ಳಿಯನ್ನು ಮಡಿಕೇರಿಗೆ ಸೇರಿಸುವ ಕುರಿತು ಕಳೆದ 25 ವರ್ಷ ಗಳಿಂದ ಹೋರಾಟ ನಡೆಸುತ್ತಿದ್ದು, ಈ ಪಂಚಾಯಿತಿಯನ್ನು ಮಡಿಕೇರಿಗೆ ಸೇರಿಸಲು ಸಾಧ್ಯವಿಲ್ಲದಿದ್ದರೆ ಸೋಮವಾರಪೇಟೆಯಲ್ಲಿ ಉಳಿಸಿಕೊಳ್ಳಲಿ ಎಂದು ಮಣಿಉತ್ತಪ್ಪ ಸಭೆಯಲ್ಲಿ ಹೇಳಿದರು.
ಕಿಕ್ಕರಳ್ಳಿ, ಮಂಕ್ಯ, ಸೂರ್ಲಬ್ಬಿ, ಹರಗ, ಗರ್ವಾಲೆ, ಕುಂಬಾರಗಡಿಗೆ ಸೇರಿದಂತೆ ಬಹುತೇಕ ಕಡೆಗಳಲ್ಲಿ ಕಾಡುಹಂದಿಗಳು ಭತ್ತ, ತರಕಾರಿ ಯನ್ನು ತಿಂದು ಮುಗಿಸುತ್ತಿವೆ. ಅರಣ್ಯ ಇಲಾಖೆಯವರು ಮಾನವೀಯ ದೃಷ್ಟಿಯಿಂದ ರೈತರ ಸಂಕಷ್ಟಕ್ಕೆ ಸ್ಪಂದಿಸ ಬೇಕು. ಸೂಕ್ತ ಬೆಳೆಹಾನಿ ಪರಿಹಾರ ವನ್ನು ನೀಡಬೇಕೆಂದು ಉಪಾಧ್ಯಕ್ಷ ಅಭಿಮನ್ಯುಕುಮಾರ್ ಆಗ್ರಹಿಸಿದರು.
ಪಟ್ಟಣ ಸಮೀಪದ ಕರ್ಕಳ್ಳಿ ಬಾಣೆಯ ಸ್ಮಶಾನ ಜಾಗದಲ್ಲಿ ಕೆಲ ಜನಾಂಗದವರು ಹೆಚ್ಚುವರಿಯಾಗಿ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ದೂರುಗಳು ಬಂದಿವೆ. ಸಾರ್ವಜನಿಕ ಸ್ಮಶಾನಕ್ಕೆ ಹೆಚ್ಚಿನ ಜಾಗವನ್ನು ಕಲ್ಪಿಸಬೇಕಾಗಿದೆ. ತಹಶೀಲ್ದಾರರು ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಅಭಿಮನ್ಯುಕುಮಾರ್ ಮನವಿ ಮಾಡಿದರು.
ಸಾರ್ವಜನಿಕ ಸ್ಮಶಾನಕ್ಕೆ ಈಗಾಗಲೇ 20 ಸೆಂಟ್ಸ್ ಜಾಗವನ್ನು ಮೀಸಲಿಡಲಾಗಿದೆ. ಇನ್ನು 30 ಸೆಂಟ್ಸ್ ಜಾಗವನ್ನು ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಈ ಜಾಗವನ್ನು ವೈಜ್ಞಾನಿಕ ಅಭಿವೃದ್ಧಿಗೆ ರೋಟರಿ ಸಂಸ್ಥೆಗೆ ನೀಡಲಾಗುವದು ಎಂದು ತಹಶೀಲ್ದಾರ್ ಗೋವಿಂದರಾಜ್ ತಿಳಿಸಿದರು.
ಚೆÀಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ಈರಳೆವಳಮುಡಿಯ ಮಾರುಕಟ್ಟೆಯ ಬಳಿ ಒಂದೂವರೆ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಹಂದಿಮಾಂಸದ ಮಳಿಗೆ ಕಾಮಗಾರಿ ಕಳಪೆಯಾಗಿದ್ದು, ಇದೀಗ ಕಸದ ಕೊಂಪೆಯಾಗಿದೆ. ಕಾಂಡನಕೊಲ್ಲಿಯಿಂದ ಬೋಯಿಕೇರಿಗೆ ತೆರಳುವ ಹಾಲೇರಿ ಬಳಿ ರೂ. 20 ಲಕ್ಷ ವೆಚ್ಚದಲ್ಲಿ ಮಳೆ ಪರಿಹಾರ ಯೋಜನೆಯಡಿ ನಿರ್ಮಿಸಲಾದ ತಡೆಗೋಡೆ ಕುಸಿದು ಬಿದ್ದಿದೆ.
ಕೇವಲ 6 ತಿಂಗಳ ಒಳಗೆ ತಡೆಗೋಡೆ ಕಳಪೆ ಕಾಮಗಾರಿ ಯಿಂದಾಗಿ ಬಿದ್ದುಹೋಗಿ ರುವದರಿಂದ ಸಮೀಪದ ತೋಟ ಮಾಲೀಕರಿಗೆ ನಷ್ಟ ಉಂಟಾಗಿದೆ. ಈ ಎರಡೂ ಕಾಮಗಾರಿಗಳ ಬಗ್ಗೆ ತನಿಖೆÉ ಯಾಗಬೇಕೆಂದು ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಒತ್ತಾಯಿಸಿದರು.
ಸಭೆಯಲ್ಲಿ ತಾ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಸದಸ್ಯೆ ತಂಗಮ್ಮ, ತಹಶೀಲ್ದಾರ್ ಗೋವಿಂದ ರಾಜ್ ಕಾರ್ಯನಿರ್ವಹಣಾಧಿಕಾರಿ ಸುನಿಲ್ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.