ಸೋಮವಾರಪೇಟೆ, ಡಿ. 13: ಪಟ್ಟಣದಲ್ಲಿ ನಿರ್ಮಿಸುತ್ತಿರುವ ಅಂಬೇಡ್ಕರ್ ಭವನದಲ್ಲಿ ಯಾವದೇ ಇಲಾಖೆಯ ಕಚೇರಿ ತೆರೆಯಲು ಮುಂದಾಗಬಾರದು. ಸಮಾಜದ ಚಟುವಟಿಕೆಗಳಿಗೆ ಮಾತ್ರ ಕಟ್ಟಡವನ್ನು ಬಳಸಿಕೊಳ್ಳುವಂತಾಗಬೇಕೆಂದು ಪ್ರಮುಖರು ಒತ್ತಾಯಿಸಿದರು.
ತಾಲೂಕು ತಹಶೀಲ್ದಾರ್ ಗೋವಿಂದರಾಜು ಅವರ ಅಧ್ಯಕ್ಷತೆಯಲ್ಲಿ, ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಿತರಕ್ಷಣಾ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಸಮಿತಿ ಸದಸ್ಯ ಬಿ.ಈ. ಜಯೇಂದ್ರ, ಅಂಬೇಡ್ಕರ್ ಭವನದ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಕಚೇರಿ ತೆರೆಯಲು ಇಲಾಖೆ ಮುಂದಾಗಿದೆ. ಆದರೆ ಯಾವದೇ ಕಾರಣಕ್ಕೂ ಇಲ್ಲಿ ಕಚೇರಿ ತೆರೆಯಬಾರದು. ಸಮಾಜದ ಚಟುವಟಿಕೆಗಳಿಗೆ ಮಾತ್ರ ಕಟ್ಟಡ ಬಳಕೆಯಾಗಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಬಾಲಕೃಷ್ಣ, ಈ ಹಿಂದಿನ ಸಭೆಯಲ್ಲಿ ತೀರ್ಮಾನಿಸಿದಂತೆ ಈಗಾಗಲೇ ಇಲಾಖೆಯ ಮೇಲಧಿಕಾರಿಗಳಿಗೆ ಈ ಬಗ್ಗೆ ಪತ್ರ ಬರೆಯಲಾಗಿದೆ. ಶೀಘ್ರದಲ್ಲಿಯೇ ಕಟ್ಟಡದ ಕಾಮಗಾರಿ ಮುಗಿಸಿ ಇಲಾಖೆಗೆ ಕಟ್ಟಡವನ್ನು ಹಸ್ತಾಂತರಿಸುವಂತೆ ಜಿಲ್ಲಾ ಪಂಚಾಯಿತಿ ಅಭಿಯಂತರರಿಗೆ ನಿರ್ದೇಶನ ನೀಡಿರುವದಾಗಿ ಸಭೆಗೆ ತಿಳಿಸಿದರು.
ಈ ಹಿಂದೆ ನಡೆದ ಸಭೆಯಲ್ಲಿ ಅಧಿಕಾರಿಗಳು ಗೈರಾಗಿದ್ದು, ಅವರಿಗೆ ನೊಟೀಸ್ ನೀಡಲು ನಿರ್ಣಯ ಕೈಗೊಳ್ಳಲಾಗಿತ್ತು. ಮತ್ತೆ ಇಂದಿನ ಸಭೆಗೂ ಕೆಲವು ಅಧಿಕಾರಿಗಳು ಗೈರಾಗಿದ್ದಾರೆ. ಅವರಿಗೆ ನೋಟೀಸ್ ನೀಡಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಸಮಿತಿಯ ಸದಸ್ಯರು ಒತ್ತಾಯಿಸಿದರು.
ದೊಡ್ಡಹಣಕೋಡು ಗ್ರಾಮದ ಪಾರಂಪರಿಕ ದೇವರ ಬನ ಒತ್ತುವರಿಯಾಗಿದೆ ಎಂಬ ಬಗ್ಗೆ ಸಮಿತಿಗೆ ದೂರು ಬಂದ ಹಿನ್ನೆಲೆ ಅಗತ್ಯ ಕ್ರಮವಹಿಸಲಾಗಿದೆ. ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಗ್ರಾಮದ ಸರ್ವೆ ನಂ. 32/1 ರಲ್ಲಿ ಸಂಪೂರ್ಣ ಜಾಗವಿದ್ದು, ದೇವರ ಬನಕ್ಕೆ ಪ್ರತ್ಯೇಕವಾಗಿ ಯಾವದೇ ಸರ್ವೆ ನಂ. ಇಲ್ಲದಿರುವದರಿಂದ ಸ್ಥಳ ಗುರುತಿಸಲು ಸಾಧ್ಯವಾಗುತಿಲ್ಲ ಎಂದು ವರದಿ ನೀಡಿದ್ದಾರೆ ಎಂದು ಸಮಾಜಕಲ್ಯಾಣ ಇಲಾಖೆಯ ಅಧಿಕಾರಿ ತಿಳಿಸಿದರು.
