ಸುಂಟಿಕೊಪ್ಪ, ಡಿ. 2: ಬೆಳೆಗಾರರು ಗುಣಮಟ್ಟದ ಕಾಫಿ ಉತ್ಪಾದನೆಯಿಂದ ಗ್ರೂಫ್ ಮಾರ್ಕೆಟಿಂಗ್ ಮಾಡುವ ಮೂಲಕ ಕಾಫಿ ಸರ್ಟಿಫಿಕೇಷನ್‍ನಿಂದ ಹೆಚ್ಚಿನ ಲಾಭ ಪಡೆದುಕೊಂಡು ಅರ್ಥಿಕ ಚೇತರಿಕೆ ಕಂಡುಕೊಳ್ಳ ಬಹುದು ಎಂದು ಕಾಫಿ ಮಂಡಳಿ ವಿಸ್ತರಣಾ ನಿರೀಕ್ಷಕ ಲಕ್ಷ್ಮಿಕಾಂತ್ ಹೇಳಿದರು.

ಸುಂಟಿಕೊಪ್ಪ ಗುಂಡುಗುಟ್ಟಿ ಸಹಕಾರ ಭವನದಲ್ಲಿ ಪುಷ್ಪಗಿರಿ ತೋಟಗಾರಿಕೆ ರೈತ ಉತ್ಪಾದನಾ ಸಂಸ್ಥೆ ವತಿಯಿಂದ ಕಾಫಿ ಬೆಳೆಗಾರರಿಗೆ ಆಯೋಜಿಸಲಾದ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಕಾಫಿ ಬೆಳೆಗಾರರು ಕಾಫಿ ದರ ಎಷ್ಟು ಎಂಬದರ ಬಗ್ಗೆ ಆಸಕ್ತಿ ತೋರಿ ಕಾಫಿಯನ್ನು ಮಾರಾಟ ಮಾಡಿ ಕೈ ತೊಳೆಯುತ್ತಾರೆ; ಆದರೆ ಕಾಫಿ ಮೌಲ್ಯವೇನು; ಅದು ಎಲ್ಲಿಗೆ ಹೋಗುತ್ತದೆ; ಗುಣಮಟ್ಟದ ಕಾಫಿಗೆ ಧಾರಣೆ ಹೇಗಿದೆ ಎಂಬದನ್ನು ಚಿಂತಿಸುವದಿಲ್ಲ ಎಂದು ಹೇಳಿದರು.

ವಸುಂಧರ ಸೇಲ್ ಕಾರ್ಪೋರೇಷನ್‍ನ ವ್ಯವಸ್ಥಾಪಕ ನಿರ್ದೇಶಕ ಜಿ.ಎನ್. ಪ್ರಸನ್ನಕುಮಾರ್ ಮಾತನಾಡಿ, ಸರ್ಟಿಫಿಕೇಷನ್ ಕಾಫಿಯಿಂದ ಬೆಳೆಗಾರರಿಗೆ ಲಾಭ ಸಿಗಲಿದೆ ಎಂದು ವಿವರಣೆ ನೀಡಿದರು. ಪುಷ್ಪಗಿರಿ ತೋಟಗಾರಿಕೆ ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷ ಮೇದುರ ಎಸ್. ದೇವಯ್ಯ ಉಪಾಧ್ಯಕ್ಷ ಪಿ.ಎಸ್. ರತೀಶ, ಬಾಳೆ ಹೊನ್ನೂರು ಕಾಫಿ ಮಂಡಳಿ ಯ ವಿಜ್ಞಾನಿ ಜೆ.ಎಸ್. ನಾಗರಾಜು, ಎಂ.ಡಿ. ಸತೀಶ, ಪುಷ್ಪಗಿರಿ ತೋಟಗಾರಿಕೆ ರೈತ ಉತ್ಪಾದಕರ ಸಂಘದ ನಿರ್ದೇಶಕರಾದ ಬಿಳಿಯರ ಜವಾಹರ್, ಕೆ.ಎಸ್. ಅಯ್ಯಪ್ಪ ಉಪಸ್ಥಿತರಿದ್ದರು.