ಶ್ರೀಮಂಗಲ, ಡಿ. 17: ಕಾಫಿ ತೋಟಗಳಿಗೆ ನೀರು ಹಾಯಿಸಲು ವಿದ್ಯುತ್ ಚಾಲಿತ ಪಂಟ್‍ಸೆಟ್‍ಗಳಿಗೆ ಕೃಷಿಗೆ ನೀಡುವಂತೆ ವಿದ್ಯುತ್ ರಿಯಾಯಿತಿ ಮತ್ತು 10 ಹೆಚ್‍ಪಿವರೆಗೆ ಉಚಿತ ವಿದ್ಯುತ್ ನೀಡುವ ಬಗ್ಗೆ ಉಸ್ತುವಾರಿ ಸಚಿವರು ಘೋಷಿಸಿದ್ದರೂ ಅದು ಇನ್ನೂ ಜಾರಿಗೊಂಡಿಲ್ಲ. ಇದನ್ನು ಕೂಡಲೇ ಜಾರಿಗೊಳಿಸಿ ಕೃಷಿ ಹಾಗೂ ಕಾಫಿ ಫ್ಲಾಂಟೆಶನ್ ನಡುವೆ ತಾರತಮ್ಯವನ್ನು ತೆರವುಗೊಳಿಸಬೇಕೆಂದು ಕೊಡಗು ಬೆಳೆಗಾರರ ಒಕ್ಕೂಟ ಉಸ್ತುವಾರಿ ಸಚಿವರಿಗೆ ಮನವಿ ಮಾಡಲು ನಿರ್ಧರಿಸಿದೆ.

ಗೋಣಿಕೊಪ್ಪ ಸಿಲ್ವರ್ಸ್ ಸ್ಕೈ ಹೋಟೆಲ್ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಸುಧೀರ್ಘವಾಗಿ ಚರ್ಚಿಸಲಾಯಿತು. ಕಾಫಿ ತೋಟಗಳಲ್ಲಿ ಬಳಸುವ ವಿದ್ಯುತ್ ಚಾಲಿತ ಪಂಪ್‍ಸೆಟ್‍ಗಳಿಗೆ 10 ಹೆಚ್‍ಪಿವರೆಗೆ ಉಚಿತ ಹಾಗೂ ಮೇಲ್ಪಟ್ಟ ಹೆಚ್‍ಪಿಗಳಿಗೆ ಕೃಷಿಯಂತೆ ರಿಯಾಯಿತಿ ದರದಲ್ಲಿ ವಿದ್ಯುತ್ ನೀಡುವ ಸೌಲಭ್ಯವನ್ನು ಉಸ್ತುವಾರಿ ಸಚಿವ ಸೋಮಣ್ಣ ಅವರು ಘೋಷಿಸಿರುವುದು ಬೆಳೆಗಾರರ ಪರ ನಿಲುವು ಸ್ವಾಗತಾರ್ಹವಾಗಿದೆ. ಆದರೆ, ಅವರು ಘೋಷಿಸಿರುವ ಸೌಲಭ್ಯ ಶೀಘ್ರದಲ್ಲಿಯೇ ಜಾರಿಗೊಳಿಸುವಂತೆ ಹಾಗೂ ಪ್ರಸ್ತುತ ಕಾಫಿ ತೋಟಗಳಿಗೆ ನೀರಾವರಿ ಮಾಡುವ ಸಮಯ ಸಮೀಪಿಸುತ್ತಿದ್ದು, ಈ ಸೌಲಭ್ಯ ಶೀಘ್ರ ಜಾರಿಗೊಳಿಸುವ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆÉಯಲು ತೀರ್ಮಾನಿಸಲಾಯಿತು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವ್ಯಾಪ್ತಿಯಲ್ಲಿ ಕಾಳು ಮೆಣಸಿಗೆ ಶೇಕಡ 1.5 ರಷ್ಟು ಸೆಸ್ ಹಾಕಲಾಗುತ್ತಿದ್ದು, ಈಗಾಗಲೇ ಕಾಳುಮೆಣಸು ದರ ಕುಸಿತದಿಂದ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದು, ಕಾಳುಮೆಣಸಿಗೆ ವಿಧಿಸುವ ಸೆಸ್‍ನ್ನು ತೆಗೆದುಹಾಕುವಂತೆ ಸರಕಾರದ ಮಟ್ಟದಲ್ಲಿ ಮನವಿ ಸಲ್ಲಿಸಿ ಜಾರಿಗೊಳಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಜಿಲ್ಲೆಯ ಕಾಫಿ ಬೆಳೆಗಾರರ ಆದಾಯವನ್ನು ಪ್ರತೀ ಏಕ್ರೆಗೆ ಯಾವ ಮಾನದಂಡದಲ್ಲಿ ಸರಕಾರ ನಿಗದಿಪಡಿ ಸುತ್ತಿದೆ ಎಂದು ಗೊತ್ತಾಗಿಲ್ಲ. ಜಿಲ್ಲೆಯ ಬಹಳಷ್ಟು ಸಣ್ಣ ಕಾಫಿ ಬೆಳೆಗಾರರು ಪ್ರಾಕೃತಿಕ ವಿಕೋಪ, ಅತಿವೃಷ್ಟಿ, ಅನಾವೃಷ್ಟಿ, ಕಾಡಾನೆ ಹಾವಳಿ ಸಮಸ್ಯೆಯಿಂದ ತೀವ್ರತರದ ನಷ್ಟ ಅನುಭವಿಸುತ್ತಿದ್ದಾರೆ. ಆದರೆ, ಸರಕಾರ ಕಾಫಿ ಬೆಳೆಗಾರರಿಗೆ ಹೆಚ್ಚಿನ ಆದಾಯವನ್ನು ಆದಾಯ ದೃಡೀಕರಣ ಪತ್ರದಲ್ಲಿ ನಮೂದಿಸುತ್ತಿದೆ. ಇದು ವಾಸ್ತವಾಂಶಕ್ಕೆ ವಿರುದ್ಧವಾಗಿದ್ದು, ಇದರಿಂದ ಬಿಪಿಎಲ್ ಕಾರ್ಡ್‍ಗೆ ಅರ್ಹರಾಗಿರುವ ಬಹುತೇಕ ಸಣ್ಣ ಕಾಫಿ ಬೆಳೆಗಾರರು ಈ ಸೌಲಭ್ಯದಿಂದ ವಂಚಿತರಾಗುವಂತೆ ಆಗಿದೆ ಎಂದು ಸಭೆಯಲ್ಲಿ ದೀರ್ಘವಾದ ಚರ್ಚೆ ನಡೆಯಿತು.

