ಮಡಿಕೇರಿ, ಡಿ. 7: ಹೊಸ ವರ್ಷದ ಅಂಗವಾಗಿ ಕೊಂಡಂಗೇರಿ ಸಮೀಪದ ಎಲಿಯಂಗಾಡ್ ಫ್ರೆಂಡ್ಸ್ ಯುವಕ ಸಂಘದ ವತಿಯಿಂದ ಜಿಲ್ಲಾಮಟ್ಟದ ದ್ವಿತೀಯ ವರ್ಷದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ತಾ. 31 ರಂದು ನಡೆಯಲಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಅಬ್ದುಲ್ ರೆಹಮಾನ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರದ ಸಹಯೋಗದಲ್ಲಿ ನಡೆಯಲಿರುವ ಈ ಪಂದ್ಯಾವಳಿಯಲ್ಲಿ ಜಿಲ್ಲೆಯ ಸುಮಾರು 30 ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು. ತಾ. 31 ರಂದು ಬೆಳಿಗ್ಗೆ 10 ಗಂಟೆಗೆ ಪಂದ್ಯಾವಳಿ ಆರಂಭ ವಾಗಲಿದ್ದು, ಸಂಜೆ 7 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಆದರೆ ಅಂತಿಮ ಪಂದ್ಯಾವಳಿ ಮಧ್ಯರಾತ್ರಿ ಜರುಗಲಿದೆ. ಸಮಾರೋಪ ಸಮಾರಂಭಕ್ಕೆ ಜಿಲ್ಲೆಯ ವಿಧಾನಸಭಾ, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಪಂಚಾಯಿತಿ ಪ್ರತಿನಿಧಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳನ್ನು ಆಹ್ವಾನಿಸಿ ಕುಗ್ರಾಮವಾಗಿರುವ ಎಲಿಯಂಗಾಡ್‍ನ ನೈಜ ಸ್ಥಿತಿಯನ್ನು ಮನದಟ್ಟು ಮಾಡುವ ಉದ್ದೇಶ ಹೊಂದಿರುವದಾಗಿ ಅವರು ಹೇಳಿದರು.

ಸಮಾರೋಪ ಸಮಾರಂಭದಲ್ಲಿ ಸಾಮಾಜಿಕ, ರಾಜಕೀಯ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವರನ್ನು ಗೌರವಿಸ ಲಾಗು ವದಲ್ಲದೆ, ಪ್ರಸಕ್ತ ಕರ್ನಾಟಕ ರಾಜ್ಯ ವಾಲಿಬಾಲ್ ತಂಡದ ಪ್ರಮುಖ ತರಬೇತುದಾರರಾದ ಹಾಲುಗುಂದ ನಿವಾಸಿ ಪಂದಿಕಂಡ ಸತೀಶ್ ಅವರನ್ನು ಸನ್ಮಾನಿಸ ಲಾಗುವದು ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಪಿ.ಕೆ. ಗಫೂರ್, ಕಾರ್ಯದರ್ಶಿ ಕೆ.ಹೆಚ್. ಅನ್ವರ್, ಸದಸ್ಯರಾದ ಕೆ.ವೈ. ಅಬ್ದುಲ್ ಸಮದ್ ಹಾಗೂ ಶಾಹಿದ್ ಉಪಸ್ಥಿತರಿದ್ದರು.