ಮಡಿಕೇರಿ, ಡಿ.3 : ಕೊಡಗಿನ ಗಡಿ ಗ್ರಾಮವಾದ ಕರಿಕೆಯ ರಸ್ತೆ ಅವ್ಯವಸ್ಥೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕರಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಬಾಲಚಂದ್ರ ನಾಯರ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್.ರಮಾನಾಥ್, ಕರಿಕೆ ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬೇಕಲ್ ಡಿ.ದೇವರಾಜ್ ಮತ್ತಿತರರು ತಾ.4 ರಂದು (ಇಂದು) ಕರಿಕೆ ಬಂದ್ ಮಾಡಿ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಗ್ರಾಮ ಸಂಪೂರ್ಣ ಬೆಳಗ್ಗಿನಿಂದಲೇ ಬಂದ್ ಆಗಲಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವನ್ನು ಗ್ರಾಮಸ್ಥರು ಪ್ರತಿಭಟನೆ ಮೂಲಕ ಖಂಡಿಸಲಿದ್ದಾರೆ ಎಂದು ರಮಾನಾಥ್ ತಿಳಿಸಿದ್ದಾರೆ.

ಪ್ರಯಾಣಿಕರ ಪರದಾಟ: ಬಂದ್ ಕರೆ ಹಿನ್ನೆಲೆಯಲ್ಲಿ ಇಂದು ಸಂಜೆಯಿಂದಲೇ ಭಾಗಮಂಡಲದಿಂದ ಕರಿಕೆಗೆ ತೆರಳುವ ಬಸ್‍ಗಳು ಸಂಚಾರ ಸ್ಥಗಿತಗೊಳಿಸಿದ್ದರಿಂದ ಕೂಲಿ ಕಾರ್ಮಿಕರು, ಶಾಲಾ ಮಕ್ಕಳು ಕರಿಕೆ ಜಂಕ್ಷನ್‍ನಲ್ಲಿ ಬಸ್ ಸಿಗದೆ ಪರದಾಡುವಂತಾಗಿತ್ತು.