ಕುಶಾಲನಗರ, ಡಿ. 14: ಕುಶಾಲನಗರ ವ್ಯಾಪ್ತಿಯಲ್ಲಿ ದಿನೇದಿನೇ ನದಿ, ಕೆರೆ, ವ್ಯಾಪ್ತಿಯನ್ನು ಅಕ್ರಮವಾಗಿ ಕಲ್ಲು, ಬಂಡೆ, ಮಣ್ಣುಗಳನ್ನು ಹಾಕಿ ಜಲಮೂಲಗಳ ಅಸ್ತಿತ್ವಕ್ಕೆ ಧಕ್ಕೆ ಉಂಟು ಮಾಡುತ್ತಿರುವ ಪ್ರಕರಣಗಳು ಏರ ತೊಡಗಿವೆ. ಇದರಿಂದ ಮಳೆಗಾಲದಲ್ಲಿ ಪ್ರವಾಹ ಬಂದು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗುತ್ತಿದ್ದರೂ ಸ್ಥಳೀಯ ಆಡಳಿತಗಳು ಇಂತಹ ಕೃತ್ಯಗಳಿಗೆ ಕಡಿವಾಣ ಹಾಕುವಲ್ಲಿ ವಿಫಲಗೊಂಡಿವೆ.

ಕುಶಾಲನಗರದ ಕಾವೇರಿ ನದಿಯ ವ್ಯಾಪ್ತಿಯ ಉದ್ದಕ್ಕೂ ನದಿ ತಟಗಳಲ್ಲಿ ಕಲ್ಲುಮಣ್ಣುಗಳ ರಾಶಿ ತುಂಬಿ ನದಿಯ ನೀರಿನ ಹರಿವಿಗೆ ಅಡ್ಡಿ ಮಾಡುವದು ಒಂದೆಡೆಯಾದರೆ ಪಟ್ಟಣದ ಮುಖ್ಯರಸ್ತೆ ಬದಿಯಲ್ಲಿರುವ ಕೆರೆಗಳ ಒತ್ತುವರಿ ಕೂಡ ನಿರಂತರವಾಗಿ ನಡೆಯುತ್ತಿರುವ ದೃಶ್ಯ ಕಂಡುಬಂದಿದೆ.

ಕುಶಾಲನಗರ ಮಡಿಕೇರಿ ರಸ್ತೆಯಲ್ಲಿರುವ ತಾವರೆಕೆರೆಗೆ ವ್ಯಕ್ತಿಯೊಬ್ಬ ಭಾರೀ ಗಾತ್ರದ ಬಂಡೆಗಳನ್ನು ತಂದು ತುಂಬಿಸುತ್ತಿರುವ ದೃಶ್ಯ ಕಂಡುಬಂದಿದ್ದರೂ ಯಾವದೇ ರೀತಿಯ ಕ್ರಮಕ್ಕೆ ಮುಂದಾಗದಿರುವದು ಜನರಲ್ಲಿ ಸಂಶಯಕ್ಕೆ ಎಡೆಮಾಡಿದೆ. ಕೆರೆಯ ಬದಿಯಲ್ಲಿರುವ ಒಳಚರಂಡಿ ಯೋಜನೆಯ ಪೈಪ್‍ಗಳಿಗೂ ಬಂಡೆಗಳನ್ನು ಹಾಕಿ ಮುಚ್ಚಿರುವ ದೃಶ್ಯ ಕಂಡುಬಂದಿದೆ.

ಕಾಲೇಜೊಂದರ ಪಕ್ಕದಲ್ಲಿ ಇರುವ ಕೆರೆ ಬದಿಯಲ್ಲಿ ಭಾರೀ ಗಾತ್ರದ ಕಲ್ಲು ಬಂಡೆಗಳನ್ನು ತಂದು ಸಮತಟ್ಟು ಮಾಡುತ್ತಿರುವ ಬಗ್ಗೆ ನಾಗರಿಕರು ಪಟ್ಟಣ ಪಂಚಾಯ್ತಿಗೆ ದೂರಿದ್ದು ಈ ಬಗ್ಗೆ ಮಾಲೀಕರಿಗೆ ಕೆಲಸ ಸ್ಥಗಿತಗೊಳಿಸಲು ಸೂಚನೆ ನೀಡಲಾಗಿದೆ ಎನ್ನುತ್ತಾರೆ ಪ.ಪಂ. ಮುಖ್ಯಾಧಿಕಾರಿ ಸುಜಯ್ ಕುಮಾರ್. ಈ ಹಿಂದೆ ತಾವರೆಕೆರೆಗೆ ಕಲ್ಲುಮಣ್ಣು ತುಂಬಿ ಕೆರೆಯನ್ನು ರಸ್ತೆಯನ್ನಾಗಿ ಪರಿವರ್ತಿಸಿದ ಸಂದರ್ಭ ಅಂದಿನ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಮಾಹಿತಿ ದೊರೆತ ತಕ್ಷಣ ತೆರವುಗೊಳಿಸಿ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲು ಯಶಸ್ವಿಯಾಗು ವದರೊಂದಿಗೆ ಕೆರೆಯ ಅಸ್ತಿತ್ವ ಉಳಿಸುವಲ್ಲಿ ಯಶಸ್ವಿಯಾಗಿದ್ದರು.

ಕೆರೆಯ ಅಸ್ತಿತ್ವವನ್ನು ಉಳಿಸುವ ಮೂಲಕ ಜಲಮೂಲಗಳ ಸಂರಕ್ಷಣೆಯಾಗಬೇಕು ಎಂದು ಕಾವೇರಿ ರಿವರ್ ಸೇವಾ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಮಂಡೇಪಂಡ ಬೋಸ್ ಮೊಣ್ಣಪ್ಪ ಕೂಡಲೆ ಕೆರೆಯ ವ್ಯಾಪ್ತಿಯನ್ನು ಒಳಗೊಂಡಂತೆ ಶಾಶ್ವತ ಆವರಣ ಬೇಲಿ ನಿರ್ಮಿಸಲು ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು ಎಂದಿದ್ದಾರೆ. ಕೆರೆ ಬದಿಯಲ್ಲಿ ತುಂಬಿಸಿರುವ ಬಂಡೆಗಳನ್ನು ಕೂಡಲೆ ತೆರವುಗೊಳಿಸಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಕುಶಾಲನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಕೆರೆ ಕಟ್ಟೆಗಳು ಕೆಲವರ ಸ್ವಾರ್ಥಕ್ಕೆ ಬಲಿಯಾಗುತ್ತಿದ್ದು ಈ ಬಗ್ಗೆ ಕೂಡಲೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಕೆರೆ ಕಟ್ಟೆಗಳ ಸಂರಕ್ಷಣೆಗೆ ಸಂಬಂಧಿಸಿದ ಸ್ಥಳೀಯ ಆಡಳಿತದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

- ಚಂದ್ರಮೋಹನ್