ನಾಪೆÇೀಕ್ಲು, ಡಿ. 8: ಕಾಡು ಹಂದಿ ಉಪಟಳದಿಂದ ರೈತರು ಬೆಳೆದ ಎಲ್ಲಾ ಬೆಳೆಗಳು ನಷ್ಟಕ್ಕೆ ತುತ್ತಾಗುತ್ತಿದೆ. ಕಾಡು ಹಂದಿಯನ್ನು ವನ್ಯ ಜೀವಿ ಪಟ್ಟಿಯಿಂದ ಕೈಬಿಟ್ಟು ಇಲಿ ಹೆಗ್ಗಣಗಳಂತೆ ಪರಿಗಣಿಸಿ ಅದು ರೈತರ ಕೃಷಿ ಭೂಮಿಗೆ ಧಾಳಿಯಿಡುವ ಸಂದರ್ಭ ಗುಂಡು ಹಾರಿಸಲು ಅನುಮತಿ ನೀಡಬೇಕೆಂದು ಬಲ್ಲಮಾವಟಿ ಬಲ್ಲತ್ತನಾಡು ಕೊಡವ ಫಾರ್ಮರ್ಸ್ ಸ್ಪೋಟ್ರ್ಸ್ ಮತ್ತು ರಿಕ್ರಿಯೇಶನ್ ಕ್ಲಬ್ ಸರಕಾರ ಮತ್ತು ಅರಣ್ಯ ಇಲಾಖೆಯನ್ನು ಆಗ್ರಹಿಸಿದೆ.

ಈ ಬಗ್ಗೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಕ್ಲಬ್‍ನ ಅಧ್ಯಕ್ಷ ಕರವಂಡ ಲವ ನಾಣಯ್ಯ, ಕೊಡಗಿನಲ್ಲಿ ಕಾಡು ಹಂದಿಯ ಉಪಟಳದಿಂದ ಭತ್ತ, ಕಾಫಿ, ತೆಂಗು, ಅಡಿಕೆ, ಬಾಳೆ, ಗೆಡ್ಡೆ ಗೆಣಸು ಸೇರಿದಂತೆ ಎಲ್ಲಾ ಬೆಳೆಗಳು ನಾಶವಾಗುತ್ತಿದೆ. ರೈತರು ಕಷ್ಟ ಪಟ್ಟು ಬೆಳೆದ ಬೆಳೆ ಕಾಡು ಹಂದಿಗಳ ಪಾಲಾಗುತ್ತಿದೆ. ಇದಕ್ಕೆ ಗುಂಡು ಹಾರಿಸಿದರೆ ಅವರನ್ನು ಬಂಧಿಸಲಾಗುತ್ತಿದೆ. ಅದರಿಂದ ಉಂಟಾಗುವ ನಷ್ಟವನ್ನು ಭರಿಸುವವರು ಯಾರು? ಎಂದು ಪ್ರಶ್ನಿಸಿದರು.

ಸರಕಾರ, ಅರಣ್ಯ ಇಲಾಖೆ ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು. ಕಾಡು ಹಂದಿಗೆ ಗುಂಡು ಹಾರಿಸಲು ಅನುಮತಿ ನೀಡಬೇಕು. ಇಲ್ಲವಾದಲ್ಲಿ ರೈತರ ಗದ್ದೆಗಳಿಗೆ ಅರಣ್ಯ ಇಲಾಖೆ ಕಾವಲುಗಾರರನ್ನು ನೇಮಿಸಲಿ ಎಂದು ಸವಾಲು ಹಾಕಿದರು. ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುವದು. ಅರಣ್ಯ ಇಲಾಖೆ ಇನ್ನು ಮುಂದಕ್ಕೂ ರೈತರಿಗೆ ಕಿರುಕುಳ ನೀಡಿದ್ದಲ್ಲಿ ಅರಣ್ಯ ಇಲಾಖಾ ಸಿಬ್ಬಂದಿಗಳನ್ನು ಗ್ರಾಮದೊಳಗೆ ದಿಗ್ಭಂದನಗೊಳಿಸಲು ಕ್ರಮಕೈಗೊಳ್ಳ ಲಾಗುವದು ಎಂದು ಎಚ್ಚರಿಸಿದರು.

ಉಪಾಧ್ಯಕ್ಷ ಮಚ್ಚೂರ ರವೀಂದ್ರ ಮಾತನಾಡಿ ಇದು ಸರಕಾರದ, ಪರಿಸರವಾದಿಗಳ ಷಡ್ಯಂತರ. ಕಾಫಿ ತೋಟದೊಳಗಿನ ಮರಗಳ ರೆಂಬೆ ಕಡಿಯುವ ಸಂದರ್ಭದಲ್ಲೂ ಅರಣ್ಯ ಇಲಾಖಾ ಸಿಬ್ಬಂದಿಗಳು ಅಡ್ಡಿ ಪಡಿಸುತ್ತಾರೆ. ನಷ್ಟ ಉಂಟುಮಾಡುವ ಕಾಡು ಹಂದಿಗೆ ಗುಂಡು ಹಾರಿಸಿದರೆ ದಸ್ತಗಿರಿ ಮಾಡುತ್ತಾರೆ. ಇದು ಕಸ್ತೂರಿ ರಂಗನ್ ಮತ್ತಿರ ಹೆಸರಿನಲ್ಲಿ ಕೊಡಗಿನ ಜನರನ್ನು ಒಕ್ಕಲೆಬ್ಬಿಸಲು ನಡೆಸುವ ತಂತ್ರವಾಗಿದೆ. ಇದಕ್ಕೆ ಅವಕಾಶ ನೀಡುವದಿಲ್ಲ ಎಂದು ಹೇಳಿದರು.

ಗೋಷ್ಠಿಯಲ್ಲಿ ಕಾರ್ಯದರ್ಶಿ ಅಪ್ಪಚೆಟ್ಟೋಳಂಡ ಮಿಥುನ್ ಮಾಚಯ್ಯ, ನಿರ್ದೇಶಕರಾದ ಮಣವಟ್ಟಿರ ದಯಾ ಚಿಣ್ಣಪ್ಪ, ಮಾದೆಯಂಡ ಶುಭಾ ಕುಟ್ಟಪ್ಪ, ಮೂವೆರ ರೀಟಾ ಚಂಗಪ್ಪ, ಚೀಯಕಪೂವಂಡ ಸಚಿನ್ ಪೂವಯ್ಯ, ಅಪ್ಪಚ್ಚಿರ ದಿನು ತಿಮ್ಮಯ್ಯ ಇದ್ದರು.