ನಾಪೆÇೀಕ್ಲು, ಡಿ. 8: ಮೈಕ್ರೋ ಫೈನಾನ್ಸ್ ಹೆಸರಿನ ಸಂಸ್ಥೆ ಜನರಿಗೆ ಸಾಲ ನೀಡಿ ನಂತರ ಮರುಪಾವತಿ ಸಮಯದಲ್ಲಿ ಹೆಚ್ಚಿನ ಬಡ್ಡಿ ವಿಧಿಸಿ ಕಿರುಕುಳ ನೀಡುತ್ತಿರುವದು ಕಂಡು ಬಂದಿದೆ. ಈ ಸಂಸ್ಥೆಯಿಂದ ಸಾಲ ಪಡೆಯುವ ಜನ ಜಾಗೃತರಾಗ ಬೇಕೆಂದು ಮಡಿಕೇರಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ ಸಲಹೆ ನೀಡಿದರು.
ಈ ಬಗ್ಗೆ ಕಕ್ಕಬ್ಬೆ ಮುತ್ತವ್ವ ಹಾಲ್ನಲ್ಲಿ ಕರೆಯಲಾಗಿದ್ದ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು. ಕಕ್ಕಬ್ಬೆ ವ್ಯಾಪ್ತಿಯಲ್ಲಿ ಹಲವಾರು ಜನ ಮೈಕ್ರೋ ಫೈನಾನ್ಸ್ ಸಂಸ್ಥೆಯಿಂದ ಸಾಲ ಪಡೆದಿದ್ದು, ಈಗ ಕಷ್ಟ ಅನುಭವಿಸುತ್ತಿದ್ದಾರೆ. ಆದುದರಿಂದ ಜನ ಈ ಬಗ್ಗೆ ಜಾಗೃತರಾಗಬೇಕು. ಸಾಲ ದೊರೆಯುತ್ತದೆ ಎಂಬ ಆಸೆಯಿಂದ ಪೂರ್ವಪರ ಯೋಚಿಸದೆ ಸಾಲ ಮಾಡಿ ಸಮಸ್ಯೆಯಲ್ಲಿ ಸಿಲುಕಬಾರದು ಎಂದು ಕಿವಿಮಾತು ಹೇಳಿದರು.
ಕಕ್ಕಬ್ಬೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರ್ತಂಡ ಶೈಲಾ ಕುಟ್ಟಪ್ಪ ಮಾತನಾಡಿ, ಸಂಸ್ಥೆಯಿಂದ ಹಲವರು ಸಾಲ ಪಡೆದು ಕೊಂಡಾಗಿದೆ. ಅದನ್ನು ಮರು ಪಾವತಿಸಲೇ ಬೇಕು. ಸಂಸ್ಥೆಯವರು ಮಾನವೀಯ ದೃಷ್ಟಿಯಿಂದ ಜನರಿಗೆ ಹೆಚ್ಚಿನ ಬಡ್ಡಿ ವಿಧಿಸದೆ ಸಹಕಾರ ನೀಡುವದರ ಮೂಲಕ ಸಮಸ್ಯೆ ಯನ್ನು ಇತ್ಯರ್ಥ ಪಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಋಣಮುಕ್ತ ಹೋರಾಟಗಾರ ಸಮಿತಿ ಅಧ್ಯಕ್ಷ ನವೀನ್ ಪುತ್ರ, ಸಮಿತಿಯ ವಕೀಲ ವಿ.ಎಂ.ಭಟ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಯಕೋಲ್ ಉಸ್ಮಾನ್, ಕಕ್ಕಬ್ಬೆಯ ಮಂಜುನಾಥ್, ಚಂಡೀರ ಜಗದೀಶ್, ಬಿದ್ದಪ್ಪ, ಮಾರ್ಚಂಡ ವಿನುತಾ ಕಾರ್ಯಪ್ಪ, ಮುದ್ದಪ್ಪ, ಚಂದ್ರ, ರವಿ, ಮತ್ತಿತರರು ಇದ್ದರು.