ಗುಡ್ಡೆಹೊಸೂರು, ನ. 6: ಗುಡ್ಡೆಹೊಸೂರು ಸುತ್ತಮುತ್ತ ಹಾಗೂ ಕೊಡಗಿನ ಎಲ್ಲಾ ಭಾಗದಲ್ಲಿ ಭತ್ತದ ಫಸಲು ಕುಯಿಲಿಗೆ ಬಂದಿದ್ದು ಕಟಾವು ಮಾಡಲು ಸಾಧ್ಯವಾಗದೆ ರೈತರು ಆಕಾಶ ನೋಡುವಂತಾಗಿದೆ. ಜಿಲ್ಲೆಯ ಎಲ್ಲಾ ಭಾಗದ ಭತ್ತದ ಬೆಳೆ ಕಟಾವು ಮಾಡಲು ಬಂದಿದ್ದು, ಮಳೆಯ ಕಾರಣದಿಂದ ಉದುರಲಾ ರಂಭವಾಗಿದೆ.
ಇತ್ತೀಚಿನ ದಿನಗಳಲ್ಲಿ 4 ತಿಂಗಳ ಬೆಳೆಗಳು ಹೈಬ್ರೀಡ್ ತಳಿಗಳು 4 ತಿಂಗಳೊಳಗೆ ಕಟಾವು ಮಾಡಲೇ ಬೇಕು. ಇಲ್ಲವಾದಲ್ಲಿ ಭತ್ತವೆಲ್ಲ ಮಣ್ಣು ಪಾಲಾಗುತ್ತದೆ. ಈ ಭಾರಿ ಹವಾಮಾನದ ವೈಪರೀತ್ಯದಿಂದಾಗಿ ಅಲ್ಲಲ್ಲಿ ಮಳೆ ಬಂದಿದೆ.
ಒಂದು ತಿಂಗಳ ಹಿಂದೆ ಗುಡ್ಡೆಹೊಸೂರು ಮತ್ತು ಈ ಭಾಗದ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಮುಸುಕಿನ ಜೋಳ ಕಟಾವಿಗೆ ಬಂದ ಸಂದÀರ್ಭ ಮಳೆಯಿಂದಾಗಿ ಮೊಳಕೆಯೊಡೆಯಿತು. ರೈತರು ಜೋಳವನ್ನು ಕಾಳು ಮಾಡಿ ಅರ್ಧ ಬೆಲೆಗೆ ಮಾರಾಟ ಮಾಡಿದರು. ಅದರಂತೆಯೇ ಅರೇಬಿಕಾ ಕಾಫಿ ಹೆಚ್ಚು ಹಣ್ಣಾಗಿ ಮಣ್ಣು ಪಾಲಾಯಿತು. ಇದೀಗ ಭತ್ತದ ಸರದಿ. ಈ ಗೋಳನ್ನು ಕೇಳುವವರು ಯಾರು ಎಂಬದೆ ಯಕ್ಷ ಪ್ರಶ್ನೆಯಾಗಿದೆ ಎನ್ನುತ್ತಾರೆ ರೈತರು.
ಗುಡ್ಡೆಹೊಸೂರು ಬಳಿಯ ತೆಪ್ಪದಕಂಡಿಯ ಬಳಿಯ ಭತ್ತದ ಗದ್ದೆಯ ಕತೆಯನ್ನು ಓದುಗರಿಗೆ ಹೇಳಲೆಬೇಕು. ಕಳೆದ ಮಳೆಗಾಲ ಸಂದÀರ್ಭ ಅಲ್ಲಿನ ನಿವಾಸಿ ದಿ. ಸುಭ್ರಾಯ ಭಟ್ ಅವರ ಗದ್ದೆಯಲ್ಲಿ ಸುಮಾರು 2 ಎಕರೆ ಪ್ರದೇಶದಲ್ಲಿ ಭತ್ತದ ನಾಟಿ ಮಾಡಿ ನಾಟಿಯಾದ 2 ದಿನದಲ್ಲಿ ಕಾವೇರಿ ನದಿ ನೀರು ನುಗ್ಗಿ 10 ದಿನ ನೀರಿನೊಳಗಿದ್ದು, ನಂತರ ಮತ್ತೆ ನಾಟಿ ಮಾಡಿ ಬೆಳೆ ಚೆನ್ನಾಗಿಯೇ ಬಂತು. ಆದರೆ ಬೆಳೆಯನ್ನು ಕಟಾವು ಮಾಡಿದ ನಂತರ ಮತ್ತೆ ಮಳೆ ಬಂದು ಕುಯಿಲಾದ ಭತ್ತ ನೀರುಪಾಲಾಯಿತು.
ಕಳೆದ 2 ದಿನದ ಹಿಂದೆ 1 ಇಂಚು ಮಳೆಬಂತು. ಕಟಾವು ಮಾಡಿದ ಬಳಿಕ ಮತ್ತೆ ನೀರು ಪಾಲಾಯಿತು. ಸೂರ್ಯನ ಕಿರಣ ಭೂಮಿಗೆ ಬೀಳುವ ಲಕ್ಷಣ ಕಾಣುತ್ತಿಲ್ಲ. ಕಷ್ಟಪಟ್ಟು ಬೆಳೆದ ಭತ್ತದ ಬೆಳೆ ಕೈಸೇರುವದೆ ಎಂಬ ಆತಂಕದಲ್ಲಿ ರೈತರು ಕಾಯುತ್ತಿದ್ದಾರೆ.
-ಗಣೇಶ್ ಕುಡೆಕ್ಕಲ್