ವೀರಾಜಪೇಟೆ, ಡಿ. 7: ಇಂದಿನ ವಿದ್ಯಾರ್ಥಿಗಳು ಸಾಮಾಜಿಕ ಜ್ಞಾನ ಹೊಂದದೆ ಕೇವಲ ಪುಸ್ತಕದ ಜ್ಞಾನ ಮಾತ್ರ ಸಾಕು ಎಂಬ ಮನಸ್ಥಿತಿ ಹೊಂದಿರುವದು ವಿಷಾದನೀಯ ಎಂದು ಹಿರಿಯ ಸಾಹಿತಿ ಮಂಡೇಪಂಡ ಗೀತಾ ಮಂದಣ್ಣ ಅಭಿಪ್ರಾಯಪಟ್ಟರು.

ವೀರಾಜಪೇಟೆ ಪಟ್ಟಣದ ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್.ಎಸ್.ಎಸ್. ಘಟಕದ ವತಿಯಿಂದ ಅಮ್ಮತಿಯ ಸ.ಮಾ.ಪ್ರಾ. ಶಾಲೆಯಲ್ಲಿ ನಡೆಯುತ್ತಿರುವ ವಾರ್ಷಿಕ ಶಿಬಿರದಲ್ಲಿ ‘ಬಹುಮಾಧ್ಯಮ ಮತ್ತು ವಿದ್ಯಾರ್ಥಿ’ ಎಂಬ ವಿಷಯದ ಕುರಿತ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು; ಪ್ರತಿಯೊಂದು ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಯು ಆ ರಾಷ್ಟ್ರದ ಶಿಕ್ಷಣದ ಗುಣಮಟ್ಟ, ಶಿಕ್ಷಿತರ ಪ್ರಮಾಣ, ಶಿಕ್ಷಣ ವ್ಯವಸ್ಥೆ, ಮಾನವ ಅಭಿವೃದ್ಧಿಯ ಸೂಚ್ಯಂಕ ಮುಂತಾದ ವಿಷಯಗಳ ಮೇಲೆ ಅವಲಂಬಿತವಾಗಿರುತ್ತದೆ. ಶಿಕ್ಷಣವು ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿಯ ಅವಿಭಾಜ್ಯ ಅಂಗ. ಯಾವದೇ ರಾಷ್ಟ್ರದ ಸಮಗ್ರ ಅಭಿವೃದ್ಧಿಗೆ ಅಲ್ಲಿನ ಶಿಕ್ಷಣ ಕ್ರಮವೇ ಕಾರಣವಾಗುತ್ತದೆ. ಅಲ್ಲದೇ ಪ್ರತಿಯೊಬ್ಬ ಮಾನವನಿಗೆ ಮಾನವೀಯತ್ವ ಪ್ರಾಪ್ತವಾಗಬೇಕಾದರೆ ಶಿಕ್ಷಣ ಅವಶ್ಯಕ. ಶಿಕ್ಷಣವು ಮಾನವನ ಮನಸ್ಸು, ಬುದ್ಧಿ, ದೇಹಗಳಿಗೆ ದೊರೆಯುವ ಒಂದು ಸಂಸ್ಕಾರ. ಈ ಸಂಸ್ಕಾರವು ಮನುಷ್ಯನಿಗೆ ಸಕಾಲದಲ್ಲಿ ಸಿಗದಿದ್ದರೆ ಆತನು ಸುಖ-ಸಂತೋಷದ ಜೀವನ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಯಾವದೇ ವ್ಯಕ್ತಿ, ಸಮಾಜ, ರಾಷ್ಟ್ರಗಳ ಸಮಗ್ರ ಅಭಿವೃದ್ಧಿಯಲ್ಲಿ ಶಿಕ್ಷಣ ಹಾಗೂ ಮಾಧ್ಯಮ ಮಹತ್ವದ ಸಾಧನವಾಗಿದೆ ಎಂದು ಹೇಳಿದರು.

