ಮಡಿಕೇರಿ, ಡಿ. 4: ಮಡಿಕೇರಿ ನಗರದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಾಣಗೊಂಡು ಕಾಡು ಪಾಲಾಗಿದ್ದ ಉದ್ಯಾನವನಗಳ ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿದೆ.
ನಗರದ ವಿವಿಧ ಬಡಾವಣೆಗಳಲ್ಲಿ ನಿರ್ಮಾಣಗೊಂಡಿದ್ದ ಉದ್ಯಾನವನಗಳು ಕಾಡು ಪಾಲಾಗಿರುವ ಬಗ್ಗೆ ‘ಶಕ್ತಿ’ಯಲ್ಲಿ ‘ಮಂಜಿನ ನಗರದಲ್ಲಿ ಪಾರ್ಥೇನಿಯ ಪಾರ್ಕ್ಗಳು’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಗೊಂಡಿತ್ತು. ಸ್ಪಂದಿಸಿರುವ ನಗರಸಭೆ ಉದ್ಯಾನಗಳನ್ನು ಸ್ವಚ್ಛಗೊಳಿಸುವ ಕಾರ್ಯ ಆರಂಭಿಸಿದೆ. ಆದರೆ ನಗರದಾದ್ಯಂತ ಇರುವ ಒಟ್ಟು 18 ಉದ್ಯಾನಗಳ ಸ್ವಚ್ಛತೆಗೆ ಕೇವಲ ಮೂರು ಮಹಿಳಾ ಸಿಬ್ಬಂದಿಗಳನ್ನು ಮಾತ್ರ ನಿಯೋಜಿಸಲಾಗಿದೆ. ನಗರಸಭಾ ಕಚೇರಿಯಲ್ಲಿ ನಗರಸಭೆಗೆ ಸೇರಿದ ಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದ ವಯಸ್ಸಾದ ಮಹಿಳೆಯರನ್ನು ಈ ಕಾರ್ಯಕ್ಕೆ ನೇಮಿಸಲಾಗಿದೆ. ಈ ಮಹಿಳೆಯರಿಗೆ ಬಿರು ಬಿಸಲಿನಲ್ಲಿ ಕೈಯಲ್ಲಿ ಕಾಡುಗಳನ್ನು ಕೀಳಲು ತ್ರಾಣ ಇಲ್ಲದಂತಿದ್ದಾರೆ. ಇವರನ್ನು ನೇಮಿಸಲಾಗಿದೆ. ಮಳೆಗಾಲದವರೆಗೂ ಕಾಡು ಕೀಳುತ್ತಾ ಸಾಗಿದರೂ ಎಲ್ಲ ಉದ್ಯಾನಗಳು ಸ್ಚಚ್ಛವಾಗುವದು ಸಂಶಯವೇ ಸರಿ. ನಗರಸಭೆಯಲ್ಲಿ ಕಳೆ ಕೊಚ್ಚುವ ಯಂತ್ರಗಳಿದ್ದರೂ, ಪುರುಷ ಕಾರ್ಮಿಕರಿದ್ದರೂ ವೃದ್ಧ ಮಹಿಳೆಯರನ್ನು ನೇಮಿಸಿರುವ ಬಗ್ಗೆ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉದ್ಯಾನ ನಿರ್ಮಾಣಕ್ಕೆ ಲಕ್ಷಗಟ್ಟಲೆ ವೆಚ್ಚ ಮಾಡಲಾಗಿದೆ. ಇದೀಗ ಸ್ವಚ್ಛತೆ ಹೆಸರಿನಲ್ಲಿ ಒಂದಿಷ್ಟು ಬಿಲ್ ಮಾಡುವ ಹುನ್ನಾರವಾಗಿದೆ. ನೀರಿನÀ ವ್ಯವಸ್ಥೆ ಕಲ್ಪಿಸಿ, ಗಿಡಗಳನ್ನು ನೆಟ್ಟರೆ ಉದ್ಯಾನದ ನಿರ್ವಹಣೆ ಆದರೂ ಆಗಬಹುದು. ಆದರೆ ನಗರಸಭೆ ಆ ಕೆಲಸ ಮಾಡುತ್ತಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ.
-ಸಂತೋಷ್