ಸೋಮವಾರಪೇಟೆ,ಡಿ.15: ಸ್ಥಳೀಯ ಪ್ರತಿಭೆಗಳ ಅವಿರತ ಶ್ರಮದಿಂದ ಮೂಡಿಬಂದಿರುವ, ಕ್ರೈಸ್ತ ಸಾಹಿತ್ಯ ಕ್ಷೇತ್ರದಲ್ಲಿಯೇ ವಿನೂತನ ಪ್ರಯತ್ನವಾಗಿರುವ ‘ಸಮೃದ್ಧಿ’ ಸಂಗೀತಗಳ ಸಿ.ಡಿ. ಬಿಡುಗಡೆ ಇಲ್ಲಿನ ಜಯವೀರ ಮಾತೆ ಚರ್ಚ್‍ನ ಹಳೆಯ ಸಭಾಂಗಣದಲ್ಲಿ ನೆರವೇರಿತು.

ಸೋಮವಾರಪೇಟೆಯ ಸಂಗೀತ ಕಲಾವಿದ ಪೀಟರ್ ಮತ್ತು ಕವಿತ ದಂಪತಿಗಳ ನೇತೃತ್ವದಲ್ಲಿ, ಈಗಾಗಲೇ ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಸೆಲೆಬ್ರಿಟಿ ಕಲಾವಿದರಿಂದ ಹಿಡಿದು ಸೋಮವಾರಪೇಟೆ ಪಟ್ಟಣದ ಸ್ಥಳೀಯ ಕಲಾವಿದರ ದನಿಯಲ್ಲಿ ಮೂಡಿಬಂದಿರುವ ವೈವಿಧ್ಯಮಯ ಹಾಡುಗಳನ್ನು ಒಳಗೊಂಡ ಸಿ.ಡಿ. ಯನ್ನು ವಿವಿಧ ಧರ್ಮಕೇಂದ್ರದ ಗುರುಗಳು, ಜನಪ್ರತಿನಿಧಿಗಳು ಬಿಡುಗಡೆ ಮಾಡಿದರು.

ಫಾ. ಡಾ. ಬರ್ನಾಡ್ ಪ್ರಕಾಶ್, ಕೆ.ಎ. ವಿಲಿಯಂ, ಫಾ. ಸಂಜಯ್, ಟೋನಿ ರೊಜಾರಿಯೋ, ಜಾನ್‍ಸನ್, ವಿನ್ಸೆಂಟ್ ಮೊಂತೆರೋ, ಫಾ. ಎಂ. ರಾಯಪ್ಪ ಅವರುಗಳು ಸಾಹಿತ್ಯ ರಚಿಸಿ ಸಂಗೀತ ಅಳವಡಿಸಿರುವ, ‘ಆಶೀರ್ವಚನ, ನಿನ್ನಿಂದ ನಾನು ಸಮೃದ್ಧವಾಗಿ, ಮಾತಾ ಮಮತಾ ಮಯಿ, ಕಂದ ನೀ ಚೆಂದ..’ ಸೇರಿದಂತೆ 13 ಹಾಡುಗಳನ್ನು ಒಳಗೊಂಡಿರುವ ಸಿ.ಡಿ. ಬಿಡುಗಡೆ ಸಮಾರಂಭಕ್ಕೆ ಎಲ್ಲಾ ಧರ್ಮಗಳ ಮಂದಿ ಭಾಗಿಯಾಗಿದ್ದರು.

ಪ್ರಖ್ಯಾತ ಗಾಯಕರಾದ ರಾಜೇಶ್ ಕೃಷ್ಣನ್, ಅನುರಾಧ ಭಟ್ ಅವರುಗಳೊಂದಿಗೆ, ಸ್ಥಳೀಯ ಗಾಯಕರಾದ ಲಿಜೋ ಜೋಶ್, ಕವಿತಾ ಪೀಟರ್, ಫಾ. ಸಂಜಯ್, ಜನಾರ್ಧನ್, ಎ.ಪಿ. ಪೀಟರ್, ನಿತೀಶ್ ಪಿಂಟೋ ಅವರುಗಳು ಹಾಡಿರುವ ಗೀತೆಗಳನ್ನು ಒಳಗೊಂಡಿ ರುವ, ಕ್ರೈಸ್ತ ಸಾಹಿತ್ಯವನ್ನೊಳಗೊಂಡ ‘ಸಮೃದ್ಧಿ’ ಸಿ.ಡಿ.ಯನ್ನು ಫಾ. ಸಂಜಯ್ ಅವರ ನೇತೃತ್ವದಲ್ಲಿ ಬಿಡುಗಡೆ ಮಾಡಲಾಯಿತು.

