ಶನಿವಾರಸಂತೆ, ಡಿ. 7: ಸಮೀಪದ ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯ ದೊಡ್ಡಕೊಳತ್ತೂರು ಗ್ರಾಮದ ಕಾಫಿ ತೋಟದಿಂದ ಅರಕಲಗೂಡಿಗೆ ಮೂವರು ಆರೋಪಿಗಳು ಗೂಡ್ಸ್ ಪಿಕಪ್ ವಾಹನದಲ್ಲಿ (ಕೆಎ 12 7023) ಅಕ್ರಮವಾಗಿ ಸಾಗಿಸುತ್ತಿದ್ದ ರೂ. 3.80 ಲಕ್ಷ ಮೌಲ್ಯದ 3 ಬೀಟೆ ನಾಟಾಗಳನ್ನು ವಾಹನ ಸಹಿತ ಅರಣ್ಯ ವಲಯಾಧಿಕಾರಿ ಕೆ. ಕೊಟ್ರೇಶ್ ಹಾಗೂ ಸಿಬ್ಬಂದಿ ವಶಪಡಿಸಿಕೊಂಡ ಘಟನೆ ಶನಿವಾರ ನಡೆದಿದೆ.

ಗುಂಡೂರಾವ್ ಬಡಾವಣೆಯ ಎಚ್.ಎನ್. ಪುನೀತ ಹಾಗೂ ಜಾಬಿಕೋಡಿ ಗ್ರಾಮದ ಡಿ.ವಿ. ವಿನಯ್ ಬಂಧಿತ ಆರೋಪಿಗಳು. ಮತ್ತೋರ್ವ ಆರೋಪಿ ಶಿರಂಗಾಲ ಗ್ರಾಮದ ಸಾಬು ಎಂಬಾತ ತಲೆಮರೆಸಿಕೊಂಡಿದ್ದಾರೆ. ವಿಜಯಕುಮಾರ್ ಅವರ ತೋಟದಿಂದ ವಾಹನದಲ್ಲಿ ಅರಕಲಗೂಡಿಗೆ ಸಾಗಿಸುವಾಗ ದೊರೆತ ಮಾಹಿತಿ ಅನ್ವಯ ಹೊಸೂರು ರಸ್ತೆಯ ಬಾಪೂಜಿ ವಿದ್ಯಾಸಂಸ್ಥೆಯ ಬಳಿ ಅಡ್ಡಗಟ್ಟಿ ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಉಪ ವಲಯಾಧಿಕಾರಿಗಳಾದ ಶ್ರೀನಿವಾಸ್, ಪ್ರಶಾಂತ್‍ಕುಮಾರ್, ಅರಣ್ಯ ರಕ್ಷಕರಾದ ಲೋಹಿತ್, ಜಯಕುಮಾರ್, ದೊಡ್ಡಯ್ಯ ಹಾಗೂ ಹರೀಶ್ ಕುಮಾರ್ ಪಾಲ್ಗೊಂಡಿದ್ದರು.