ಮಡಿಕೇರಿ, ಡಿ. 3: ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ ಸಮಾಜದ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಜಿ.ಪಂ. ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಬಬ್ಬೀರ ಸರಸ್ವತಿ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಶಿಶು ಕಲ್ಯಾಣ ಸಂಸ್ಥೆಯಲ್ಲಿ ಸ್ತ್ರೀಶಕ್ತಿ ಗುಂಪುಗಳ ಸದಸ್ಯರಿಗೆ ನಡೆದ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಮಾತನಾಡಿ, ಸ್ತ್ರೀಶಕ್ತಿ ಗುಂಪುಗಳಿಂದ ಆರ್ಥಿಕವಾಗಿ ಮಹಿಳೆಯರು ಹಾಗೂ ಕುಟುಂಬಗಳು ಸದೃಢವಾಗುತ್ತಿದ್ದು, ಇದರ ಉಪಯೋಗವನ್ನು ಉತ್ತಮ ರೀತಿಯಲ್ಲಿ ಸದ್ಭಳಕೆ ಮಾಡಿಕೊಳ್ಳಬೇಕು.
ಸ್ತ್ರೀಶಕ್ತಿ ಗುಂಪುಗಳ ಬಲವರ್ಧನೆಗೆ ಸರ್ಕಾರ ಎಲ್ಲಾ ರೀತಿಯ ಸವಲತ್ತು ನೀಡುತ್ತಿದ್ದು, ಇದರ ಸದುಪಯೋಗಪಡಿಸಿಕೊಂಡು ಸ್ತ್ರೀಶಕ್ತಿ ಗುಂಪುಗಳು ಆರ್ಥಿಕವಾಗಿ ಸದೃಢತೆ ಹೊಂದಬೇಕು. ಮಹಿಳೆಯರು ಮೊಬೈಲ್ ಬಳಕೆಯಿಂದ ಆಗುತ್ತಿರುವ ತೊಂದರೆಗಳ ಕುರಿತು ಮಕ್ಕಳಿಗೆ ತಿಳಿಹೇಳಬೇಕು. ಪೋಷಕರು ಮಕ್ಕಳೊಂದಿಗೆ ಬೆರೆತು ಉತ್ತಮ ಸಂಸ್ಕಾರ ನೀಡಿ, ಒಳ್ಳೆಯ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಜವಾಬ್ದಾರಿ ಹೆಚ್ಚಿನದ್ದಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸೋಮವಾರಪೇಟೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ್, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಣ್ಣಯ್ಯ, ಅರೆಭಾಷೆ ಅಕಾಡೆಮಿಯ ಸದಸ್ಯೆ ಪ್ರೇಮ ರಾಘವಯ್ಯ, ಭಾರತಿ ರಮೇಶ್, ಜಿಲ್ಲಾ ಸ್ತ್ರೀ ಶಕ್ತಿ ಗುಂಪುಗಳ ಅಧ್ಯಕ್ಷೆ ರೆಹನಾ ಇತರರು ಇದ್ದರು.