ಪ್ರಜಾಸತ್ಯ ಪತ್ರಿಕೆಯ ಸಂಪಾದಕ ಡಾ. ನವೀನ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಬಳಿಕ ಮಾತನಾಡುತ್ತ ಜ್ಞಾನ ಸಂಪಾದನೆ ವಿದ್ಯಾರ್ಥಿಗಳ ಗುರಿಯಾಗಿರಬೇಕು. ಪ್ರಪಂಚದ ಆಗುಹೋಗುಗಳನ್ನು ಅರಿತುಕೊಳ್ಳುವ ಮೂಲಕ ವಿಷÀಯಗಳನ್ನು ಸರಿಯಾಗಿ ಮನಗಾಣಬೇಕು, ವಿದ್ಯಾರ್ಥಿಗಳು ಪ್ರಶ್ನಾರ್ಥಕ ಮತ್ತು ತಾರ್ಕಿಕ ಗುಣ ಹೊಂದಿರಬೇಕು ಎಂದರು.

ಸಂಪನ್ಮೂಲ ವ್ಯಕ್ತಿಗಳಾದ ಪಿ.ಕೆ. ಅಬ್ದುಲ್ ರೆಹಮಾನ್ ಮಾತನಾಡುತ್ತ ಪತ್ರಿಕೆಯು ಸರಕಾರದ ನಾಲ್ಕನೇ ಅಂಗವಾಗಿ ಇಂದು ಕಾರ್ಯ ನಿರ್ವಹಿಸುತ್ತಿದೆ. ವಿದ್ಯಾರ್ಥಿಗಳು ಪತ್ರಿಕೆ ಮತ್ತು ಮಾಧ್ಯಮಗಳ ಸುದ್ದಿಯನ್ನು ನೋಡುತ್ತಿರಬೇಕು, ಆವಾಗ ಮಾತ್ರ ಜವಾಬ್ದಾರಿ ಅರಿಯಲು ಸಾಧ್ಯ ಎಂದರು.

ಕಲಾವಿದೆ ವಾಂಚೀರ ವಿಠಲ ನಾಣಯ್ಯ ಮಾತನಾಡಿ ವಿದ್ಯಾರ್ಥಿಗಳು ಸಮಗ್ರ ಕ್ಷೇತ್ರದ ಬಗ್ಗೆ ಮಾಹಿತಿ ಕಲೆ ಹಾಕಬೇಕು, ಭವ್ಯ ರಾಷ್ಟ್ರದ ನಿರ್ಮಾಣ ವಿದ್ಯಾರ್ಥಿ ಗಳಿಂದ ಮಾತ್ರ ಸಾಧ್ಯ, ವಿದ್ಯಾರ್ಥಿ ಗಳು ವಿದ್ಯಾಭ್ಯಾಸದ ಜೊತೆಗೆ ಸಾಮಾಜಿಕ ಸಮಸ್ಯೆಗಳನ್ನು ಗುರುತಿ ಸುವದರೊಂದಿಗೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಾಮಾಜಿಕ ಜ್ಞಾನ ಬೆಳೆಸಿಕೊಳ್ಳಬೇಕು, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮಾಧ್ಯಮಗಳ ಪಾತ್ರ ಗಮನಾರ್ಹವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನ್ಯೂಸ್ 18ರÀ ಪ್ರತಿನಿಧಿಗಳು ಮತ್ತು ಪಬ್ಲಿಕ್ ಟಿ.ವಿಯ ಪ್ರತಿನಿಧಿಗಳು ಹಾಜರಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಂವಾದ ನಡೆಸಿದರು ಮತ್ತು ಮಾಧ್ಯಮಗಳ ಪಾತ್ರ ಹಾಗೂ ಮಹತ್ವದ ಬಗ್ಗೆ ಅರಿತರು.

ಕಾರ್ಯಕ್ರಮದಲ್ಲಿ ಎನ್.ಎಸ್ .ಎಸ್ ಯೋಜನಾಧಿಕಾರಿಗಳಾದ ಅರ್ಜುನ್, ಉಪನ್ಯಾಸಕರಾದ ಶಾಂತಿಭೂಷಣ್, ವಿದ್ಯಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.