ವೀರಾಜಪೇಟೆ, ಡಿ. 3: ದಿವ್ಯಾಂಗ ಮಕ್ಕಳೊಂದಿಗೆ ಬೆರೆತು ಇತರರಂತೆ ಅವರನ್ನು ಸಮಾನತೆಯಿಂದ ನೋಡಿ ಅವರಲ್ಲಿ ಧ್ಯೆರ್ಯ ತುಂಬಿ ಪ್ರೋತ್ಸಾಹ ನೀಡಿದರೆ ಅವರು ಕೂಡ ಎಲ್ಲರಂತೆ ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ಇಲ್ಲಿನ ಸಮುಚ್ಚಯ ನ್ಯಾಯಾಲಯಗಳ ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಆರ್ ಜಯಪ್ರಕಾಶ್ ಹೇಳಿದರು.
ಕೊಡಗು ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಂiÀiದಲ್ಲಿ ವೀರಾಜಪೇಟೆ ಸರ್ಕಾರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ವಿಶೇಷಚೇತನರ ದಿನಾಚರಣೆ ಹಾಗೂ ಪರಿಸರ ನಿರ್ಮಾಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಹಿಂದೆ ಸಮಾಜ ಹಾಗೂ ಕುಟುಂಬದಲ್ಲಿ ದಿವ್ಯಾಂಗ ಮಕ್ಕಳ ಬಗ್ಗೆ ನಿರ್ಲಕ್ಷ್ಯ ಇತ್ತು. ಇಂದು ಅವರನ್ನು ನೋಡುವ ದೃಷ್ಟಿ ಬದಲಾಗಿದೆ. ಸರ್ಕಾರವು ಕೂಡ ಅವರನ್ನು ನಿರ್ಲಕ್ಷಿಸದೆ ಅವರ ಕಲ್ಯಾಣಕ್ಕಾಗಿ ಹೆಚ್ಚಿನ ಅನುದಾನ ನೀಡಬೇಕು. ದಿವ್ಯಾಂಗರು ಇಂದು ರಾಜ್ಯ,ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸುತ್ತಿದ್ದಾರೆ ಅಂದರೆ ಪಾಲಕರು ಮತ್ತು ಶಿಕ್ಷಕರು ಆದಷ್ಟು ತಾಳ್ಮೆ ಸಹನೆಯಿಂದ ಅವರೊಂದಿಗೆ ಬೆರೆತುಕೊಂಡಿರುವದೇ ಮುಖ್ಯ ಕಾರಣವಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಮಾತನಾಡಿ ದಿವ್ಯಾಂಗರ ದೇಹದಲ್ಲಿ ಏರುಪೇರುಗಳಿರಬಹುದು ಆದರೆ ಅವರ ಮನಸ್ಸು ಶುದ್ಧ ಹಾಗೂ ಶುಭ್ರವಾಗಿರುತ್ತದೆ. ಅವರ ಕಷ್ಟವನ್ನು ನೆನಪಿಸಿಕೊಂಡಾಗ ಬಾಲ್ಯ ಜೀವನ ನೆನೆಪಿಗೆ ಬರುತ್ತದೆ. ನಾವೆಲ್ಲರೂ ಸಮಾಜವನ್ನು ಉದ್ದಾರ ಮಾಡುವ ಭಾವನೆಯನ್ನು ಬೆಳಸಿಕೊಳ್ಳಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲಾ ಬೀಳಗಿ ಮಾತನಾಡಿ ವಿಶೇಷಚೇತನರ ಬಗ್ಗೆ ಯಾವದೇ ಹಿಂಜರಿಕೆ ಭೇದ ಭಾವ ಇಲ್ಲದಂತೆ ಕಾಣಬೇಕು. ದಿವ್ಯಾಂಗರು ಕೂಡ ನಮ್ಮಂತೆಯೆ ಎಲ್ಲ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದು ಅವರುಗಳು ಸಮಾಜದ ಮುಖ್ಯ ವಾಹಿನಿಗೆ ಬರಲು ನಾವು ಮುಕ್ತ ಮನಸ್ಸಿನಿಂದ ಸಹಕರಿಸಬೇಕು ಎಂದರು.
ವೇದಿಕೆಯಲ್ಲಿ ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ವನಜಾಕ್ಷಿ, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಕೆ ಪ್ರವೀಣ್, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಸುರೇಂದ್ರ ಉಪಸ್ಥಿತರಿದ್ದರು.