ನವದೆಹಲಿ, ಡಿ. 13: ರಾಜ್ಯದಲ್ಲಿರುವ ಕೊಡವ ಸಮುದಾಯವನ್ನು ಬುಡಕಟ್ಟು ಪಂಗಡದ ವ್ಯಾಪ್ತಿಗೆ ಸೇರಿಸಬೇಕು ಎಂದು ರಾಜ್ಯಸಭಾ ಸದಸ್ಯರುಗಳಾದ ಬಿ.ಕೆ. ಹರಿಪ್ರಸಾದ್ ಹಾಗೂ ಕುಪೇಂದ್ರ ರೆಡ್ಡಿ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಹರಿಪ್ರಸಾದ್ ಅವರು ಕೊಡವ ಸಂಸ್ಕøತಿ ದೇಶದಲ್ಲಿ ಅತ್ಯಂತ ವಿಶಿಷ್ಟವಾಗಿದ್ದು, ಕೊಡವ ನ್ಯಾಷನಲ್ ಕೌನ್ಸಿಲ್ ತನ್ನ ಬೇಡಿಕೆ ಕುರಿತು ಹಲವು ವರ್ಷಗಳಿಂದ ಹೋರಾಡುತ್ತಿದೆ. ಕೊಡವರಿಗೆ ನೈಜವಾಗಿ ವಿಶೇಷ ಸ್ಥಾನಮಾನ ಕೊಡಬೇಕಿದೆ ಎಂದು ಒತ್ತಾಯಿಸಿದರು. ಅಲ್ಲದೆ ಕೊಡವರಿಗೆ ಒಂದು ಕೋವಿಯ ಹಕ್ಕಿನಿಂದ ವಿನಾಯಿತಿ ನೀಡುವಂತೆಯೂ ಒತ್ತಾಯಿಸಿದರು. (ಮೊದಲ ಪುಟದಿಂದ) ಮತ್ತೊಬ್ಬ ಸದಸ್ಯ ಕುಪೇಂದ್ರ ರೆಡ್ಡಿ ಮಾತನಾಡಿ, ದಕ್ಷಿಣ ಕರ್ನಾಟಕ ಭಾಗದ ಕೊಡಗು ಪ್ರದೇಶದಲ್ಲಿ ಕೊಡವ ಸಮುದಾಯದ ಮಂದಿ ಹಲವು ವರ್ಷಗಳಿಂದ ನೆಲೆಸಿದ್ದಾರೆ. ಬುಡಕಟ್ಟು ಸಮುದಾಯದವರ ರೀತಿಯಲ್ಲೇ ಕೊಡವ ಸಂಸ್ಕøತಿ ಹಾಗೂ ಸಂಪ್ರದಾಯ ಇದೆ. ಸಮುದಾಯದವರ ಬಗ್ಗೆ ಅಧ್ಯಯನ ಹಾಗೂ ಸಮೀಕ್ಷೆ ಮಾಡಲು ಕರ್ನಾಟಕ ಸರ್ಕಾರ ಹಣವನ್ನೂ ಕೂಡ ನೀಡಿದೆ ಎಂದು ವಿವರಿಸಿದರು. ಹಲವು ವರ್ಷಗಳಿಂದ ಕೊಡವ ನ್ಯಾಷನಲ್ ಕೌನ್ಸಿಲ್ ತಮ್ಮನ್ನು ಎಸ್‍ಟಿ ಕೆಟಗರಿಗೆ ಸೇರಿಸಬೇಕು ಎಂದು ಹೋರಾಟ ಮಾಡುತ್ತಿದೆ. ಕೊಡವರ ಜನಸಂಖ್ಯೆ ವೇಗವಾಗಿ ಕ್ಷೀಣಿಸುತ್ತಿದ್ದು, ಅಲ್ಪಸಂಖ್ಯಾತರಾಗುತ್ತಿದ್ದಾರೆ. ಕೊಡವ ಸಮುದಾಯದ ಏಳಿಗೆ, ಅವರ ಅಭಿವೃದ್ಧಿಗಾಗಿ ಈ ಸಮುದಾಯವನ್ನು ಬುಡಕಟ್ಟು ವಿಶೇಷ ಸ್ಥಾನಮಾನದಡಿ ಪರಿಗಣಿಸಬೇಕೆಂದು ಒತ್ತಾಯಿಸಿದರು.

ಇಬ್ಬರು ರಾಜ್ಯಸಭಾ ಸದಸ್ಯರ ಪ್ರಯತ್ನವನ್ನು ಸಿಎನ್‍ಸಿ ಪ್ರಮುಖ ಎನ್.ಯು. ನಾಚಪ್ಪ ಸ್ವಾಗತಿಸಿದ್ದಾರೆ.