ಮಡಿಕೇರಿ, ಡಿ. 9: ಮಂಜಿನ ನಗರಿ ಮಡಿಕೇರಿಯಲ್ಲಿ ಕಳೆದ ರಾತ್ರಿ ಎರಡು ಕಳ್ಳತನ ಪ್ರಕರಣಗಳು ನಡೆದಿವೆ. ಒಂದೆಡೆ ದೇವಾಲಯಕ್ಕೆ ಕನ್ನ ಹಾಕಿ ನಗ ನಾಣ್ಯಗಳನ್ನು ದೋಚಿದ್ದರೆ ಮತ್ತೊಂದೆಡೆ ಮನೆ ಎದುರು ನಿಲ್ಲಿಸಿದ್ದ ಕಾರೊಂದನ್ನು ಅಪಹರಿಸಲಾಗಿದೆ.ಪೌರಾಣಿಕ ಇತಿಹಾಸ ಹೊಂದಿರುವ, ಮಡಿಕೇರಿ ನಗರಕ್ಕೆ ಅದಿದೇವತೇ ಎಂದೇ ಹೇಳಲಾಗುವ ಭಗವತಿ ನಗರದಲ್ಲಿರುವ ಕರವಲೆ ಭಗವತಿ ಮಹಿಷಿ ಮರ್ಧಿನಿ ಭಗವತಿ ದೇವಾಲಯಕ್ಕೆ ಕಳೆದ ರಾತ್ರಿ ನುಗ್ಗಿರುವ ಕಳ್ಳರು ಚಿನ್ನ ಹಾಗೂ ಬೆಳ್ಳಿಯ ಆಭರಣಗಳು, ದೀಪಗಳು, ಕಾಣಿಕೆ ಹಣ ಸೇರಿದಂತೆ ಕೈಗೆ ಸಿಕ್ಕಿದ ವಸ್ತು ಗಳನ್ನು ದೋಚಿ ಪರಾರಿಯಾಗಿದ್ದಾರೆ.ಎಂದಿನಂತೆ ಇಂದು ಬೆಳಿಗ್ಗೆ ದೇವಾಲಯದ ಅರ್ಚಕ ಸುಭಾಶ್ ಅವರು ಪೂಜೆಗೆಂದು ಬಂದು ನೋಡಿದಾಗ ಕಳುವಾಗಿರುವದು ಗೋಚರಿಸಿದೆ. ಅರ್ಚಕರು ದೇವಾಲಯ ಸಮಿತಿಯವರಿಗೆ ವಿಷಯ ತಿಳಿಸಿದ್ದು, ಸಮಿತಿಯವರು ಪೊಲೀಸರ ಗಮನಕ್ಕೆ ವಿಷಯ ತರಲಾಗಿ ಸ್ಥಳಕ್ಕೆ ಬೆರಳಚ್ಚು ತಜ್ಞರ ತಂಡ ಸಹಿತ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪಣ್ಣೇಕರ್, ವೃತ್ತ ನಿರೀಕ್ಷಕ ದಿವಾಕರ್, ಸಿಬ್ಬಂದಿಗಳು ತೆರಳಿ ಮಹಜರು ನಡೆಸಿದರು.
