ಕುಶಾಲನಗರ, ಡಿ. 15: ಆಧುನಿಕ ಯುಗದಲ್ಲಿ ಜೀವನದ ಪ್ರಮುಖ ಭಾಗವಾಗಿರುವ ವಿಜ್ಞಾನವನ್ನು ವಿದ್ಯಾರ್ಥಿಗಳು ಜೀವನದ ಪ್ರತಿಯೊಂದು ಹಂತಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕೂಡಿಗೆಯ ಡಯಟ್ ಪ್ರಾಂಶುಪಾಲ ಜವರೇಗೌಡ ಹೇಳಿದರು.

ಕುಶಾಲನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮಕ್ಕಳ ವಿಜ್ಞಾನ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದೈನಂದಿನ ಜೀವನದಲ್ಲಿ ವಿಜ್ಞಾನವು ಅತಿಹೆಚ್ಚಿನ ಪ್ರಮಾಣದಲ್ಲಿ ಅಳವಡಿಕೆಯಾಗಿದೆ. ವಿಜ್ಞಾನದ ಪಾತ್ರ ಬಹಳ ಮುಖ್ಯವಾಗಿರುವ ಕಾರಣ ಮಕ್ಕಳಿಗೆ ಬಾಲ್ಯದಿಂದಲೇ ಶಿಕ್ಷಕರು ವಿಜ್ಞಾನದ ಬಗ್ಗೆ ಆಸಕ್ತಿಯನ್ನು ಮೂಡುವಂತೆ ನೋಡಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕುಶಾಲನಗರ ಪಟ್ಟಣ ಪಂಚಾಯಿತಿ ಸದಸ್ಯ ಬಿ. ಜಯವರ್ಧನ್ ಮಾತನಾಡಿದರು. ಈ ಸಂದರ್ಭ ಶಾಲಾ ಮುಖ್ಯಶಿಕ್ಷಕಿ ಕೆ.ಆರ್. ರಾಣಿ, ಸರ್ಕಾರಿ ಬಾಲಕಿಯರ ಪ್ರೌಢಶಾಲಾ ಮುಖ್ಯಶಿಕ್ಷಕಿ ಪುಷ್ಟ, ಇ.ಸಿ.ಓ ರಾಧಾಕೃಷÀ್ಣ, ಬಿ.ಆರ್.ಸಿ. ಸಂತೋಷ್, ಕ್ಲಸ್ಟರ್ ಅಧಿಕಾರಿ ಸತ್ಯನಾರಾಯಣ, ವಸಂತ ಸೇರಿದಂತೆ ಶಿಕ್ಷಕರು, ನೂರಾರು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಬಗೆಯ ಮಾದರಿಗಳ ತಯಾರಿಕೆ ಮತ್ತು ಪ್ರದರ್ಶನ ನಡೆಯಿತು.