ದುಂಡಳ್ಳಿ ಗ್ರಾಮ ಪಂಚಾಯಿತಿಯ ಈರಮ್ಮನವರ ಮನೆಗೆ ತೆರಳುವ ರಸ್ತೆ ಅತಿಕ್ರಮಣವಾಗಿದ್ದು, ಬಿಡಿಸಿ ಕೊಡುವಂತೆ ಕಳೆದ ಹಲವು ವರ್ಷಗಳಿಂದ ದೂರು ನೀಡಿದ್ದಾರೆ. ಹಿಂದಿನ ಸಭೆಯಲ್ಲಿ ಸ್ಥಳ ಪರಿಶೀಲನೆ ಮಾಡುವಂತೆ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಈರಮ್ಮನವರು ಕಚೇರಿಗೆ ಯಾವದೇ ದಾಖಲಾತಿ ನೀಡದಿರುವದರಿಂದ ಸ್ಪಷ್ಟ ಮಾಹಿತಿ ಇರುವದಿಲ್ಲ. ಪ್ರಕರಣಕ್ಕೆ ಸಂಬಂದಿಸಿದಂತೆ ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗಕ್ಕೆ ಮಾಹಿತಿ ನೀಡಿರುವದಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮೇಶ್ ತಿಳಿಸಿದರು. ಹೇರೂರು ಜೇನು ಕುರುಬರ ಹಾಡಿಯಲ್ಲಿ 110 ಕುಟುಂಬಗಳು ವಾಸವಿದ್ದು, ಸ್ಥಳ ಸರ್ವೆಯಾದರೂ ಇಂದಿಗೂ ಹಕ್ಕು ಪತ್ರ ವಿತರಿಸಿಲ್ಲ ಎಂದು ಸದಸ್ಯ ಜೆ.ಕೆ. ಸುಬ್ರಮಣಿ ಆರೋಪಿಸಿದರು.
ಇಲ್ಲಿ ಕಳೆದ 50 ವರ್ಷಗಳಿಂದ ಜೇನು ಕುರುಬರು ವಾಸಿಸುತ್ತಿದ್ದು, ಈ ಸ್ಥಳ ಕೊಡಗು ಜಿಲ್ಲಾ ಸಮಾಜ ಕಲ್ಯಾಣ ಇಲಾಖಾಧಿಕಾರಿಯ ಹೆಸರಿನಲ್ಲಿದೆ. ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ, ಹಕ್ಕು ಪತ್ರ ವಿತರಿಸಲು ಸರ್ಕಾರದ ನಿರ್ದೇಶನ ಕೋರಿ ತಹಶೀಲ್ದಾರ್ ಕಚೇರಿ ಮೂಲಕ ಉಪವಿಭಾಗಾಧಿಕಾರಿಗಳಿಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ತಹಶೀಲ್ದಾರ್ ಗೋವಿಂದರಾಜು ಸಭೆಗೆ ತಿಳಿಸಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ನೀಡಿರುವ ಸ್ಥಳ ಇಂದಿಗೂ ಅವರ ಹೆಸರಿನಲ್ಲಿ ಹದ್ದುಬಸ್ತಾಗಿಲ್ಲ. ಕೂಡಲೇ ಮಾಡಿಸಿಕೊಡುವಂತೆ ಜಯೇಂದ್ರ ಆಗ್ರಹಿಸಿದರು. ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರ್ಕಳ್ಳಿಯ ಪರಿಶಿಷ್ಟ ಜಾತಿಯವರ 3 ಎಕರೆ ಸ್ಮಶಾನದ ಜಾಗದಲ್ಲಿ ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದರು. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಜಾತಿ ಪ್ರಮಾಣ ಪತ್ರ ಮತ್ತು ದಾಖಲಾತಿಗಳನ್ನು ಮಾಡಿ ಕೊಡಲು ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ ಎಂದು ಸುಬ್ರಮಣಿ ದೂರಿದರು. ಜಾತಿ ಮತ್ತು ಆದಾಯ ದೃಢೀಕರಣ ಪಡೆಯುವದನ್ನು ಆನ್‍ಲೈನ್ ಮಾಡಿದ್ದು, ಸಮಸ್ಯೆ ಯಾಗುವದಿಲ್ಲ. ದಾಖಲಾತಿಗೆ ಸಂಬಂಧಿಸಿದಂತೆ ಯಾವದೇ ಕೆಲಸಗಳನ್ನು ಅಧಿಕಾರಿಗಳು ಮಾಡಿಕೊಡಲು ತಡಮಾಡಿದಲ್ಲಿ ದೂರು ನೀಡುವಂತೆ ತಹಶೀಲ್ದಾರ್ ತಿಳಿಸಿದರು.
ಸಭೆಯಲ್ಲಿ ಸಮಿತಿ ಸದಸ್ಯರಾದ ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ರಾಜೇಶ್, ಶನಿವಾರಸಂತೆ ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ಸುಮತಿ, ಜಿಲ್ಲಾ ಪಂಚಾಯಿತಿ ಕುಡಿಯುವ ನೀರು ಸರಬರಾಜು ವಿಭಾಗದ ಸಹಾಯಕ ಕಾರ್ಯಪಾಲ ಅಭಿಯಂತರ ರಮೇಶ್, ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ವೀರೇಂದ್ರ, ವೈದ್ಯಾಧಿಕಾರಿ ಚೇತನ್ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.