ವೀರಾಜಪೇಟೆ ಡಿ. 6: ಧರ್ಮಗಳ ಸಂರಕ್ಷಣೆಯ ಮೂಲಕ ಸಂಸ್ಕøತಿಯ ಉಳಿವಿಕೆಗಾಗಿ ಭಾರತೀಯರಾದ ನಾವು ಪಣ ತೊಡಬೇಕು ಎಂದು ರಾಜ್ಯ ಉಚ್ಚ ನ್ಯಾಯಾಲಯದ ವಕೀಲ ಎನ್. ರವೀಂದ್ರನಾಥ ಕಾಮತ್ ಹೇಳಿದರು. ಇತ್ತೀಚೆಗೆ ವೀರಾಜಪೇಟೆಗೆ ಸಮೀಪದ ಅರಮೇರಿ ಕಳಂಚೇರಿ ಮಠದಲ್ಲಿ ನಡೆದ ಮಾಸಿಕ ತತ್ವ ಚಿಂತನ ಗೋಷ್ಠಿಯ 193ನೇಯ ಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಧರ್ಮಗಳು ಹಿಂಸೆಗಳಿಂದಾಗಿ ಅವನತಿ ಹೊಂದುತ್ತವೆ. ಧರ್ಮಗಳನ್ನು ಅನುಕರಿಸುವದರಿಂದ ಮತ್ತು ಧಾರ್ಮಿಕ ಗ್ರಂಥಗಳ ಅನುಸರಣೆಯಿಂದ ಮನುಷ್ಯನ ಜೀವನ ಸಂಸ್ಕರಣೆಗೊಳ್ಳುತ್ತದೆ. ಸೋಗಲಾಡಿ ಧರ್ಮಗಳನ್ನು ಕಿತ್ತೆಸೆದು ನೈಜ ಧರ್ಮಗಳ ಸಂಸ್ಥಾಪನೆಯಾಗಬೇಕು ಎಂದರು.

ಪ್ರಗತಿಪರ ಕೃಷಿಕರೂ ಸಾಹಿತಿಗಳೂ ಆದ ಬೆಳ್ಳಾರೆಯ ಮಣಿಕಾರ ಗೋಪಾಲಕೃಷ್ಣ ಶ್ಯಾನುಬಾಗ್ ಅವರು ಹಿಂದೂ ಧರ್ಮದ ಏಕತೆ, ದೃಢತೆ ಮತ್ತು ಉತ್ಥಾನ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು. ಭಯೋತ್ಪಾದನೆಯನ್ನು ಧರ್ಮ ಗಳೊಂದಿಗೆ ತಳುಕು ಹಾಕುವದು ಸರಿಯಲ್ಲ. ಧರ್ಮಗಳ ಅನುಯಾಯಿ ಗಳನ್ನು ಸಮಾಜವು ಸೂಕ್ಷ್ಮದೃಷ್ಟಿಯಿಂದ ನೋಡುತ್ತದೆ. ಧರ್ಮವನ್ನು ರಕ್ಷಿಸ ಬಯಸುವವರು ಉದ್ದೇಶ ಸಾಧನೆಗೆ ವಾಮ ಮಾರ್ಗ ಅಥವಾ ಹಿಂಸೆಯ ಮಾರ್ಗವನ್ನು ಅವಲಂಬಿಸಬಾರದು. ಹಿಂಸೆ ಯಾವದೇ ಸಮಸ್ಯೆಗೆ ಪರಿಹಾರವಲ್ಲ. ಹಿಂಸೆಯ ಅವಲಂಬದಿಂದ ಜಗತ್ತಿನಲ್ಲಿ ಅದೆಷ್ಟೋ ಧರ್ಮಗಳು ಅವನತಿಯ ಹಾದಿ ತುಳಿದಿದೆ. ಆದರೆ ಹಿಂದೂ ಧರ್ಮ ಇದಕ್ಕೆ ಅಪವಾದವಾಗಿದೆ ಎಂದರು. ಪೀಠಾಧಿಪತಿಗಳಾದ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ನಿವೃತ್ತ ಕಾರ್ಯಪಾಲಕ ಅಭಿಯಂತರ ಮೈಸೂರಿನ ಜಿ.ಆರ್.ಪರಮೇಶ್ವರಪ್ಪ ಮಾತನಾಡಿದರು. ಜ್ಯೋತಿ ಎಸ್. ರಾವ್ ಪ್ರಾರ್ಥನೆಗೈದರು. ಸಿಂಧು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.