ಮಡಿಕೇರಿ, ಡಿ. 5: ಹಿಯರಿಂಗ್ ಟಿನ್ನಿಟಸ್ ಹಾಗೂ ಇಂಪ್ಲಾಂಟ್ ಕ್ಲಿನಿಕ್ ವತಿಯಿಂದ ಚಾನಲ್ 24 ಕರ್ನಾಟಕ ಸಹಯೋಗದೊಂದಿಗೆ ತಾ.6 ರಂದು (ಇಂದು) ಕೊಡಗಿನ ಅಗ್ನಿಶಾಮಕ ಮತ್ತು ತುರ್ತು ಸೇವಾ ಸಂಸ್ಥೆಯ ಅಗ್ನಿಶಾಮಕದಳದವರಿಗೆ ನಗರದ ದಾಸವಾಳ ರಸ್ತೆಯಲ್ಲಿರುವ ಕ್ಲಿನಿಕ್‍ನಲ್ಲಿ ಉಚಿತ ಶ್ರವಣ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಹಿಯರಿಂಗ್ ಟಿನ್ನಿಟಸ್ ಹಾಗೂ ಇಂಪ್ಲಾಂಟ್ ಕ್ಲಿನಿಕ್‍ನ ಹಿರಿಯ ಆಡಿಯಾಲಜಿಸ್ಟ್ ತಶ್ಮಿ ಲಕ್ಷ್ಮಣ್ ತಿಳಿಸಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಗ್ನಿಶಾಮಕ ದಳದವರು, ಜೋರಾಗಿ ಸೈರನ್‍ಗಳೊಂದಿಗೆ ಸ್ಫೋಟಿಸುವ ಚಲನೆಯ ಅಗ್ನಿ ಶಾಮಕ ವಾಹನಗಳು, ಕೈಗಾರಿಕಾ ವಾಟರ್ ಪಂಪ್‍ಗಳು ಹಾಗೂ ಸುದೀರ್ಘವಾದ ಫೈರ್ ಸೈರನ್‍ಗಳಂತಹ ಜೋರಾದ ಶಬ್ದ ಉಂಟಾಗುವ ಸ್ಥಳಗಳಲ್ಲಿ ಕೆಲಸ ಮಾಡುತ್ತಾರೆ. ಇದರಿಂದಾಗುವ ಶಬ್ದಮಾಲಿನ್ಯದಿಂದ ಕಿವುಡುತನ ಬರಬಹುದು. ಅಗ್ನಿಶಾಮಕದಳದವರು ತಮ್ಮ ಸಮವಯಸ್ಕರಿಗಿಂತ ಹೆಚ್ಚು ಕಿವುಡುತನವನ್ನು ಅನುಭವಿಸಬಹುದು ಎನ್ನುವದು ಸಂಶೋಧನೆಗಳಲ್ಲಿ ದೃಢಪಟ್ಟಿದೆ. ಅವರ ಜೀವನದ ಮಟ್ಟವನ್ನು ಸುಧಾರಿಸುವದು ಈ ಶಿಬಿರದ ಉದ್ದೇಶ ಎಂದರು.

ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಪಿ. ಚಂದನ್ ಮಾತನಾಡಿ, ಕಿವುಡುತನವನ್ನು ಔಷಧಿಯಿಂದ ಗುಣಪಡಿಸಲಾಗುವದಿಲ್ಲ. ಆದರೆ ಮುಂಚಿತವಾಗಿಯೇ ಶಬ್ದ ರಹಿತ ಪ್ಲಗ್‍ಗಳನ್ನು ಬಳಸಿ ಇಂತಹ ಕಿವುಡುತನ ಬಾರದಂತೆ ತಡೆಗಟ್ಟಬಹುದು, ಆದರೆ ಅವರು ಆಡಿಯೋಲಾಜಿಸ್ಟ್‍ಗಳ ಬಳಿ ತಮ್ಮ ಕಿವುಡುತನ ಹೆಚ್ಚು ದುರ್ಬಲಗೊಂಡ ನಂತರವೇ ಪರೀಕ್ಷಿಸಲು ಬರುತ್ತಾರೆ. ಹಾಗಾಗಿ ಉಚಿತ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದು, 40ಕ್ಕೂ ಹೆಚ್ಚು ಮಂದಿ ಅಗ್ನಿಶಾಮಕ ದಳದವರು ಇದರ ಸದುಪಯೋಗ ಪಡೆದುಕೊಳ್ಳಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಚಾನಲ್ 24 ಕರ್ನಾಟಕದ ಸ್ಟ್ರಾಟಜಿಕ್ ಡೈರೆಕ್ಟರ್ ಜೇರಿಯಸ್ ಥಾಮಸ್ ಅಲೆಗ್ಸಾಂಡರ್, ಕಾರ್ಯಕ್ರಮ ಸಂಯೋಜಕಿ ಮೋನಿಷ ಮುತ್ತಮ್ಮ ಉಪಸ್ಥಿತರಿದ್ದರು.