ವೀರಾಜಪೇಟೆ, ಡಿ.3 ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ಮೊಬೈಲ್‍ನಲ್ಲಿ ಮಾತನಾಡಿ ಬ್ಯಾಂಕ್ ಖಾತೆಯಿಂದ ರೂ. 4000 ಹಣವನ್ನು ಲಪಟಾಯಿಸಿ ವಂಚಿಸಿರುವ ಘಟನೆಯೊಂದು ನಾಪೋಕ್ಲು ಬಳಿಯ ಬಲ್ಲಮಾವಟಿಯಲ್ಲಿ ನಡೆದಿದೆ.ಪೇರೂರು ಗ್ರಾಮದ ಕೆ.ಬಿ.ಸುರೇಂದ್ರ ಎಂಬವರು ಕಾರ್ಮಿಕನಾಗಿದ್ದು ಬಲ್ಲಮಾವಟಿ ಗ್ರಾಮದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಉಳಿತಾಯ ಖಾತೆ ಹೊಂದಿದ್ದು ಅವರ ಬ್ಯಾಂಕ್ ಉಳಿತಾಯ ಖಾತೆಯಲ್ಲಿ 4082 ಹಣವಿತ್ತು. ನಾಲ್ಕು ದಿನಗಳ ಹಿಂದೆ ಯಾರೋ ಮೊಬೈಲ್ ಕರೆ ಮಾಡಿ ನಾವುಗಳು ಕೆನರಾ ಬ್ಯಾಂಕ್‍ನ ಅಧಿಕಾರಿಗಳಾಗಿದ್ದು ನಿಮ್ಮ ಉಳಿತಾಯ ಖಾತೆ ಬ್ಲಾಕ್ ಆಗಿದೆ; ಇದನ್ನು ಸರಿ ಪಡಿಸಲು ಬ್ಯಾಂಕ್‍ನ ಎ.ಟಿ.ಎಂ ನಂಬರ್ ಅವಶ್ಯವಾಗಿದೆ ಎಂದು ಪಡೆದುಕೊಂಡರು ಎರಡು ದಿನಗಳ ನಂತರ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ರೂ. 4000 ಡ್ರಾ ಮಾಡಿ ಕೇವಲ ರೂ. 82 ಮಾತ್ರ ಇತ್ತು. ಇದನ್ನು ಬ್ಯಾಂಕ್‍ನ ವ್ಯವಸ್ಥಾಪಕರಿಗೆ ತಿಳಿಸಿದಾಗ ನಾವು ಬ್ಯಾಂಕ್‍ನಿಂದ ಯಾವದೇ ಮೊಬೈಲ್ ಕರೆ ಮಾಡಿಲ್ಲ. ಯಾರೋ ವಂಚಕರಿಗೆ ಎ.ಟಿ.ಎಂ. ನಂಬರ್ ಕೊಟ್ಟು ತಪ್ಪು ಮಾಡಿದ್ದರಿಂದ ಈ ರೀತಿ ಹಣ ಡ್ರಾ ಮಾಡಿರಬಹುದು ಎಂದು ಬ್ಯಾಂಕ್ ವ್ಯವಸ್ಥಾಪಕರು ಸುರೇಂದ್ರ ಅವರಿಗೆ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸುರೇಂದ್ರ ಅವರು ವೀರಾಜಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದಾಗ ಇದು ಸೈಬರ್ ಕ್ರೈಂ ಆಗಿರುವದರಿಂದ ಅದೇ ಘಟಕಕ್ಕೆ ದೂರು ನೀಡುವಂತೆ ಸಲಹೆ ನೀಡಿದ್ದಾರೆ.ಸೈಬರ್ ಕ್ರೈಂಗೆ ದೂರು ನೀಡಲು ದುಬಾರಿ ವೆಚ್ಚ ತಗಲುವದರಿಂದ ಇದನ್ನು ಸುರೇಂದ್ರ ಕೈ ಬಿಟ್ಟಿದ್ದಾರೆ. ಇನ್ನು ಮುಂದೆ ಬ್ಯಾಂಕ್ ಖಾತೆದಾರರು ಯಾರಿಗೂ ಉಳಿತಾಯ ಖಾತೆ ನಂಬರ್ ಹಾಗೂ ಎಟಿಎಂ ಪಿನ್ ನಂಬರನ್ನು ನೀಡಿ ಹಣ ಕಳೆದುಕೊಳ್ಳದಂತೆ ಪೊಲೀಸರು ತಿಳಿಸಿದ್ದಾರೆ.