ಕುಶಾಲನಗರ, ಡಿ. 1: ದುಬಾರೆಯಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಸಾಕುತ್ತಿರುವ ಆನೆಯೊಂದು ನಾಡಿಗೆ ಬಂದು ಭಾರೀ ಬೆಳೆಹಾನಿ ಮಾಡಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಆನೆಯನ್ನು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.ದುಬಾರೆಯ ಮೀಸಲು ಅರಣ್ಯ ಸಮೀಪ ಪ್ರಜ್ಞಾ ಚೌಟ ಎಂಬವರು ಕಳೆದ ಹಲವು ವರ್ಷಗಳಿಂದ ಆನೆಗಳನ್ನು ಸಾಕುತ್ತಿದ್ದು ಇವುಗಳಲ್ಲಿ ಧರ್ಮ ಎಂಬ ಗಂಡಾನೆಯೊಂದು ನದಿ ದಾಟಿ ಸುಂಟಿಕೊಪ್ಪ ವ್ಯಾಪ್ತಿಯ ಕಲ್ಲೂರು, ಹೆರೂರು ಹಾಗೂ ಕುಶಾಲನಗರ ಅರಣ್ಯ ವಲಯದ ರಸುಲ್‍ಪುರ, ಬಾಳುಗೋಡು ವ್ಯಾಪ್ತಿ ಯಲ್ಲಿ ಕಳೆದ ಒಂದು ತಿಂಗಳಿನಿಂದ ದಾಳಿ ಮಾಡುವದರೊಂದಿಗೆ ಬೆಳೆ ಹಾನಿ ಮಾಡಿದೆ ಎಂದು ಸ್ಥಳೀಯ ನಾಗರಿಕರು ಆರೋಪ ವ್ಯಕ್ತಪಡಿಸಿ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ನಾಕೂರು ಶಿರಂಗಾಲದ ಗ್ರಾ.ಪಂ. ಸದಸ್ಯ ಬಿಜು ಮತ್ತು ದೊಡ್ಡ ಬೆಟಗೇರಿಯ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದರು.ಈ ಹಿನ್ನೆಲೆಯಲ್ಲಿ ತಕ್ಷಣ ಕಾರ್ಯಾಚರಣೆ ಕೈಗೊಂಡ ಅರಣ್ಯ ಇಲಾಖೆ ಕುಶಾಲನಗರ ವಲಯ ಅರಣ್ಯ ಅಧಿಕಾರಿ ಅನನ್ಯಕುಮಾರ್, ಉಪ ವಲಯ ಅರಣ್ಯಾಧಿಕಾರಿ ಅನಿಲ್ ಡಿಸೋಜ, ಕನ್ನಂಡ ರಂಜನ್ ಮತ್ತು ಸಿಬ್ಬಂದಿ ಆನೆಯನ್ನು ಸಾಕಾನೆಗಳ ಸಹಾಯದಿಂದ ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದ್ದು ಆನೆಕಾಡು ಶಿಬಿರದಲ್ಲಿ ಇರಿಸಿದ್ದಾರೆ.

ಖಾಸಗಿ ಶಿಬಿರದಲ್ಲಿ ಒಟ್ಟು 7 ಆನೆಗಳನ್ನು

(ಮೊದಲ ಪುಟದಿಂದ) ಸಾಕುತ್ತಿದ್ದು ಇದರಲ್ಲಿ ಒಂದು ಆನೆ ತಪ್ಪಿಸಿಕೊಂಡು ನಾಡಿಗೆ ನುಗ್ಗಿದ್ದು ಈ ಅವಾಂತರದಿಂದ ಆಕ್ರೋಷಗೊಂಡ ಜನತೆ ಪ್ರತಿಭಟನೆಗೆ ಸಿದ್ದರಾಗಿದ್ದು, ಆನೆ ಮಾಲೀಕರ ಮೇಲೆ ಕಾನೂನು ಕ್ರಮಕೈಗೊಂಡು ನಷ್ಟ ಭರಿಸಿಕೊಡುವಂತೆ ಆಗ್ರಹಿಸಿರುವದಾಗಿ ದುಬಾರೆ ಸಾಕಾನೆ ಶಿಬಿರದ ಉಪ ವಲಯ ಅರಣ್ಯಾಧಿಕಾರಿ ಕನ್ನಂಡ ರಂಜನ್ ಮಾಹಿತಿ ನೀಡಿದ್ದಾರೆ. ಆನೆ ಮಾಲೀಕರಿಗೆ ಆನೆಗಳನ್ನು ಸಾಕಲು ಕಷ್ಟ ಉಂಟಾಗಿರುವ ಹಿನ್ನೆಲೆಯಲ್ಲಿ ಸಾಕಾನೆಯನ್ನು ಕಾಡಿಗೆ ಅಟ್ಟಿರುವ ಸಾಧ್ಯತೆ ಇರುವದಾಗಿ ಅರಣ್ಯಾಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಅರಣ್ಯ ಇಲಾಖೆ ಮಡಿಕೇರಿ ಉಪ ವಿಭಾಗ ಕಚೇರಿಯಿಂದ ಮಾಲೀಕರಿಗೆ ಹಲವು ಬಾರಿ ನೋಟಿಸ್ ನೀಡಿ ಕ್ರಮಕೈಗೊಳ್ಳುವಂತೆ ಸೂಚನೆ ನೀಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- ಚಂದ್ರಮೋಹನ್