(ಮೊದಲ ಪುಟದಿಂದ)
ರೂ. 3.40 ಲಕ್ಷದಷ್ಟು ಕಳವು
ರಾತ್ರಿ ವೇಳೆ ಒಳ ನುಗ್ಗಿದ ಕಳ್ಳರು ಗರ್ಭಗುಡಿಗೆ ನುಸುಳಿ ದೇವಿಗೆ ತೊಡಿಸಿದ್ದ ಎರಡು ಚಿನ್ನದ ಸರ, ಎರಡು ತಾಳಿ, ದೇವಿ ಹಾಗೂ ಗಣಪತಿ ದೇವರಿಗೆ ತೊಡಿಸಿದ್ದ ಬೆಳ್ಳಿಯ ಕವಚ, ಬೆಳ್ಳಿಯ ಕೊಡೆ, ಬೆಳ್ಳಿ ದೀಪ, ದೇವಿಯ ಮಾಲೆ, ಎರಡು ಎತ್ತರದ 8 ಕಾಲು ದೀಪಗಳು ಸೇರಿದಂತೆ ಗರ್ಭಗುಡಿಯೊಳಗಿದ್ದ ಇತರ ವಸ್ತುಗಳು, ಕಾಣಿಕೆ ಡಬ್ಬಿಯಲ್ಲಿದ್ದ ಹಣ ಸೇರಿದಂತೆ ಒಟ್ಟು 3.40 ಲಕ್ಷ ಮೌಲ್ಯದ ವಸ್ತುಗಳನ್ನು ಕದ್ದೊಯ್ದಿದ್ದಾರೆ. ಈ ಸಂಬಂಧ ದೇವಾಲಯ ಸಮಿತಿ ಅಧ್ಯಕ್ಷ ತೆಕ್ಕಡ ಸಂತೋಷ್ ಹಾಗೂ ಕಾರ್ಯದರ್ಶಿ ಪಾಂಡಿರ ಶರಣು ಮತ್ತು ಆಡಳಿತ ಮಂಡಳಿಯವರು ನೀಡಿದ ದೂರಿನನ್ವಯ ಗ್ರಾಮಾಂತರ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಚಾಲಾಕಿ ಕಳ್ಳರು...!
ದೇವಾಲಯಕ್ಕೆ ಕನ್ನ ಹಾಕಿರುವ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ನಡುರಾತ್ರಿ ಕಳೆದು ಎಲ್ಲರೂ ಗಾಢ ನಿದ್ರೆಯಲ್ಲಿದ್ದ ಸಂದರ್ಭ ನಸುಕಿನ ವೇಳೆ 2.15 ಗಂಟೆಗೆ ನುಗ್ಗಿದ್ದಾರೆ. ಇದು ದೇವಾಲಯದೊಳಗಡೆ ಅಳವಡಿಸಿರುವ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ದೇವಾಲಯದ ಹೆಬ್ಬಾಗಿಲಿನಲ್ಲಿ ಸಿಸಿ ಕ್ಯಾಮಾರವನ್ನು ದೇವಾಲಯದೊಳಗೆ ಪ್ರವೇಶಿಸುವವರು ದಾಖಲಾಗುವಂತೆ ಅಳವಡಿಸಲಾಗಿತ್ತು. ಆದರೆ ಕಳ್ಳರು ದೇಗುಲದ ಗೋಡೆ ಆತುಕೊಂಡು ಬಂದು ಸಿಸಿ ಕ್ಯಾಮಾರವನ್ನು ಮೇಲಕ್ಕೆ ಎತ್ತಿ ಏನೂ ಸೆರೆಯಾಗದಂತೆ ಮಾಡಿದ್ದಾರೆ. ನಂತರ ಸದ್ದಾಗದಂತೆ ಹೆಬ್ಬಾಗಿಲಿನ ಚಿಲಕದ ಸ್ಕ್ರೂಗಳನ್ನು ಕಳಚಿ ಒಳನುಗ್ಗಿದ್ದಾರೆ.
ಆನಂತರ ಗರ್ಭಗುಡಿಯ ಬಾಗಿಲಿನ ಬೀಗ ಒಡೆದು ಒಳ ನುಗ್ಗಿ ಎಲ್ಲವನ್ನೂ ಹೊತ್ತೊಯ್ದಿದ್ದಾರೆ. ಒಳಗಡೆ ಇದ್ದ ವೇದ ಮಂತ್ರಗಳ ಪುಸ್ತಕಗಳು, ಪೂಜಾ ಸಾಮಗ್ರಿಗಳನ್ನು ಚೆಲ್ಲಾಡಿದ್ದಾರೆ. ಆ ಬಳಿಕ ಪಕ್ಕದಲ್ಲಿದ್ದ ಉಗ್ರಾಣದ ಬೀಗ ಒಡೆದು ಅಲ್ಲಿದ್ದ ದೀಪಗಳು, ಇನ್ನಿತರ ಸಾಮಗ್ರಿಗಳನ್ನು ಕದ್ದೊಯ್ದಿದ್ದಾರೆ. ಅರ್ಚಕರ ಮನೆ ದೇವಾಲಯದ ಅನತಿ ದೂರದಲ್ಲಿದ್ದು, ಅವರುಗಳು ರಾತ್ರಿ 11.30ರ ವರೆಗೆ ಎಚ್ಚರ ಇದ್ದರಂತೆ. ಅದುವರೆಗೆ ಯಾವದೇ ಸದ್ದು ಕೇಳಿಸಲಿಲ್ಲ. ದೇವಾಲಯದ ಸದ್ದಾದರೆ ಕೇಳಿಸುವದಿಲ್ಲ ಎಂದು ಅರ್ಚಕ ಕುಟುಂಬದವರು ಹೇಳುತ್ತಾರೆ.
