ಮಡಿಕೇರಿ, ಡಿ. 8: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ವಕೀಲರ ಸಂಘ ವತಿಯಿಂದ ಸಂತ್ರಸ್ತರ ಪರಿಹಾರ ಯೋಜನೆಯಡಿ ನೊಂದವರಿಗೆ ಚೆಕ್ ವಿತರಣಾ ಕಾರ್ಯಕ್ರಮ ನಗರದ ನ್ಯಾಯಾಲಯದ ವಕೀಲರ ಸಂಘದ ಕಚೇರಿಯಲ್ಲಿ ನಡೆಯಿತು.
53 ಮಂದಿ ನೊಂದ ಕುಟುಂಬದವರಿಗೆ ಸುಮಾರು ರೂ. 87 ಲಕ್ಷ ಪರಿಹಾರದ ಚೆಕ್ ವಿತರಿಸಲಾಯಿತು. ಚೆಕ್ ವಿತರಿಸಿ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ವಿ.ವಿ. ಮಲ್ಲಾಪುರ ಮಾತನಾಡಿ, ನೊಂದವರು ಪರಿಹಾರವನ್ನು ಸಮರ್ಪಕವಾಗಿ ಬಳಸಿಕೊಂಡು ಹೊಸ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು. ನೊಂದವರಿಗೆ ನ್ಯಾಯ ದೊರಕಿಸುವಲ್ಲಿ ನ್ಯಾಯವಾದಿಗಳು ಶ್ರಮಿಸಬೇಕು ಎಂದು ಕೋರಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಮಾತನಾಡಿ, ಸರ್ಕಾರದಿಂದ ನೊಂದವರಿಗೆ ಪರಿಹಾರ ನೀಡಬೇಕು ಎಂಬ ಉದ್ದೇಶದಿಂದ ಪರಿಹಾರ ವಿತರಿಸಲಾಗುತ್ತಿದೆ. ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ವಕೀಲರ ಸಂಘದ ಉಪಾಧ್ಯಕ್ಷ ಪಿ.ಯು. ಪ್ರೀತಂ ಮಾತನಾಡಿ, ಅಪಘಾತ, ಲೈಂಗಿಕ ದೌರ್ಜನ್ಯ ಹೀಗೆ ವಿವಿಧ ಪ್ರಕರಣಗಳಲ್ಲಿ ನೊಂದವರಿಗೆ ನ್ಯಾಯ ಒದಗಿಸಲು ವಿವಿಧ ಪ್ರಕರಣಗಳಲ್ಲಿ ಪರಿಹಾರ ವಿತರಿಸಲಾಗುತ್ತದೆ ಎಂದು ತಿಳಿಸಿದರು.
1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಚಂದ್ರಶೇಖರ್ ಪಿ.ಎಸ್, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿ.ಜೆ.ಎಂ. ವಿಜಯ ಕುಮಾರ್, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ, ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ಬಿ.ಕೆ. ಮನು, ಅಪರ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ಸ್ಮಿತಾ ಇತರರು ಇದ್ದರು. ವಕೀಲರ ಸಂಘದ ಕಾರ್ಯದರ್ಶಿ ಕಿಶೋರ್ ಸ್ವಾಗತಿಸಿ, ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕ ಜಯಪ್ಪ ನಿರೂಪಿಸಿ, ವಂದಿಸಿದರು.