ಮಡಿಕೇರಿ, ಡಿ. 5: ಕೊಡಗಿನ ಗಡಿಭಾಗ ಪೆರುಂಬಾಡಿ ಮತ್ತು ಕುಟ್ಟದಲ್ಲಿ ಆರ್‍ಟಿಒ ಚೆಕ್‍ಪೋಸ್ಟ್ ನಿರ್ಮಿಸಬೇಕು ಎಂದು ಆಗ್ರಹಿಸಿ, ಕರ್ನಾಟಕ ಟೂರಿಸ್ಟ್ ಟ್ಯಾಕ್ಸಿ ಆರ್ಗನೈಷೇಷನ್ ಜಿಲ್ಲಾ ಸಂಘವು (ಕೆಟಿಡಿಒ) ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಗೆ ಮನವಿ ಸಲ್ಲಿಸಿತು.
ನಗರದ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿದ ಪದಾಧಿಕಾರಿಗಳು, ಕೊಡಗು - ಕೇರಳ ಅಂತರ ರಾಜ್ಯ ಹೆದ್ದಾರಿಯಲ್ಲಿ ಯಾವದೇ ಚೆಕ್‍ಪೋಸ್ಟ್‍ಗಳಿಲ್ಲ. ಆದ್ದರಿಂದ, ಈ ಭಾಗದಲ್ಲಿ ಚೆಕ್‍ಪೋಸ್ಟ್‍ಗಳನ್ನು ಅಳವಡಿಸಬೇಕು ಎಂದು ಕೋರಿದರು.
ಸಂಘದ ಜಿಲ್ಲಾ ಅಧ್ಯಕ್ಷ ಜೆ.ವಿನ್ಸೆಂಟ್ ಬಾಬು ಮಾತನಾಡಿ, ಕೊಡಗಿಗೆ ಬರುವ ಪ್ರವಾಸಿಗರು ಯಾವದೇ ರೀತಿಯ ತೆರಿಗೆ ಪಾವತಿ ಮಾಡುತ್ತಿಲ್ಲ. ಇದರಿಂದ ಸರ್ಕಾರದ ಬೊಕ್ಕಸಕ್ಕೂ ನಷ್ಟವಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಪ್ರಕೃತಿ ವಿಕೋಪ ನಂತರ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಹಳದಿ ಬೋರ್ಡ್ ಹೊಂದಿರುವ ವಾಹನ ಚಾಲಕರು ಸರ್ಕಾರಕ್ಕೆ ತೆರಿಗೆ ಕಟ್ಟಿ ವಾಹನ ಚಲಾಯಿಸಬೇಕು. ಆದರೆ, ಬಿಳಿ ಬೋರ್ಡ್ ವಾಹನಗಳಲ್ಲಿ ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತಿದ್ದಾರೆ ಎಂದು ದೂರಿದರು. ಸಂಘದ ರಕ್ಷಣಾಧಿಕಾರಿ ರಫೀಕ್, ಉಪಾಧ್ಯಕ್ಷ ಡೆನ್ನಿಸ್, ಸಹ ಕಾರ್ಯದರ್ಶಿ ರಾಘವೇಂದ್ರ, ಪದಾಧಿಕಾರಿಗಳಾದ ವಿಶ್ವ ಪೂಜಾರಿ, ತಿರುಪತಿ ಉಡೋತ್ ಹಾಜರಿದ್ದರು.