ಈ ಸಂದರ್ಭ ಮಾತನಾಡಿದ ಫಾ. ಸಂಜಯ್, ಎಲ್ಲಾ ಕಾಲಕ್ಕೂ ಸಂಗೀತ ಸಲ್ಲುತ್ತದೆ. ಮುಕ್ತ ಮನಸ್ಸಿನಿಂದ ಅದನ್ನು ಸ್ವೀಕರಿಸುವಂತಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಧರ್ಮಕೇಂದ್ರಗಳ ಗುರುಗಳಾದ ಫಾ. ಬರ್ನಾಡ್ ಪ್ರಕಾಶ್, ಎಂ. ರಾಯಪ್ಪ, ವಿನ್ಸೆಂಟ್ ಮೊಂತೆರೋ, ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ, ಬೇಳೂರು ಗ್ರಾ.ಪಂ. ಸದಸ್ಯ ಕೆ.ಎ. ಯಾಕೂಬ್, ಹಿರಿಯ ಚಲನಚಿತ್ರ ನಟ ಜೈಜಗದೀಶ್, ತಾ.ಪಂ. ಮಾಜಿ ಅಧ್ಯಕ್ಷ ಎಸ್.ಎಂ. ಡಿಸಿಲ್ವಾ, ಪ.ಪಂ. ಸದಸ್ಯೆ ಶೀಲಾ ಡಿಸೋಜ, ಕಾರ್ಯಕ್ರಮ ಸಂಯೋಜಕರಾದ ಪೀಟರ್, ಕವಿತಾ ಪೀಟರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸಾಧಕರಿಗೆ ಸನ್ಮಾನ: ಇದೇ ಸಂದರ್ಭ ಸಾಹಿತ್ಯ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಸಮೃದ್ಧಿ ತಂಡದಿಂದ ಸನ್ಮಾನಿಸಲಾಯಿತು.

ರಿಯಾಲಿಟಿ ಶೋ ವಿಜೇತೆ ಮೆಬಿನಾ, ತಬಲ ವಾದಕ ವಿಜೇತ್, ಖಾಸಗಿಯಾಗಿ ಲೈಬ್ರೆರಿ ಸ್ಥಾಪಿಸಿದ್ದ ಕೆ.ಜಿ. ಸುರೇಶ್, ಗಾಯಕ ಜನಾರ್ಧನ್, ಲೇಖಕಿ ಶರ್ಮಿಳಾ ರಮೇಶ್, ಭಾಷಾಪ್ರವೀಣ ಎಂ.ಇ. ಮಹಮ್ಮದ್, ಸಮಾಜ ಸೇವಕ ಮೈಕಲ್ ವೇಗಸ್, ಬಹುಮುಖ ಪ್ರತಿಭೆಯ ಟಿ.ಆರ್. ಪ್ರಭುದೇವ್, ಗಾಯಕ ಶಾಂತಳ್ಳಿ ಗಣೇಶ್, ಸಮಾಜಸೇವಕ ಫ್ರಾನ್ಸಿಸ್ ಡಿಸೋಜ, ಚಲನಚಿತ್ರ ನಟ ಜೈಜಗದೀಶ್, ಚಿತ್ರ ನಿರ್ಮಾಪಕ ಎಸ್‍ಎಂ. ಪೂವಯ್ಯ ಅವರುಗಳನ್ನು ಸನ್ಮಾನಿಸಲಾಯಿತು.

ಇದರೊಂದಿಗೆ ಚಿತ್ರ ನಿರ್ದೇಶಕ ಸುರೇಶ್ ಹಾನಗಲ್, ಗಿಟಾರಿಸ್ಟ್ ಧನಂಜಯ, ಗಾಯಕರಾದ ಆನಂದ್, ತೆರೇಸಾ, ಶೀಲಾ ಡಿಸೋಜ, ಶಾಂತಿ ಡಿಸಿಲ್ವಾ, ಮಾರ್ಗರೇಟ್ ಲೋಬೋ, ಡೆವಿಡ್, ಕುಶಾಲನಗರದ ಯೇಸು ದಾಸ್, ಧಾರ್ಮಿಕ ಕ್ಷೇತ್ರದಲ್ಲಿ ಫಾ. ಸಿ. ರಾಯಪ್ಪ, ಸಂಜಯ್, ಬರ್ನಾಡ್ ಪ್ರಕಾಶ್, ಎಂ. ರಾಯಪ್ಪ, ವಿನ್ಸೆಂಟ್ ಮೊಂತೆರೋ ಅವರುಗಳನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.