ಮಡಿಕೇರಿ, ಡಿ. 4: ಇಲ್ಲಿನ ಶ್ರೀ ಮುತ್ತಪ್ಪ ಹಾಗೂ ಪರಿವಾರ ದೇವತೆಗಳ ಸನ್ನಿಧಿಯಲ್ಲಿ ಉಂಟಾಗಿರುವ ದೋಷಗಳನ್ನು ಪರಿಹರಿಸಿಕೊಂಡರೆ, ಸರಸ್ವತಿಯ ಅನುಗ್ರಹದೊಂದಿಗೆ ಮಕ್ಕಳಿಗೆ ಅಕ್ಷರ ಜ್ಞಾನ ಹಾಗೂ ಪ್ರಸಾದ ದಾನ ನೀಡುವಂತಹ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸುವ ಯೋಗವಿದೆ ಎಂದು ದೈವಜ್ಞರು ಭವಿಷ್ಯ ನುಡಿದಿದ್ದಾರೆ.

ಕಳೆದ ಸೆಪ್ಟಂಬರ್ 5 ರಿಂದ 7ರ ತನಕ ಕ್ಷೇತ್ರ ಅಭಿವೃದ್ಧಿ ಸಂಬಂಧ ಏರ್ಪಡಿಸಿದ್ದ ಅಷ್ಟಮಂಗಲ ಪ್ರಶ್ನೆಯು, ಇಂದಿನಿಂದ ಮತ್ತು ಮುಂದುವರಿದ್ದು, ಈ ವೇಳೆ ಆರೂಢ ರಾಶಿ ಫಲದಂತೆ, ಫಲ ವಿಮರ್ಶೆ ನಡೆಸಿದ ದೈವಜ್ಞರು; ದೇವ ಸನ್ನಿಧಿಯಲ್ಲಿ ಉಂಟಾಗಿರುವ ವಿವಿಧ ದೋಷಗಳನ್ನು ನಿವಾರಿಸಿಕೊಂಡರೆ ಉತ್ತಮ ಅಭಿವೃದ್ಧಿ ಕಂಡುಬರಲಿದೆ ಎಂದು ವಿಮರ್ಶಿಸಿದರು.

ಸನ್ನಿಧಿಯ ಈಗಿನ ತಂತ್ರಿಗಳಾದ ಪಂದಳದ ಪಾರ್ಥ ಸಾರಥಿü ಸ್ಕಂದನ್ ಅವರ ಉಪಸ್ಥಿತಿಯಲ್ಲಿ ಕಾಂಞಂಗಾಡಿನ ದೈವಜ್ಞ ತಂಬಾನ್ ಪಣಿಕರ್ ಹಾಗೂ ಚೋದ್ಯಕಾರರಾದ ಮಧುಸೂದನ್ ಪಣಿಕರ್ ಅಷ್ಟಮಂಗಲ ನಡೆಸಿಕೊಟ್ಟರು. ಕೇತ್ರದ ಮೂಲ ದೇವನಾದ ಈಶ್ವರ ಸಂಭೂತ ಶ್ರೀ ಮುತ್ತಪ್ಪ ಸಹಿತ 14 ಉಪದೇವತೆಗಳ ಆರಾಧನೆ ನಡೆಯುತ್ತಿದ್ದು, ಆ ಮಾತ್ರದಿಂದ ಕ್ಷೇತ್ರದಲ್ಲಿ ಮುಂದೆ ಎಲ್ಲ ರೀತಿಯ ವಿದ್ಯೆ, ನಾಟ್ಯ, ಸಂಗೀತದಂತಹ ಚಟುವಟಕೆಗಳನ್ನು ಆರಂಭಿಸುವ ಯೋಗ ಲಭಿಸಲಿದೆ ಎಂದು ಬಣ್ಣಿಸಿದರು.