ಅಕ್ಕಿ ಮೂಟೆಯಲ್ಲಿ ಹೊತ್ತೊಯ್ದ...!
ಕಳ್ಳರು ಕಳ್ಳತನ ಮಾಡಿದ ಬಳಿಕ ಸಾಮಗ್ರಿಗಳನ್ನು ಚೀಲದಲ್ಲಿ ತುಂಬಿಕೊಂಡು ಹೋಗಿರುವ ಬಗ್ಗೆ ಖಾತರಿಯಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ದೇಗುಲದ ಗೋದಾಮಿನಲ್ಲಿದ್ದ ನೈವೇದ್ಯ ಮಾಡಲು ದಾಸ್ತಾನಿರಿಸಿದ್ದ ಚೀಲದಲ್ಲಿದ್ದ ಅಕ್ಕಿಯನ್ನು ಸುರಿದು ಅದೇ ಚೀಲದಲ್ಲಿ ಕಳವು ಮಾಡಿದ ವಸ್ತುಗಳನ್ನು ತುಂಬಿಕೊಂಡು ಹೋಗಿರಬಹುದಾಗಿ ಅನುಮಾನ ವ್ಯಕ್ತಗೊಂಡಿದೆ.
ಭಂಡಾರ ಡಬ್ಬಿ ಮುಟ್ಟಿಲ್ಲ
ಗರ್ಭಗುಡಿಯ ಬೀಗ ಮುರಿದು ಅದರೊಳಗೆ ದೇವರಿಗೆ ತೊಡಿಸಿದ್ದ ಕವಚಗಳನ್ನು ಬಿಚ್ಚಿ ಕದ್ದೊಯ್ದಿರುವ ಕಳ್ಳರು ಎದುರುಗಡೆ ಮುಖ ಮಂಟಪದಲ್ಲಿರಿಸಿರುವ ಭಂಡಾರ ಡಬ್ಬಿಯನ್ನು ಮಾತ್ರ ಮುಟ್ಟಲಿಲ್ಲ. ಭಂಡಾರ ಡಬ್ಬಿ ಗಟ್ಟಿ-ಮುಟ್ಟಾಗಿದ್ದು, ಕೀ ಇಲ್ಲದೆ ತೆರೆಯಲಾಗುವದಿಲ್ಲ ಎಂದು ಅರ್ಚಕ ಕುಟುಂಬದವರು, ಸಮಿತಿಯವರು ಹೇಳುತ್ತಾರೆ. ಈ ಹಿಂದೆಯೂ ಒಮ್ಮೆ ಜೀರ್ಣೋದ್ಧಾರಗೊಳ್ಳುವ ಮೊದಲು ಹೆಂಚು ತೆಗೆದು ಒಳನುಗ್ಗಿದ್ದ ಕಳ್ಳರು ಭಂಡಾರ ಡಬ್ಬಿಯನ್ನು ಹೊತ್ತೊಯ್ದು ಅದನ್ನು ತೆರೆಯಲಾಗದೆ ಪಕ್ಕದ ಶಾಲಾ ಬಳಿ ಎಸೆದು ಹೋಗಿದ್ದರಂತೆ. ಹಾಗಾಗಿ ಯಾರೋ ತಿಳಿದವರೇ ಈ ಕೃತ್ಯ ಎಸಗಿರಬಹುದೆಂಬ ಶಂಕೆ ಆಡಳಿತ ಮಂಡಳಿಯವರಲ್ಲಿ ಮೂಡಿದೆ.
ಸಿಸಿ ಟಿವಿಯಲ್ಲಿ ಒಬ್ಬನೇ...!
