ಒಡೆಯನಪುರ, ಡಿ. 1: ಸೋಮವಾರಪೇಟೆ ತಾಲೂಕು ಮತ್ತು ಶನಿವಾರಸಂತೆ ಘಟಕದ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ), ಮಡಿಕೇರಿಯ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನೇತ್ರಶಾಸ್ತ್ರ ವಿಭಾಗ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಸಮಿಪದ ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಕಣ್ಣಿನ ಶಸ್ತ್ರಚಿಕಿತ್ಸಾ ಶಿಬಿರ ಯಶಸ್ವಿಯಾಗಿ ನಡೆಯಿತು. ಅಕ್ಕ ಪಕ್ಕದ ಗ್ರಾಮಗಳಿಂದ ಆಗಮಿಸಿದ ನೂರಾರು ಜನರು ಶಿಬಿರದ ಲಾಭವನ್ನು ಪಡೆದುಕೊಂಡರು. ಶಿಬಿರದ ಮಹತ್ವದ ಕುರಿತು ಮಡಿಕೇರಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನೇತ್ರಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಪುಟ್ಟರುದ್ರಯ್ಯ ಮಾತನಾಡಿ-ಮನುಷ್ಯನ ಪ್ರಮುಖ ಅಂಗಾಂಗಗಳಲ್ಲಿ ಕಣ್ಣು ಮಹತ್ವದ್ದಾಗಿರುತ್ತದೆ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜನರಿಗೆ ಕಣ್ಣಿನ ತಪಾಸಣೆ ಮತ್ತು ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರದ ಅಗತ್ಯ ಇರುತ್ತದೆ ಎಂದರು. ಸಾರ್ವಜನಿಕರು ಸಂಘ-ಸಂಸ್ಥೆಗಳು ಮತ್ತು ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಳ್ಳುವ ಉಚಿತ ಕಣ್ಣಿನ ತಪಾಸಣೆ ಮತ್ತು ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರದ ಲಾಭವನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು. ಶಿಬಿರವನ್ನು ಮಡಿಕೇರಿ ನೇತ್ರಶಾಸ್ತ್ರ ವಿಭಾಗದ ನೇತ್ರ ತಜ್ಞೆ ಡಾ.ಗೀತ ಉದ್ಘಾಟಿಸಿದರು. ಈ ಸಂದರ್ಭ ಶನಿವಾರಸಂತೆ ಗ್ರಾ.ಪಂ. ಅಧ್ಯಕ್ಷ ಮಹಮ್ಮದ್ ಗೌಸ್, ದುಂಡಳ್ಳಿ ಗ್ರಾ.ಪಂ. ಅಧ್ಯಕ್ಷ ಸಿ.ಜೆ. ಗಿರೀಶ್, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಪಿ.ಕೆ. ಜಗದೀಶ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಪ್ರಾನ್ಸಿಸ್ ಡಿಸೋಜ, ಜಿ.ಪಂ. ಸದಸ್ಯೆ ಸರೋಜಮ್ಮ, ಕರವೇ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಿಬಿರದಲ್ಲಿ ಮಡಿಕೇರಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನೇತ್ರಶಾಸ್ತ್ರ ವಿಭಾಗದ ನೇತ್ರತಜ್ಞರಾದ ಡಾ. ಪುಟ್ಟರುದ್ರಯ್ಯ, ಡಾ.ಗೀತ, ಡಾ. ಕಾವ್ಯ ನೇತೃತ್ವದಲ್ಲಿ ಸಂಸ್ಥೆಯ 5 ಮಂದಿ ನೇತ್ರಶಾಸ್ತ್ರ ವಿಭಾಗದ ತಜ್ಞ ವೈದ್ಯರು ಕಣ್ಣಿನ ತಪಾಸಣೆ ಮತ್ತು ಕಣ್ಣಿನ ಶಸ್ತ್ರಚಿಕಿತ್ಸೆ ನೆರವೇರಿಸಿದರು. ಈ ಸಂದರ್ಭ ಆರೋಗ್ಯ ಇಲಾಖೆ ವತಿಯಿಂದ ರೋಗಿಗಳಿಗೆ ಉಚಿತ ಕನ್ನಡಕವನ್ನು ವಿತರಿಸಲಾಯಿತು.