ಸಣ್ಣ ಕಾಫಿ ಬೆಳೆಗಾರರ ಬಿಪಿಎಲ್ ಪಡಿತರ ಚೀಟಿಯನ್ನು ತಪ್ಪು ಆದಾಯ ನಿಗದಿಯಿಂದ ರದ್ದುಗೊಳಿಸಬಾರದು, ಸಣ್ಣ ಕಾಫಿ ಬೆಳೆಗಾರರ ಆದಾಯವನ್ನು ಪುನರ್ ಪರಿಷ್ಕರಿಸುವಂತಾಗಬೇಕು. ಬೆಳೆಗಾರರು ತಮ್ಮ ಬ್ಯಾಂಕ್ ಖಾತೆ ಯಲ್ಲಿ ವ್ಯವಹರಿಸುವ ಹಣವೆಲ್ಲವೂ ಅವರ ಆದಾಯವೆಂದು ಪರಿಗಣಿಸ ಬಾರದು. ಈ ಬಗ್ಗೆ ಸದ್ಯದಲ್ಲಿಯೇ ಸರಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.

ಸಭೆಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಕೇಚಂಡ ಕುಶಾಲಪ್ಪ, ಕಾರ್ಯದರ್ಶಿ ಅಣ್ಣೀರ ಹರೀಶ್‍ಮಾದಪ್ಪ, ಜಂಟಿ ಕಾರ್ಯದರ್ಶಿ ಬಾಚಂಗಡ ದಾದದೇವಯ್ಯ, ಖಜಾಂಚಿ ಮಾಣೀರ ವಿಜಯ್‍ನಂಜಪ್ಪ, ಪುತ್ತರಿ ರೈತ ಉತ್ಪಾದಕರ ಸಂಘದ ಅಧ್ಯಕ್ಷ ಕಳ್ಳಂಗಡ ಸುಬ್ಬಯ್ಯ, ಡಾ.ಅಜ್ಜಿನಿಕಂಡ ಸಿ.ಗಣಪತಿ, ಅರಮಣಮಾಡ ಸತೀಶ್‍ದೇವಯ್ಯ, ಮಲ್ಲಂಗಡ ಪ್ರಹ್ಲಾದ್, ಬೊಳ್ಳೇರ ಕೆ.ಪೊನ್ನಪ್ಪ, ಬೊಳ್ಳೇರ ರಾಜಸುಬ್ಬಯ್ಯ, ಅಮ್ಮತ್ತಿ ರೈತ ಸಂಘದ ಮನೆಯಪಂಡ ಗೌತಮ್ ಪೊನ್ನಪ್ಪ, ಬೆಳೆಗಾರ ಒಕ್ಕೂಟದ ಮಾಜಿ ಅಧ್ಯಕ್ಷ ಆದೇಂಗಡ ಅಶೋಕ್, ಅಳಮೇಂಗಡ ಮೋಟಯ್ಯ, ಕಳ್ಳಿಚಂಡ ರತ್ನಪೂವಯ್ಯ, ಗುಡಿಯಂಗಡ ರಾಜ, ತೀತಿರ ಊರ್ಮಿಳಾಸೋಮಯ್ಯ, ಮಾಪಂಗಡ ಯಮುನಾಚಂಗಪ್ಪ, ಐಚೆಟ್ಟಿರ ಸುಬ್ಬಯ್ಯ ಅವರು ಪಾಲ್ಗೊಂಡಿದ್ದರು.