ಕಳ್ಳತನದ ಬಗ್ಗೆ ಮಾಹಿತಿ ಪಡೆಯುವ ಸಲುವಾಗಿ ಪೊಲೀಸರು ಸಿಸಿ ಟಿವಿಯಲ್ಲಿ ದಾಖಲಾಗಿರುವ ದೃಶ್ಯವನ್ನು ಪರಿಶೀಲಿಸಿದ್ದಾರೆ. ಅದರಲ್ಲಿ ತಲೆಗೆ ಮುಂಡಾಸು ಸುತ್ತಿಗೊಂಡು ಕನ್ನಡಕ ಧರಿಸಿರುವ ಓರ್ವ ವ್ಯಕ್ತಿ ಮಾತ್ರ ಓಡಾಡುತ್ತಿರುವದು ಗೋಚರಿಸಿದೆ. ಅದೂ ಕೂಡ ಅಸ್ಪಷ್ಟವಾಗಿದೆ.
ಆಡಳಿತ ಮಂಡಳಿ ಸಭೆ
ಕಳವು ಪ್ರಕರಣದಿಂದ ದಿಗ್ಭ್ರಾಂತರಾಗಿರುವ ಆಡಳಿತ ಮಂಡಳಿಯವರು ಹಾಗೂ ನಾಡು ತಕ್ಕರು ದೇಗುಲದ ಆವರಣದಲ್ಲೇ ಸಭೆ ನಡೆಸಿದರು. ದೇವಾಲಯದ ಶುದ್ಧ ಕಳಸ, ಪೂಜಾ ಕಾರ್ಯದ ಬಗ್ಗೆ ಚರ್ಚೆ ನಡೆಸಿದರು. ಹಿರಿಯರಾದ ಎಂ.ಬಿ. ದೇವಯ್ಯ ಇನ್ನಿತರರ ಸಮ್ಮುಖದಲ್ಲಿ ಸಭೆ ನಡೆಯಿತು.
ಕಾರು ಅಪಹರಣ
ಮತ್ತೊಂದು ಪ್ರಕರಣದಲ್ಲಿ ಮನೆಯೆದುರು ರಸ್ತೆ ಬದಿಯಲ್ಲಿ ನಿಲ್ಲಿಸಿದ ಕಾರೊಂದನ್ನು ರಾತ್ರಿ ವೇಳೆ ಅಪಹರಿಸಲಾಗಿದೆ. ಹೊಸ ಬಡಾವಣೆಯ ಬಾಲಕರ ನಿರೀಕ್ಷಣಾ ಮಂದಿರ ಬಳಿಯಿಂದ ಡೇರಿ ಫಾರಂ ಕಡೆಗೆ ತೆರಳುವ ರಸ್ತೆ ಬದಿಯಲ್ಲಿ ಮಾರುತಿ 800 ಕಾರನ್ನು (ಕೆಎ 51 ಎಂಎ 1055) ಪ್ರಜ್ವಲ್ ಎಂಬವರು ಸಂಜೆ 6.30ಕ್ಕೆ ನಿಲ್ಲಿಸಿದ್ದರು. ಬೆಳಗ್ಗಿನ ಜಾವ 4.30ಕ್ಕೆ ಎದ್ದು ನೋಡುವಷ್ಟರಲ್ಲಿ ಕಾರು ನಾಪತ್ತೆಯಾಗಿತ್ತು. ಈ ಸಂಬಂಧ ಪ್ರಜ್ವಲ್ ನೀಡಿರುವ ದೂರಿನನ್ವಯ ಮಡಿಕೇರಿ ನಗರ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.
ಮನೆ ಕಟ್ಟುವ ಸಂದರ್ಭದಲ್ಲಿ ವಾಹನ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸದೇ ಇರುವದರಿಂದ ರಸ್ತೆ ಬದಿಯಲ್ಲೇ ವಾಹನ ನಿಲ್ಲಿಸುವಂತಾಗಿದ್ದು, ಇದರಿಂದಾಗಿ ಈ ರೀತಿಯ ಕಳವು ಪ್ರಕರಣಗಳು ನಡೆಯುತ್ತಿವೆ ಎಂಬದು ಸಾರ್ವಜನಿಕರ ಅಭಿಪ್ರಾಯವಾಗಿದೆ. -ಸಂತೋಷ್