ಒಡೆಯನಪುರ, ಡಿ. 13: ಜಿಲ್ಲಾ ಪಂಚಾಯಿತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಮಗ್ರ ಶಿಕ್ಷಣ ಕರ್ನಾಟಕ, ಭಾರತ ಜ್ಞಾನ ವಿಜ್ಞಾನ ಸಮಿತಿ ಮತ್ತು 2019-20ನೇ ಸಾಲಿನ ರಾಷ್ಟ್ರೀಯ ಆವಿಷ್ಕಾರ ಅಭಿಯಾನ ಯೋಜನಡಿಯಲ್ಲಿ ಶನಿವಾರಸಂತೆ ಸರಕಾರಿ ಪ್ರಾಥಮಿಕ ಶಾಲೆಗಳ ಕ್ಲಸ್ಟರ್ ವ್ಯಾಪ್ತಿಯ ಮಕ್ಕಳ ವಿಜ್ಞಾನ ಹಬ್ಬಕ್ಕೆ ಚಾಲನೆ ನೀಡಲಾಯಿತು. ತ್ಯಾಗರಾಜ ಕಾಲೋನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2 ದಿನಗಳ ವರೆಗೆ ನಡೆಯುವ ಮಕ್ಕಳ ವಿಜ್ಞಾನ ಹಬ್ಬವನ್ನು ಮಕ್ಕಳಿಂದ ವಿನೂತನವಾಗಿ ಉದ್ಘಾಟಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಶನಿವಾರಸಂತೆ ಕ್ಲಸ್ಟರ್ ಸಿಆರ್‍ಪಿ ಜಾನ್’ಡಿಸೋಜ, ವಿದ್ಯಾರ್ಥಿಗಳು ಕೊಠಡಿಯಲ್ಲಿ ಯಾಂತ್ರಿಕ ಶೈಲಿ ಎಂಬಂತೆ ಪಠ್ಯ ಕಲಿಕೆಯ ಅಭ್ಯಾಸವನ್ನು ನಡೆಸುತ್ತಾರೆ. ಆದರೆ ಕೇವಲ ಪಠ್ಯ ಚಟುವಟಿಕೆ ಮೀಸಲಾಗದೆ ಪಠ್ಯೇತರ ಕಲಿಕೆಗೂ ಅವಕಾಶ ಮಾಡಿಕೊಡುವ ಉದ್ದೇಶದಿಂದ ಸರಕಾರ ಮತ್ತು ಶಿಕ್ಷಣ ಇಲಾಖೆ ಮಕ್ಕಳ ವಿಜ್ಞಾನಕ್ಕೆ ಪೂರಕವಾಗುವಂತಹ ಕಲಿಕೇತರ ಪ್ರತಿಭೆಗಳನ್ನು ಅನಾವರಣಗೊಳಿಸುವ ಸಲುವಾಗಿ ಮಕ್ಕಳಲ್ಲಿ ವಿಜ್ಞಾನ ಮನೋಭಾವನೆ ಮೂಡಿಸುವ ಮಕ್ಕಳಿಗಾಗಿ ಪ್ರಾಯೋಗಿಕ ವಿಜ್ಞಾನ ಹಬ್ಬವನ್ನು ಆಯೋಜನೆ ಮಾಡುತ್ತಿದೆ ಎಂದರು.
ಸೋಮವಾರಪೇಟೆ ತಾಲೂಕು ಬಿಆರ್‍ಪಿ ವಿಜಯ್‍ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿರುವ ಜ್ಞಾನವನ್ನು ಇತರರಿಗೆ ಕಲಿಸಿಕೊಡುವ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಮಕ್ಕಳ ವಿಜ್ಞಾನ ಮೇಳವನ್ನು ನಡೆಸಲಾಗುತ್ತಿದೆ ಎಂದರು. ಕ್ಲಸ್ಟರ್ ವ್ಯಾಪ್ತಿಯಿಂದ ಮೊದಲುಗೊಂಡು ತಾಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ನಡೆಯುವ ಮಕ್ಕಳ ವಿಜ್ಞಾನ ಮೇಳದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಆಸಕ್ತಿ ಸೇರಿದಂತೆ ಕಲೆ, ಸಾಂಸ್ಕøತಿಕ ವಿಷಯಗಳ ಬಗ್ಗೆ ಜ್ಞಾನ ಆಸಕ್ತಿ ಹೆಚ್ಚಾಗುತ್ತದೆ ಎಂದರು.
ಶನಿವಾರಸಂತೆ ಗ್ರಾ.ಪಂ. ಸದಸ್ಯೆ ಉಷ ಜಯೇಶ್ ಮಾತನಾಡಿ, ಮಕ್ಕಳ ವಿಜ್ಞಾನ ಹಬ್ಬದಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ಕಲಿಕೇತರ ಚಟುವಟಿಕೆಗೆ ಪೂರಕವಾದ ವಾತಾವರಣ ಸೃಷ್ಟಿಯಾಗಲಿದೆ. ಮಕ್ಕಳು ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕೊಡ್ಲಿಪೇಟೆ ಕ್ಲಸ್ಟರ್ ಸಿಆರ್‍ಪಿ ಜೆ.ಡಿ.ಸುರೇಶ್, ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಎಸ್‍ಡಿಎಂಸಿ ಅಧ್ಯಕ್ಷ ಎಸ್.ಎಸ್. ಸುರೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಸ್‍ಡಿಎಂಸಿ ಉಪಾಧ್ಯಕ್ಷೆ ಭಾಗ್ಯ, ಸದಸ್ಯೆ ದಮಯಂತಿ, ಗ್ರಾ.ಪಂ.ಸದಸ್ಯೆ ಹೇಮಾವತಿ ಶಾಲಾ ಮುಖ್ಯ ಶಿಕ್ಷಕ ಪುಟ್ಟಸ್ವಾಮಿ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ವಿಜ್ಞಾನ ಮೇಳದ ಸಂಪನ್ಮೂಲ ವ್ಯಕ್ತಿಗಳು ಹಾಜರಿದ್ದರು. ಶನಿವಾರಸಂತೆ ಕ್ಲಸ್ಟರ್ ವ್ಯಾಪ್ತಿಗೆ ಸೇರಿದ ವಿವಿಧ 5 ಸರಕಾರಿ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರೆ, ವಿವಿಧ ಶಾಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳು, ಶಿಕ್ಷಕರು, ಮತ್ತು ಪೋಷಕರು ಹಾಗೂ ಸಾರ್ವಜನಿಕರು ಮಕ್ಕಳ ವಿಜ್ಞಾನ ಹಬ್ಬದ ಕಿರೀಟ ತೊಟ್ಟು ಪಟ್ಟಣದ ಮುಖ್ಯ ರಸ್ತೆಯಿಂದ ಶಾಲೆಯವರೆಗೆ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ಮೂಲಕ ಸಾಗಿದರು.
-ವಿ.ಸಿ. ಸುರೇಶ್