ವೀರಾಜಪೇಟೆ, ಡಿ. 2: ಎಸ್.ಎನ್.ಡಿ.ಪಿ. ಯೋಗಂನ ಪುಲಿಯೇರಿ ಗ್ರಾಮ ಶಾಖೆಯ ಹದಿನೈದು ಮಂದಿಯ ಮತದಾನದ ಹಕ್ಕನ್ನು ಮೊಟುಕುಗೊಳಿಸಿರುವ ಕುರಿತು ಶಾಖೆಯ ವತಿಯಿಂದ ಕಾನೂನಾತ್ಮಕ ಹೋರಾಟ ಹಾಗೂ ಸಿದ್ದಾಪುರ ಕಚೇರಿ ಮುಂದೆ ಪ್ರತಿಭಟನೆ ನಡೆಸುವದಾಗಿ ಶಾಖೆಯ ಅಧ್ಯಕ್ಷ, ವಕೀಲ ಎನ್.ಎಸ್. ಪ್ರಶಾಂತ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಶಾಂತ್ ಅವರು; ತಾ.27-10-2018ರಂದು ಶಾಖೆಯ ಮಹಾಸಭೆ ನಡೆದಿದ್ದು ಆಡಳಿತ ಮಂಡಳಿಗೆ ಕಾನೂನು ಪ್ರಕಾರ ಹದಿನೈದು ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಆಯ್ಕೆಯಾದ ಎಲ್ಲರೂ ಸಂಚಾಲಕ ವಾಸು ಅವರ ಆಡಳಿತ ಮಂಡಳಿಯ ವಿರೋಧಿ ಬಣವೆಂದುಕೊಂಡು ವಾಸು ಅವರು ಈ ಆಯ್ಕೆಗೆ ಅಂಗೀಕಾರ ನೀಡುವದಿಲ್ಲವೆಂದು ಹೇಳಿ ಹೊರಟು ಹೋಗಿದ್ದರು. ಕೇಂದ್ರ ಸಮಿತಿ ಚುನಾವಣೆ ತಾ. 22-12-19 ರಂದು ನಡೆಯಲಿದ್ದು, ಮತದಾರರ ಕರಡು ಪ್ರತಿಯಲ್ಲಿ ಪುಲಿಯೇರಿ ಶಾಖೆಯ ಈ 15 ಮಂದಿಯ ಹೆಸರನ್ನು ನಮೂದಿಸಿಲ್ಲ. ಇದನ್ನು ಕಾನೂನಾತ್ಮಕವಾಗಿ ಪ್ರಶ್ನಿಸಲಾಗು ವದು ಅಲ್ಲದೆ ಸಿದ್ದಾಪುರದ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವದು ಎಂದರು.

ಶಾಖೆಯ ನಿರ್ದೇಶಕ ಎನ್.ಎಸ್. ಪ್ರಜಿತ್ ಮಾತನಾಡಿ ಸಂಚಾಲಕರು ಚುನಾವಣೆಗಾಗಿ ಹೊಸ ಶಾಖೆಗಳನ್ನು ಹುಟ್ಟು ಹಾಕುತ್ತಿದ್ದಾರೆ. ಸಂಚಾಲಕ ವಾಸು ಹಾಗೂ ಸಂಯೋಜಕ ಕಿಶೋರ್ ವಿರುದ್ಧ ಕೇರಳದ ಕೊಲ್ಲಂನಲ್ಲಿರುವ ಕೇಂದ್ರ ಸಮಿತಿಗೆ ಲಿಖಿತ ದೂರು ನೀಡಿರುವದಾಗಿ ತಿಳಿಸಿದರು.

ಗೋಷ್ಠಿಯಲ್ಲಿ ಶಾಖೆಯ ಉಪಾಧ್ಯಕ್ಷ ಎಂ.ಎಚ್.ನಿತೀಶ್, ಕೆ.ಜಿ.ಹರಿದಾಸ್ ಹಾಜರಿದ್ದರು.