ಪಾಲಿಬೆಟ್ಟ, ಡಿ. 5: ಸಾರ್ವಜನಿಕ ಶಿಕ್ಷಣ ಇಲಾಖೆ ಕೊಡಗು ಜಿಲ್ಲಾ ಪಂಚಾಯಿತಿ ಹಾಗೂ ಸಮಗ್ರ ಶಿಕ್ಷಣ ಅಭಿಯಾನದ ಮಕ್ಕಳ ವಿಜ್ಞಾನ ಹಬ್ಬ ಪಾಲಿಬೆಟ್ಟ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ವಿಜ್ಞಾನ ಪ್ರಯೋಗದ ಮೂಲಕ ನಡೆಯಿತು.
ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಸಮಾಜದಲ್ಲಿ ಪ್ರತಿಭಾನ್ವಿತರಾಗಿ ಮುಂದೆ ಬರಬೇಕೆಂದು ಕರೆ ನೀಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ. ಮಚ್ಚಾಡೋ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣ ದೊಂದಿಗೆ ಉತ್ತಮ ಹವ್ಯಾಸವನ್ನು ರೂಢಿಸಿಕೊಂಡು ಸ್ವಾವಲಂಬಿ ಗಳಾಗಲು ಶ್ರಮವಹಿಸಬೇಕೆಂದರು.
ತಾಲೂಕು ಪಂಚಾಯಿತಿ ಸದಸ್ಯ ಅಜಿತ್ ಕರುಂಬಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣ ಇಲಾಖೆಯಿಂದ ಹಲವು ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿ ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬಿಳಗಿ, ತಾಲೂಕು ಅಕ್ಷರ ದಾಸೋಹದ ಅಧಿಕಾರಿ ರಾಜೇಶ್, ಪಾಲಿಬೆಟ್ಟ ಉಪಠಾಣಾಧಿಕಾರಿ ಗಣೇಶ್, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸುರೇಂದ್ರ, ಗ್ರಾಮ ಪಂಚಾಯಿತಿ ಸದಸ್ಯರಾದ ದೀಪಕ್ ಗಣಪತಿ, ವಸಂತ್, ಕೂತಂಡ ಬೋಜಮ್ಮ, ಸಮಗ್ರ ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗೀತಾಂಜಲಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸೈದು, ಸಿಆರ್‍ಪಿ ಕರುಂಬಯ್ಯ, ಮಕ್ಕಳ ವಿಜ್ಞಾನ ಹಬ್ಬದ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಚಂದನ, ಶಾಲಾ ಮುಖ್ಯ ಶಿಕ್ಷಕಿ ವಿಮಲಾ, ಪ್ರಭಾರ ಶಿಕ್ಷಕ ಮಂಜುನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.