ಸಮಿತಿಗೆ ಸಲಹೆ : ಶ್ರೀ ಮುತ್ತಪ್ಪ ತನ್ನನ್ನು ನಂಬಿರುವ ಭಕ್ತರಿಗೆ ಆಡಳಿತ ವರ್ಗಕ್ಕೆ, ಪೂಜಾರಿಗಳಿಗೆ ಎಲ್ಲ ರೀತಿ ಸಮೃದ್ಧಿ ಕರುಣಿಸಲಿದ್ದು, ನಿತ್ಯಪೂಜೆ ಹಾಗೂ ಪರ್ವ ಸೇವೆಗಳಲ್ಲಿ ಪರಂಪರಾಗತವಾಗಿ ನಡೆದು ಬಂದಿರುವ ಪದ್ಧತಿ, ನೈವೇದ್ಯಗಳಲ್ಲಿ ವಂಚಿಸಬಾರದೆಂದು ನೆನಪಿಸಿದರು. ಆ ದಿಸೆಯಲ್ಲಿ ಆಡಳಿತ ವರ್ಗ ಗಮನ ಹರಿಸುವಂತೆ ಸಲಹೆಯಿತ್ತರು.

ಮಾತೃ ಭಕ್ತಿ ಪ್ರದಾನ : ದೇವನ ಸನ್ನಿಧಿಯಲ್ಲಿ ಪುರುಷರು ಸದ್ಭಕ್ತಿಯಿಂದ ನಡೆದುಕೊಳ್ಳುವದರೊಂದಿಗೆ, ಮಾತೆಯರಿಂದ ಭಕ್ತಿ ಪ್ರಧಾನ ಸೇವೆಗಳನ್ನು ಗೌರವಿಸುವದರಿಂದ ಕ್ಷೇತ್ರವು ಮತ್ತಷ್ಟು ಪ್ರವರ್ಧಮಾನಗೊಳ್ಳಲಿದೆ ಎಂದು ಬೊಟ್ಟು ಮಾಡಿದ ದೈವಜ್ಞರು, ಭಕ್ತಿಯಲ್ಲಿ ಹೆಣ್ಣು - ಗಂಡು ಬೇಧ ಭಗವಂತನಿಗೆ ಇಲ್ಲವೆಂದು ತಿಳಿ ಹೇಳಿದರು.

ವೃಕ್ಷ ಲಕ್ಷಣ : ಅಶೋಕ ವೃಕ್ಷವು ವನಿತೆಯರು ನಡೆದಾಡುವ ತಾಣಗಳಲ್ಲಿ ಸುಂದರ ಸುಮರಾಣಿ ಅರಳಿಸುವಂತೆ ಸ್ತ್ರೀ ಸಮೂಹದ ಪೂಜೆ ಪ್ರಾರ್ಥನೆಗೆ ದೇವರು ಬೇಗನೆ ಒಲಿಯುತ್ತಾನೆ ಎಂದು ವಿಮರ್ಶಿಸಿದ ದೈವಜ್ಞರು, ಶೋಕ ರಹಿತ ಭಕ್ತರಿಂದ ಸನ್ನಿಧಿ ಏಳಿಗೆ ಹೊಂದಲಿದೆ ಎಂದು ಮಾರ್ನುಡಿದರು.

ತಾ. 5ರಂದು (ಇಂದು) ಕೂಡ ಅಷ್ಟಮಂಗಲ ಪ್ರಶ್ನೆ ಮುಂದುವರಿಯಲಿದೆ. ಇಂದು ಪ್ರಶ್ನೆ ಸಂದರ್ಭ ದೇವಾಲಯ ಸಮಿತಿ ಪ್ರಮುಖರಾದ ಟಿ.ಕೆ. ಸುಧೀರ್, ಅಶೋಕ್, ಉಣ್ಣಿಕೃಷ್ಣ, ಸುಬ್ರಮಣ್ಯ, ಸುರೇಶ್ ಮುತ್ತಪ್ಪ, ಶಾರದಾ ರಾಮನ್, ಕೊರಗಪ್ಪ ರೈ, ಕೆ.ಎಸ್. ರಮೇಶ್ ಸೇರಿದಂತೆ ಇತರ ಪ್ರಮುಖರು, ಸದ್ಭಕ್ತರು ಪಾಲ್ಗೊಂಡಿದ್ದರು.