ನವದೆಹಲಿ ಡಿ.9 : ಧಾರ್ಮಿಕ ದೌರ್ಜನ್ಯಕ್ಕೆ ಒಳಗಾಗಿ ಭಾರತಕ್ಕೆ ವಲಸೆ ಬಂದಿರುವ ಮುಸ್ಲಿಮೇತರರಿಗೆ ಭಾರತೀಯ ಪೌರತ್ವ ನೀಡುವ ಉದ್ದೇಶದೊಂದಿಗೆ ಪೌರತ್ವ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ಮಸೂದೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಬಿಜೆಪಿ ನೇತೃತ್ವದ ಸರ್ಕಾರವು ಸಂವಿಧಾನದ ಆರನೇ ವೇಳಾಪಟ್ಟಿಯಲ್ಲಿರುವ ಪ್ರದೇಶದ ಕೆಲವು ಭಾಗಗಳಿಗೆ ವಿನಾಯಿತಿ ನೀಡಲು ನಿರ್ಧರಿಸಲಾಗಿದೆ. ಅದರಂತೆ ಇದು ಅಸ್ಸಾಂ, ಮೇಘಾಲಯ, ತ್ರಿಪುರ ಮತ್ತು ಮಿಜೋರಾಂನಲ್ಲಿ ಸ್ವಾಯತ್ತ ಬುಡಕಟ್ಟು ಪ್ರಾಬಲ್ಯದ ಪ್ರದೇಶಗಳಿಗೆ ವಿನಾಯ್ತಿ ನೀಡಿದೆ. ಆಂತರಿಕ ಸಾಲಿನ ಪರವಾನಗಿ ಹೊಂದಿರುವ ರಾಜ್ಯಗಳಾದ (ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಮತ್ತು ಮಿಜೋರಾಂ) ಈ ಮಸೂದೆ ಅನ್ವಯಿಸುವದಿಲ್ಲ (ಮೊದಲ ಪುಟದಿಂದ) ಎಂದು ಅಮಿತ್ ಶಾ ಹೇಳಿದ್ದಾರೆ. ಈಶಾನ್ಯ ರಾಜ್ಯಗಳ ಜನರ ಆತಂಕವನ್ನು ನೀಗಿಸಲು ಪ್ರಯತ್ನಿಸಿದ ಶಾ, ನರೇಂದ್ರ ಮೋದಿ ಸರ್ಕಾರವು ಈ ಪ್ರದೇಶದ ಜನರ ಪದ್ಧತಿ ಮತ್ತು ಸಂಸ್ಕೃತಿಯನ್ನು ರಕ್ಷಿಸಲು ಬದ್ಧವಾಗಿದೆ ಮತ್ತು ಮಣಿಪುರವನ್ನು ಇನ್ನರ್ ಲೈನ್ ಪರ್ಮಿಟ್ ಆಡಳಿತದ ಅಡಿಯಲ್ಲಿ ತರಲಾಗುವದು ಎಂದರು. ಈ ಬಗ್ಗೆ ಸಂಸತ್‍ನಲ್ಲಿ ಸುಧೀರ್ಘ ಚರ್ಚೆ ನಡೆದಿದೆ.