ಮಡಿಕೇರಿ, ಡಿ.15: ಪಟ್ಟಿಕ್ಕಾಡ್ ಜಾಮಿಯಾ ನೂರಿಯ ಅರೇಬಿಕ್ ಕಾಲೇಜಿನ 57ನೇ ವಾರ್ಷಿಕ ಸಮ್ಮೇಳನ ಹಾಗೂ ಸಮಸ್ತ ಕೇರಳ ಜಂ-ಇಯತುಲ್ ಮುಅಲ್ಲಿಮೀನ್ ಸಂಘಟನೆಯ 60ನೇ ವಾರ್ಷಿಕ ಮಹಾ ಸಮ್ಮೇಳನದ ಪ್ರಚಾರಾರ್ಥ ತಾ.17 ರಂದು ಮಡಿಕೇರಿಯಲ್ಲಿ ಆಯೋಜಿತ ‘ಸಮಸ್ತ ಮಹಾ ಸಮ್ಮೇಳನ’ವನ್ನು ಯಶಸ್ವಿಗೊಳಿಸಲು ಸರ್ವರೂ ಕೈಜೋಡಿಸುವಂತೆ ಎಸ್‍ಕೆಎಸ್‍ಎಸ್‍ಎಫ್ ಕೊಡಗು ಜಿಲ್ಲಾ ಘಟಕದ ಪ್ರಮುಖರು ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ನೌಷಾದ್ ಫೈಝಿ ಹಾಗೂ ಕಾರ್ಯದರ್ಶಿ ಅಶ್ರಫ್ ಮಿಸ್ಬಾಹಿ, ಸಮಸ್ತ ಕೇರಳ ಇಸ್ಲಾಮಿಕ್ ಮತ ವಿದ್ಯಾಭ್ಯಾಸ ಬೋರ್ಡ್‍ನ ಅಧೀನದಲ್ಲಿ ಭಾರತ, ಸೌದಿ ಅರೇಬಿಯಾ, ದುಬೈ, ಖತಾರ್, ಓಮಾನ್, ಮಲೇಷಿಯಾ, ಸಿಂಗಾಪುರ್ ಹಾಗೂ ಇನ್ನಿತರ ಗಲ್ಫ್ ರಾಷ್ಟ್ರಗಳಲ್ಲಿ ಒಟ್ಟು 10 ಸಾವಿರ ಮದ್ರಸಗಳು ಕಾರ್ಯಾಚರಿಸುತ್ತಿವೆ. ಇವುಗಳಲ್ಲಿ ಧಾರ್ಮಿಕ ಶಿಕ್ಷಣ ನೀಡುವ ಅಧ್ಯಾಪಕರ ಒಕ್ಕೂಟವಾಗಿರುವ ಕೇರಳ ಜಂ-ಇಯತುಲ್ ಮುಅಲ್ಲಿ ಮೀನ್ ಸಂಘಟನೆ 1959ರಲ್ಲಿ ಸ್ಥಾಪಿಸಲ್ಪಟ್ಟಿದ್ದು, ಇದರ 60ನೇ ವಾರ್ಷಿಕ ಮಹಾ ಸಮ್ಮೇಳನ ತಾ.27ರಿಂದ 29ರವರೆಗೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆಯಲಿದೆ ಯೆಂದು ಮಾಹಿತಿ ನೀಡಿದರು.
ಇದರೊಂದಿಗೆ ಸಮಸ್ತದ ಇಸ್ಲಾಮಿಕ್ ಉನ್ನತ ಶಿಕ್ಷಣ ಸಂಸ್ಥೆಯಾದ ಪಟ್ಟಿಕ್ಕಾಡ್ ಜಾಮಿಯಾ ನೂರಿಯ ಅರೇಬಿಕ್ ಕಾಲೇಜಿನ 57ನೇ ವಾರ್ಷಿಕ ಸಮ್ಮೇಳನ ಜ. 16 ರಿಂದ 19ರ ವರೆಗೆ ಮಲಪ್ಪುರಂನ ಪಟ್ಟಿಕ್ಕಾಡಿನಲ್ಲಿ ನಡೆಯಲಿದ್ದು, ಈ ಎರಡು ಸಮ್ಮೇಳನಗಳ ಪ್ರಚಾರಾರ್ಥ ವಾಗಿ ತಾ.17ರಂದು ನಗರದ ಗಾಂಧಿ ಮೈದಾನದಲ್ಲಿ ಮಧ್ಯಾಹ್ನ 3 ಗಂಟೆಗೆ ಸಮಸ್ತ ಮಹಾ ಸಮ್ಮೇಳನ ನಡೆಯಲಿದೆಯೆಂದು ವಿವರಗಳನ್ನಿತ್ತರು.
‘ವಿಶ್ವ ಶಾಂತಿಗೆ ಧಾರ್ಮಿಕ ವಿದ್ಯೆ’ ಎಂಬ ಧ್ಯೇಯವಾಕ್ಯದೊಂದಿಗೆ ನಡೆಯಲಿರುವ ಸಮ್ಮೇಳನದ ಯಶಸ್ಸಿಗೆ ಸರ್ವರು ಸಹಕರಿಸುವಂತೆ ಕೋರಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಕೋಶಾಧಿಕಾರಿ ಜಿ.ಎಂ. ಅಬೂಬಕ್ಕರ್ ಸಿದ್ದಿಕ್ ಹಾಜಿ, ಉಪಾಧ್ಯಕ್ಷ ಕೆ.ಎಸ್. ಅಬ್ದುಲ್ ಮಜೀದ್, ಉಪಕಾರ್ಯ ದರ್ಶಿ ಶಮೀರ್ ಸಿದ್ದಾಪುರ ಹಾಗೂ ಸದಸ್ಯ ಅಬ್ದುಲ್ ರಹಮಾನ್ ಉಪಸ್ಥಿತರಿದ್ದರು.