ಒಡೆಯನಪುರ, ಡಿ. 3: ಸಮೀಪದ ಅಂಕನಹಳ್ಳಿ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಮಕ್ಕಳ ಸಂತೆ ಏರ್ಪಡಿಸಲಾಗಿತ್ತು. ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳ ಜೊತೆಯಲ್ಲಿ ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳು ಹಾಗೂ ಪಕ್ಕದ ಅಂಗನವಾಡಿಯ ಪುಟಾಣಿಗಳು ಸಹ ಮಕ್ಕಳ ಸಂತೆಯಲ್ಲಿ ಜತೆಗೂಡಿ ಮಕ್ಕಳ ಸಂತೆಗೆ ಬಂದ ಗ್ರಾಹಕರನ್ನು ವ್ಯಾಪಾರದತ್ತ ಆಕರ್ಷಿಸಿದರು.

ಮಕ್ಕಳ ಸಂತೆಯಲ್ಲಿ ಮಕ್ಕಳು ತಮ್ಮ ಮನೆಯಲ್ಲಿ ಬೆಳೆದ ತರಕಾರಿ, ಕಾಯಿಪಲ್ಲೆ, ಸೊಪ್ಪು, ಸಿಹಿಕುಂಬಳ, ಸೋರೆಕಾಯಿ. ಸಿಹಿ ಗೆಣಸು, ಅವರೆಕಾಯಿ, ಬದನೆಕಾಯಿ, ಬೀನ್ಸ್, ಸೌತೆಕಾಯಿ ಮುಂತಾದ ತರಕಾರಿಗಳನ್ನು ತಂದು ವ್ಯಾಪಾರ ಮಾಡಿದರು. ಮತ್ತೆ ಕೆಲವು ಮಕ್ಕಳು ಪಕ್ಕದ ಪಟ್ಟಣದ ಸಂತೆ ಮಾರುಕಟ್ಟೆಯಿಂದ ಖರೀದಿಸಿದ ತರಕಾರಿ, ತೆಂಗಿನಕಾಯಿ. ಈರುಳ್ಳಿ ಮುಂತಾದವುಗಳನ್ನು ಮಕ್ಕಳ ಸಂತೆಯಲ್ಲಿ ಮಾರಾಟಕ್ಕಿಟ್ಟಿದ್ದರು. ಸಂತೆಯಲ್ಲಿ ತಮ್ಮ ತರಕಾರಿ ಅಂಗಡಿ, ಕ್ಯಾಂಟೀನು, ಕಾಫಿ, ಚಹ, ತಿಂಡಿ ತಿನಿಸುಗಳ ಅಂಗಡಿಗಳಿಗೆ ದೇವರ ಹೆಸರು ಮತ್ತು ಸಾಹಿತಿ, ಕವಿಗಳ ಹೆಸರುಗಳನ್ನಿಟ್ಟುಕೊಂಡಿದ್ದರು. ಪ್ರತಿಯೊಂದು ತರಕಾರಿಯನ್ನು ರೂ. 40 ರಿಂದ 50 ಗಳಿಗೆ ಮಾರಾಟ ಮಾಡಿದರು. ಈರುಳ್ಳಿ ಬೆಲೆ ಗಗನಕ್ಕೇರಿರುವ ಹಿನ್ನೆಲೆ ಮಕ್ಕಳು ಪಕ್ಕದ ಸಂತೆಯಿಂದ ತೀರಾ ಚಿಕ್ಕ ಗಾತ್ರದ ಈರಳಿಯನ್ನು ಖರೀದಿಸಿ ತಂದು ಅದನ್ನು ಗ್ರಾಹಕರಿಗೆ ಕೆ.ಜಿ.ಗೆ ರೂ. 50 ರಂತೆ ಮಾರಾಟ ಮಾಡುತ್ತಿದ್ದುದು ಕಂಡುಬಂತು.