ಕಣಿವೆ, ಡಿ. 9: ಕಾಡಾನೆ ಧಾಳಿ ನಡೆಸಿ ಅರಣ್ಯ ವೀಕ್ಷಕರೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಬಾಣಾವಾರ ಬಳಿಯ ಗಾಡಿ ರಸ್ತೆಯಲ್ಲಿ ಸೋಮವಾರ ಸಂಜೆ 7 ಗಂಟೆಯ ಸಮಯದಲ್ಲಿ ನಡೆದಿದೆ. ಅರಿಶಿನಗುಪ್ಪೆಯ ನಿವಾಸಿ ಅರಣ್ಯ ವೀಕ್ಷಕ ಸೇವೆಯಲ್ಲಿದ್ದ ಚೆಟ್ಟಿಯಪ್ಪ ಗಾಯಗೊಂಡ ಸಿಬ್ಬಂದಿ. ಬಾಣಾವರ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದ್ದು ಸ್ಥಳೀಯ ನಿವಾಸಿಗಳು ಕಾಡಾನೆಗಳ ಹಾವಳಿಯಿಂದ ಬೇಸತ್ತಿದ್ದಾರೆ.

ಸಂಜೆ ಆಯಿತೆಂದರೆ ಬೆಳೆ ತಿನ್ನಲು ಬರುವ ಕಾಡಾನೆಗಳನ್ನು ಕಾಡಿಗಟ್ಟಲು ಅರಣ್ಯ ಸಿಬ್ಬಂದಿಗಳಿಗೆ ಮೊರೆಯಿಟ್ಟ ಹಿನ್ನೆಲೆಯಲ್ಲಿ ಚೆಟ್ಟಿಯಪ್ಪ ಸೋಮವಾರ ಸಂಜೆ ಒಂಟಿ ಆನೆ ಯೊಂದನ್ನು ಓಡಿಸುತ್ತಿದ್ದ ಸಂದರ್ಭ ಕೋಪೋದ್ರಿಕ್ತ ಗೊಂಡ ಕಾಡಾನೆ ಚೆಟ್ಟಿಯಪ್ಪ ಅವರ ಮೇಲೆ ಎರಗಿದೆ. ಈ ಸಂದರ್ಭದಲ್ಲಿ ಅವರ ಕಾಲು ಜಖಂ ಗೊಂಡಿದ್ದು ಮೈಸೂರಿನ ಆಸ್ಪತ್ರೆಗೆ ರವಾನಿಸಿದ್ದಾರೆ.

ಅರಣ್ಯ ಸಿಬ್ಬಂದಿಯ ಬಳಿ ಅಗತ್ಯ ಸಶಸ್ತ್ರವಿಲ್ಲದಿದ್ದುದು ಘಟನೆಗೆ ಕಾರಣ ಎಂದು ಸ್ಥಳೀಯ ನಿವಾಸಿಗಳು ಅರಣ್ಯ ಇಲಾಖೆಯ ಮೇಲಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ದ್ದಾರೆ. ಚೆಟ್ಟಿಯಪ್ಪ ಈ ಹಿಂದೆ ಮಾಕುಟ್ಟ ಅರಣ್ಯ ವಲಯ ದಲ್ಲಿದ್ದರು ಎನ್ನಲಾಗಿದ್ದು ಕಳೆದ ಎರಡು ತಿಂಗಳ ಹಿಂದಷ್ಟೆ ಬಾಣಾವರ ವಲಯಕ್ಕೆ ವರ್ಗಾವಣೆ ಗೊಂಡಿದ್ದಾರೆ.

ಇವರ ನಿವೃತ್ತಿಗೆ ಕೇವಲ ಎರಡೇ ವರ್ಷ ಬಾಕಿ ಇದೆ ಎಂದು ಹೇಳಿರುವ ಗ್ರಾಮ ನಿವಾಸಿ ಸಿದ್ಧಲಿಂಗಪುರದ ರವಿಕುಮಾರ್, ಕಾಡಾನೆಗಳನ್ನು ಕಾಡಿಗಟ್ಟಲು ಸಿಬ್ಬಂದಿಗಳಿಗೆ ಪೂರಕ ಅಗತ್ಯ ಸಲಕರಣೆಗಳನ್ನು ಒದಗಿಸಿ ಜೀವ ಕಾಪಾಡಬೇಕು ಎಂದು ಕೋರಿದ್ದಾರೆ.

-ಮೂರ್ತಿ, ಕೆ.ಕೆ.ಎನ್.