ಸೋಮವಾರಪೇಟೆ, ಡಿ. 9: ವಿವಿಧ ಬೇಡಿಕೆ ಗಳನ್ನು ಈಡೇರಿಸುವಂತೆ ತಾಲೂಕು ವಿಶೇಷ ಚೇತನರ ಸಂಘದಿಂದ ತಾಲೂಕು ಕಾನೂನು ಸೇವಾ ಸಮಿತಿಗೆ ಮನವಿ ಸಲ್ಲಿಸಲಾಗಿದೆ. ತಾಲೂಕು ಕಾನೂನು ಸೇವಾ ಸಮಿತಿಯ ವತಿಯಿಂದ ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶೇಷಚೇತನರ ದಿನಾಚರಣೆಯಲ್ಲಿ ಭಾಗವಹಿಸಿದ್ದ ನ್ಯಾಯಾಧೀಶರು, ‘ನಿಮಗೆ ಸರ್ಕಾರಿ ಸವಲತ್ತು ನೀಡಲು ಅಧಿಕಾರಿಗಳು ಸತಾಯಿಸುತ್ತಿದ್ದರೆ ಕಾನೂನು ಸೇವಾ ಸಮಿತಿಗೆ ದೂರು ನೀಡಿ’ ಎಂದು ತಿಳಿಸಿದ್ದರು. ಅದರಂತೆ ಸಂಘದ ಅಧ್ಯಕ್ಷ ಸಂಗಮೇಶ್ ಸೇರಿದಂತೆ ಪದಾಧಿಕಾರಿಗಳು ಸುಮಾರು 13 ಬೇಡಿಕೆಗಳನ್ನು ಈಡೇರಿಸುವಂತೆ ಕಾನೂನು ಸೇವಾ ಸಮಿತಿಗೆ ಮನವಿ ಸಲ್ಲಿಸಿದರು. ವಿಕಲಚೇತನರಿಗೆ ವಿಶಿಷ್ಟ ಗುರುತಿನ ಚೀಟಿ ನೀಡುವಲ್ಲಿ ವೈದ್ಯಾಧಿಕಾರಿಗಳು ಖಚಿತವಾಗಿ ಪರಿಶೀಲಿಸದೇ ತಾರತಮ್ಯ ಮಾಡುತ್ತಿ ದ್ದಾರೆ. ಪಂಚಾಯಿತಿಗಳಲ್ಲಿ ವಿಶೇಷ ಚೇತನರಿಗೆ ಮೀಸಲಿರುವ ಶೇ.5ರಷ್ಟು ಅನುದಾನ ಸದುಪಯೋಗವಾಗುತ್ತಿಲ್ಲ. ಯಂತ್ರಚಾಲಿತ ತ್ರಿಚಕ್ರ ವಾಹನಗಳನ್ನು ಸೂಕ್ತ ಫಲಾನುಭವಿಗಳಿಗೆ ವಿತರಿಸುತ್ತಿಲ್ಲ. ತಾಲೂಕು ಮಟ್ಟದಲ್ಲಿ ಯುಡಿಐಡಿ ಗುರುತಿನ ಚೀಟಿ ಮಾಡಿಸುವ ಅಭಿಯಾನ ಏರ್ಪಡಿಸ ಬೇಕು. ವಿಶೇಷಚೇತನರ ಮಾಸಾಶನ ವಿಳಂಬವಾಗುತ್ತಿದ್ದು, ಪ್ರತಿ ತಿಂಗಳ 10ರೊಳಗೆ ದೊರೆಯುವಂತೆ ವ್ಯವಸ್ಥೆ ಮಾಡಬೇಕೆಂದು ಸಮಿತಿಗೆ ಮನವಿ ಸಲ್ಲಿಸಿದರು.
ತಾಲೂಕು ಕಚೇರಿಯಲ್ಲಿ ಜಾತಿ ಮತ್ತು ಆದಾಯ ದೃಢೀಕರಣ ಪತ್ರಕ್ಕೆ ಅಲೆದಾಡಿಸುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ವಿಶೇಷಚೇತನ ಸ್ನೇಹಿ ವಾತಾವರಣ ನಿರ್ಮಿಸಬೇಕು. ರ್ಯಾಂಪ್, ವೀಲ್ ಚೇರ್, ಲಿಫ್ಟ್, ಶೌಚಾಲಯ ಇತ್ಯಾದಿಗಳನ್ನು ಅಳವಡಿಸಬೇಕು. ವಿಶೇಷಚೇತನರ ಮೇಲೆ ನಡೆಯುವ ಕೌಟುಂಬಿಕ ದೌರ್ಜನ್ಯ ತಡೆಗಟ್ಟಬೇಕು. ಅವಾಸ್ ಯೋಜನೆಯ ಸೌಲಭ್ಯ ಒದಗಿಸ ಬೇಕು. ಗ್ರಾಮ, ಹೋಬಳಿ, ತಾಲೂಕು ಮಟ್ಟದಲ್ಲಿ ಕನಿಷ್ಟ 6 ತಿಂಗಳಿಗೊಮ್ಮೆ ವಿಶೇಷಚೇತನರ ಕುಂದುಕೊರತೆ ಸಭೆ ನಡೆಸಲು ನಿರ್ದೇಶಿಸಬೇಕೆಂದು ಮನವಿ ಮಾಡಲಾಗಿದೆ. ಸರ್ಕಾರಿ ಮತ್ತು ಖಾಸಗಿ ಬಸ್ಗಳಲ್ಲಿ ಮೀಸಲಿರುವ ಆಸನಗಳು ವಿಶೇಷಚೇತನರಿಗೆ ಒದಗಿಸಬೇಕು. ಸಂಘಕ್ಕೆ ಸ್ವಂತ ಕಟ್ಟಡ ಅವಶ್ಯಕತೆಯಿದ್ದು, ಪ.ಪಂ.ನಿಂದ ಬಾಡಿಗೆ ರಹಿತವಾಗಿ ಒಂದು ಮಳಿಗೆ ಒದಗಿಸಬೇಕು. ಸಂಘಕ್ಕೆ ವಾಹನದ ಅವಶ್ಯಕತೆ ಯಿದ್ದು, ಇದರ ಖರೀದಿಗೆ ಬಡ್ಡಿ ರಹಿತ ಸಾಲ ನೀಡಬೇಕು. ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ತಾವುಗಳು ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಬೇಕೆಂದು ಸಂಘದ ಮೂಲಕ ತಾಲೂಕು ಕಾನೂನು ಸೇವಾ ಸಮಿತಿಗೆ ಮನವಿ ಸಲ್ಲಿಸಲಾಗಿದೆ.