ಮಡಿಕೇರಿ, ಡಿ. 5: ನೆಹರು ಯುವ ಕೇಂದ್ರ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಹೆಬ್ಬೆಟ್ಟಗೇರಿಯ ವಿಸ್ಮಯ ಯುವಕ ಸಂಘ ಹಾಗೂ ಅಕ್ಕ ಯುವತಿ ಮಂಡಳಿ ಸಂಯುಕ್ತಾಶ್ರಯದಲ್ಲಿ ತಾ.15 ರಂದು ಪ್ರಥಮ ವರ್ಷದ ವಿಸ್ಮಯ ಕಪ್ ಕ್ರೀಡಾಕೂಟ, ಆರೋಗ್ಯ ತಪಾಸಣಾ ಮತ್ತು ಉಚಿತ ಪುಸ್ತಕ ವಿತರಣಾ ಸಮಾರಂಭ ನಡೆಯಲಿದೆ ಎಂದು ಸಂಘದ ಕ್ರೀಡಾಧ್ಯಕ್ಷ ದರ್ಶಿತ್ ಮತ್ತು ಕಾರ್ಯದರ್ಶಿ ಫ್ರಾನ್ಸಿಸ್ ಡಿಸೋಜ ತಿಳಿಸಿದ್ದಾರೆ.

ಅಂದು ಬೆಳಗ್ಗೆ 9 ಗಂಟೆಗೆ ಹೆಬ್ಬೆಟ್ಟರಿಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ವಿವಿಧ ಪಂದ್ಯಾವಳಿ ನಡೆಯಲಿದೆ. ಪುರುಷರಿಗೆ ಕಬ್ಬಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಪ್ರಥಮ ಹಾಗೂ ದ್ವಿತೀಯ ವಿಜೇತ ತಂಡಕ್ಕೆ ನಗದು ಮತ್ತು ಆಕರ್ಷಕ ಟ್ರೋಫಿ, ತೃತೀಯ ಸ್ಥಾನ ಪಡೆದ ತಂಡಕ್ಕೆ ಆಕರ್ಷಕ ಟ್ರೋಫಿ ನೀಡಲಾಗುವದು.

ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಪ್ರಥಮ ಹಾಗೂ ದ್ವಿತೀಯ ತಂಡಕ್ಕೆ ಆಕರ್ಷಕ ಟ್ರೋಫಿ ನೀಡಲಾಗುವದು. ಪುರುಷರಿಗೆ ಹಾಗೂ ಮಹಿಳೆಯರಿಗೆ ಹಗ್ಗ ಜಗ್ಗಾಟ ಮತ್ತು ಗುಂಡು ಎಸೆತ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ಆಕರ್ಷಕ ಟ್ರೋಫಿ ನೀಡಲಾಗುವದು.

ಅಲ್ಲದೇ ಹೆಬ್ಬೆಟ್ಟಗೇರಿ ಗ್ರಾಮಸ್ಥರಿಗೆ ಪ್ರತ್ಯೇಕ ಆಟೋಟ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಮಹಿಳೆಯರಿಗೆ ನಿಂಬೆ ಚಮಚ ಓಟ, ಮ್ಯೂಸಿಕಲ್ ಚೇರ್, ಪಾಯಿಸನ್ ಬಾಲ್, ಗುಂಡು ಎಸೆತ ಪಂದ್ಯಾವಳಿ ನಡೆಯಲಿದೆ. ಪುರುಷರಿಗೆ ಗುಂಡು ಎಸೆತ, ಬಕೆಟ್‍ಗೆ ರಿಂಗ್ ಹಾಕುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

ಪಂದ್ಯಾವಳಿಯಲ್ಲಿ ಆರೋಗ್ಯ ತಪಾಸಣಾ ಮತ್ತು ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವು ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 9480428199, 94816 70840 ಸಂಪರ್ಕಿಸಬಹುದಾಗಿದೆ.